ಮಡಿಕೇರಿ, ಜೂ. 18: ತಮ್ಮ ಸಂಪೂರ್ಣ ಆದಾಯವನ್ನು ಘೋಷಿಸದವರಿಗೆ, ಆದಾಯದ ಮೇಲೆ ಸಂಪೂರ್ಣ ಕರ ನೀಡದವರಿಗೆ ಮತ್ತು ಆದಾಯ ತೆರಿಗೆ ಇಲಾಖೆಗೆ ಘೋಷಿಸದಿರುವ ಆಸ್ತಿ- ಪಾಸ್ತಿ ಹೊಂದಿರುವವರಿಗೆ ತಾ. 1.6.2016ರಿಂದ ಜಾರಿಯಾಗಿರುವ ಸ್ವಯಂಪ್ರೇರಿತ ಆದಾಯ ಘೋಷಣೆ ಯೋಜನೆ 2016, ಆದಾಯ ತೆರಿಗೆ ಇಲಾಖೆಯಿಂದ ವಿಧಿಸಬಹುದಾದ ದಂಡ, ಶಿಕ್ಷೆ ಇತ್ಯಾದಿಗಳಿಂದ ಮುಕ್ತವಾಗಲು ಉತ್ತಮ ಅವಕಾಶವಿದೆ ಎಂದು ಮಡಿಕೇರಿಯ ಆದಾಯ ತೆರಿಗೆ ಅಧಿಕಾರಿ ನಾರಾಯಣ ನಾಯರ್ ತಿಳಿಸಿದರು.
ಆದಾಯ ತೆರಿಗೆ ಕಚೇರಿಯಲ್ಲಿ ನಡೆದ ಸ್ವಯಂ ಪ್ರೇರಿತ ಆದಾಯ ಘೋಷಣೆ ವ್ಯವಸ್ಥೆ-2016 ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಆದಾಯ ತೆರಿಗೆ ವ್ಯಾಪ್ತಿಯಲ್ಲಿದ್ದು, ಈವರೆಗೆ ತೆರಿಗೆ ರಿಟರ್ನ್ ಭರಿಸದವರು ಅಥವಾ ತೆರಿಗೆ ರಿಟರ್ನ್ ಸಲ್ಲಿಸಿದರೂ ತಮ್ಮ ಆದಾಯದ ಎಲ್ಲ ಮೂಲಗಳನ್ನು ಸರಿಯಾಗಿ ತಿಳಿಸದವರು ಅಥವಾ ಆದಾಯ ತೆರಿಗೆ ಪಾವತಿ ಮಾಡದ ಹಣದಿಂದ ಯಾವದೇ ಆಸ್ತಿ - ಪಾಸ್ತಿಯನ್ನು ಖರೀದಿಸಿದವರು ಆದಾಯ ತೆರಿಗೆ ಆಯುಕ್ತರಿಗೆ ಘೋಷಣೆ ಸಲ್ಲಿಸಬಹುದು. ತಾ. 30ರವರೆಗೆ ಈ ಘೋಷಣೆ ನೀಡಲು ಅವಕಾಶವಿರುತ್ತದೆ ಎಂದರು.
ಘೋಷಿತ ಆದಾಯದ ಮೇಲೆ ಅಥವಾ ಘೋಷಿತ ಆಸ್ತಿಯ 01.06.2016ರ ಬೆಲೆಯ ಮೇಲೆ ಶೇ.30ರ ಆದಾಯಕರ, ಶೇ. 7.5ರ ಸೆಸ್ಸ್ ಮತ್ತು ಶೇ. 7.5ರ ಕೃಷಿ ಕಲ್ಯಾಣ ಸೆಸ್ಸನ್ನು ಅಂದರೆ ಒಟ್ಟು ಘೋಷಣೆಯ ಶೇ. 45ರಷ್ಟನ್ನು ಸರಕಾರಕ್ಕೆ ಸಲ್ಲಿಸುವ ದೃಢೀಕರಣವನ್ನು ಘೋಷಣೆಯಲ್ಲಿ ನೀಡಬೇಕಿದೆ. ಅಂತಹ ಆದಾಯಕರ ಮತ್ತು ಸೆಸ್ಸ್‍ಗಳನ್ನು ನವೆಂಬರ್ 30 ರ ಒಳಗಾಗಿ ಪಾವತಿಸಬಹುದಾಗಿದೆ.
