ಮಡಿಕೇರಿ, ಆ. 13: ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಅಗತ್ಯವಿರುವ ಎಲ್ಲ ತಯಾರಿಗಳನ್ನು ನಡೆಸಲಾಗಿದ್ದು, ಯಾವದೇ ಲೋಪದೋಷಗಳಿಲ್ಲದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಂಡು ಅಡಚಣೆ, ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲು ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆಯ ನಿರ್ದೇಶನವಿದ್ದು, ಈ ಬಗ್ಗೆ ಎಲ್ಲಾ ಅಧಿಕಾರಿಗಳು ಅವರವರ ಕಾರ್ಯವ್ಯಾಪ್ತಿಯಲ್ಲಿ ಅವಶ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆ ಅಗತ್ಯ ಮುಂಜಾಗ್ರತೆÀ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಸದಾ ಜಾಗೃತರಾಗಿದ್ದು, ಸಮಯ-ಸಂದರ್ಭಕ್ಕೆ ಅನುಗುಣವಾಗಿ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಮಾತನಾಡಿ ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳಗಳು, ಪ್ರಮುಖ ಕಟ್ಟಡಗಳು, ವಾಣಿಜ್ಯ ಸ್ಥಳಗಳು, ನ್ಯಾಯಾಲಯ, ಜಿಲ್ಲಾ ಸಂಕೀರ್ಣ, ಸಿನಿಮಾ ಮಂದಿರ, ಬಸ್ ನಿಲ್ದಾಣ ಮತ್ತಿತರ ಬಹಳ ಜನ ಸಂಪರ್ಕವಿರುವ ಸ್ಥಳಗಳಲ್ಲಿ ಅಗತ್ಯ ಭದ್ರತೆ ಒದಗಿಸಲು ಕ್ರಮವಹಿಸಲಾಗಿದೆ ಎಂದು ರಾಜೇಂದ್ರ ಪ್ರಸಾದ್ ಅವರು ಹೇಳಿದರು. ಕೆಲಸದ ನಿಮಿತ್ತವಲ್ಲದೆ, ಪ್ರವಾಸಿಗರ ಸೋಗಿನಲ್ಲೂ ಸಹ ಅನ್ಯ ದೇಶೀಯರು ಜಿಲ್ಲೆಗೆ ಆಗಮಿಸುತ್ತಿದ್ದಾರೆ, ಇವರನ್ನು ಪತ್ತೆಹಚ್ಚಲು 40 ಮಂದಿ ಅಧಿಕಾರಿ, ಸಿಬ್ಬಂದಿಗಳ ತಂಡ ರಚಿಸಲಾಗಿದೆ. ಈ ತಂಡವು ಪ್ರತಿ ತಾಲೂಕಿನಲ್ಲಿ ಸಂಚರಿಸಿ ಮಾಹಿತಿ ಕಲೆಹಾಕಿ ನೀಡಲಿದೆ. ಈ ಮಾಹಿತಿಯಂತೆ ಇವರುಗಳ ರಾಷ್ಟ್ರೀಯತೆಯ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.

ಅಲ್ಲದೆ ಬಾಂಬ್ ಪತ್ತೆ ದಳ ಎಲ್ಲಾ ಪ್ರಮುಖ ಸ್ಥಳಗಳನ್ನು ಆಗಿಂದಾಗ್ಗೆ ಪರಿಶೀಲಿಸುತ್ತಿರುವದಾಗಿ ಮಾಹಿತಿ ನೀಡಿದರು. ಪ್ರಮುಖ ಪಟ್ಟಣಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು ತೀವ್ರ ನಿಗಾವಹಿಸಲಾಗುತ್ತದೆ. ಜಿಲ್ಲೆಯಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ, ಹೆಚ್ಚಿನ ಭದ್ರತೆಗಾಗಿ 3 ಕೆ.ಎಸ್.ಆರ್.ಪಿ. ತುಕಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮಗೆ ಅಧಿಕಾರವಿಲ್ಲದಿದ್ದರೂ ಸಹ ಯಾವದೇ ದಾಖಲೆಗಳನ್ನು ಹಾಗೂ ಪೂರ್ವಪರ ಪರಿಶೀಲಿಸದೆ ಅಕ್ರಮ ವಲಸೆಗಾರರಿಗೆ ವಾಸ ದೃಢೀಕರಣ ನೀಡಲು ಮುಂದಾಗಿರುವದು ಕಂಡುಬಂದಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿಯನ್ನೇ ನೇರ ಹೊಣೆಗಾರ ರನ್ನಾಗಿಸಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿ ಹಾಗೂ ಆರಕ್ಷಕ ಅಧೀಕ್ಷಕರು ಎಚ್ಚರಿಸಿದರು.