ಇಂತಹ ಘೋಷಕರನ್ನು ಆದಾಯಕರ ಕಾಯ್ದೆಯಡಿ ಇತರ ದಂಡ, ಶಿಕ್ಷೆಗಳಿಗೆ ಒಳಪಡಿಸುವ ಅವಕಾಶವಿರುವದಿಲ್ಲ. ಇಂತಹ ಒಂದು ಉತ್ತಮ ಅವಕಾಶವನ್ನು ಬಳಸಿಕೊಂಡು ತಮ್ಮ ನಿಜ ಆದಾಯ ಮತ್ತು ನಿಜ ಆಸ್ತಿಗಳನ್ನು ಘೋಷಿಸಿಕೊಳ್ಳಬಹುದು.
ತೆರಿಗೆದಾಯಕ ಆದಾಯವಿರುವವರ ಆದಾಯ ವಿವರಗಳು, ಕೆಲವು ವಿತ್ತೀಯ ವ್ಯವಹಾರಗಳ ವಿವರಗಳು, ಇತ್ಯಾದಿಗಳ ಮಾಹಿತಿಗಳು ಈಗಾಗಲೇ ಇಲಾಖೆಯಲ್ಲಿ ವಿವಿಧ ಮೂಲಗಳಿಂದ ಲಭ್ಯವಿದ್ದು, ಕರಚೋರರನ್ನು ಕಂಡು ಹಿಡಿಯುವದು ಇಲಾಖೆಗೆ ಮೊದಲಿಗಿಂತ ಸುಲಭದ ಕೆಲಸವಾಗಿದೆ ಎಂದು ತಿಳಿಸಿದರು.
ಈ ಘೋಷಣಾ ವ್ಯವಸ್ಥೆಯ ನಂತರ ಆದಾಯ ತೆರಿಗೆ ಇಲಾಖೆಯು ಕರಚೋರರ ಮೇಲೆ ಕಠಿಣವಾದ ಕ್ರಮಗಳನ್ನು ಜಾರಿ ಮಾಡುವ ನಿರೀಕ್ಷೆಯಿರುವದರಿಂದ ಈ ಯೋಜನೆಯಡಿ ಆದಾಯದ ವಿವರಗಳನ್ನು ನೀಡಿ ಅದರ ಶೇ. 45ರಷ್ಟು ತೆರಿಗೆ ರೂಪದಲ್ಲಿ ನೀಡಿ ಮನಃಶಾಂತಿಯನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ವಿವರಗಳಿಗೆ ಆದಾಯ ತೆರಿಗೆ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ನಾರಾಯಣ ನಾಯರ್ ಹೇಳಿದರು. ಆದಾಯ ತೆರಿಗೆ ಪರಿವೀಕ್ಷಕ ಪಿ. ಪದ್ಮಕುಮಾರ್, ಆದಾಯ ಘೋಷಣಾ ನಮೂನೆ, ಚಲನ್ ನಮೂನೆ ಮತ್ತು ಕಾಲಮಿತಿಗಳ ಬಗ್ಗೆ ಮಾಹಿತಿ ನೀಡಿದರು.
ನಗರದ ಚಾರ್ಟರ್ಡ್ ಅಕೌಂಟೆಂಟಿಗರು, ತೆರಿಗೆ ಸಲಹೆಗಾರರು ಮತ್ತು ಹಲವು ತೆರಿಗೆದಾರರು ಕಮ್ಮಟದಲ್ಲಿ ಭಾಗವಹಿಸಿದ್ದರು.