ಜಿಲ್ಲೆಯಲ್ಲಿರುವ ಅನಧಿಕೃತ ಹೋಂ-ಸ್ಟೇ ಗಳಿಂದಲೂ ಆಂತರಿಕ ಭದ್ರತೆಗೆ ದಕ್ಕೆಯಾಗಬಹುದು, ಈ ಬಗ್ಗೆ ಸರ್ಕಾರದ ನಿಯಮ ಹಾಗೂ ಪೊಲೀಸ್ ಇಲಾಖೆ ನೀಡಿರುವ ನಿರಾಕ್ಷೇಪಣಾ ಪತ್ರದಲ್ಲಿನ ಷರತ್ತು ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಆಗಮಿಸುವ ಪ್ರವಾಸಿಗರಿಗೆ ಈ ಹೋಂ-ಸ್ಟೇಗಳು ನೋಂದಣಿ ಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ಇರುವದಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೇ ಇದರ ಬಗ್ಗೆ ಪರಿಶೀಲಿಸಿ ಅಂತಹ ಅನಧಿಕೃತ ಹೋಂ-ಸ್ಟೇಗಳ ವಿರುದ್ದ ಮೊಕದ್ದಮೆ ದಾಖಲಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಾರ್ಯಕ್ರಮಗಳಿಗೆ ಬ್ಯಾನರ್, ಬಂಟಿಂಗ್ಸ್ ಅಳವಡಿಸುವ ಸಂದರ್ಭ ಆರಕ್ಷಕ ಇಲಾಖೆಯ ನಿರಾಕ್ಷೇಪಣೆ ಪಡೆಯದೇ ಅನುಮತಿ ನೀಡುತ್ತಿರುವ ದು ಸರಿಯಲ್ಲ, ಈಗಾಗಲೇ ಈ ರೀತಿ ಅನುಮತಿ ನೀಡಿದ ಪ್ರಸಂಗಗಳಲ್ಲಿ ಘರ್ಷಣೆ ನಡೆದಿರುವದು ತಿಳಿದಿದ್ದರೂ, ಸಹ ಎಚ್ಚೆತ್ತುಕೊಂಡಿರುವದಿಲ್ಲ ಎಂದು ಆರಕ್ಷಕ ಅಧೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಆರಕ್ಷಕ ಇಲಾಖೆಯ ನಿರಾಕ್ಷೇಪಣಾ ಪತ್ರ ಇಲ್ಲದೆ ಅನುಮತಿ ನೀಡಬಾರ ದೆಂದು ಎಲ್ಲಾ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಾವದೇ ಬ್ಯಾನರ್, ಬಂಟಿಂಗ್ ಅಳವಡಿಸುವದಿದ್ದಲ್ಲಿ ನಿರ್ದಿಷ್ಟ ಸಮಯ, ಸ್ಥಳ ನಮೂದಿಸಿ ಅನುಮತಿ ನೀಡತಕ್ಕದ್ದು ಮತ್ತು ಉಲ್ಲಂಘನೆ ಯಾದಲ್ಲಿ ಅಂತಹವರ ವಿರುದ್ದ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗಲು ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯ ಅಂತ್ಯದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಜಿಲ್ಲಾಧಿಕಾರಿಯವರು ಮಾತನಾಡುತ್ತಾ, ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲೇ ಹಾಜರಿದ್ದು ಆರಕ್ಷಕ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ, ಪರಸ್ಪರ ಸಹಕಾರದಿಂದ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲು ಎಲ್ಲಾ ರೀತಿಯ ಸಹಕಾರಕ್ಕೆ ಸೂಚಿ¸ Àಲಾಯಿತು. ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು ಮತ್ತಿತರರು ಇದ್ದರು.

ಸ್ವಾತಂತ್ರ್ಯೋತ್ಸವಕ್ಕೆ ಪೂರ್ವಭಾವಿ ಯಾಗಿ ಜಿಲ್ಲೆಯ ಹಲವೆಡೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಮುಖ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಾಂಬ್ ಪತ್ತೆದಳ, ಶ್ವಾನದಳದಿಂದ ತಪಾಸಣೆ ನಡೆಸಲಾಗುತ್ತಿದೆ.