ಶ್ರೀಮಂಗಲ, ಜ. 13: ಜಿಲ್ಲೆಯಲ್ಲಿ ಪ್ರವಾಸೋದ್ಯಮದಿಂದ ಜಿಲ್ಲೆಯ ಪರಿಸರ ಹಾಗೂ ಸ್ವಚ್ಛತೆಗೆ ಧಕ್ಕೆಯಾಗುತ್ತಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಲ್ಲಿ ಸ್ಥಳೀಯರು ಸ್ವಚ್ಛತೆ ಹಾಗೂ ಪರಿಸರ ಕಾಳಜಿ ಬಗ್ಗೆ ತಿಳಿ ಹೇಳಬೇಕಾಗಿದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಭಿಪ್ರಾಯಪಟ್ಟರು.
ಕುಟ್ಟ ಕೊಡವ ಸಮಾಜದಲ್ಲಿ ನಾಲ್ಕೇರಿ ಹಾಗೂ ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಗೆ ಆಗಮಿಸುತ್ತಿರುವ ಅಸಂಖ್ಯಾತ ಪ್ರವಾಸಿಗರಿಂದ ರಜಾ ದಿನಗಳಲ್ಲಿ ವಾಹನ ಸಂಚರಿಸಲು ಹಾಗೂ ಇತರ ಪ್ರವಾಸಿ ಕೇಂದ್ರಗಳಲ್ಲಿ ನಡೆದಾಡಲು ಸ್ಥಳೀಯರಿಗೆ ಜಾಗವಿಲ್ಲದಾಗಿದೆ.
ಸ್ವಚ್ಛ ಭಾರತ ಅಭಿಯಾನ ಹಾಗೂ ಆಧುನಿಕ ಯುಗದಲ್ಲಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಪಣತೊಡಬೇಕು. ಕುಟ್ಟ, ನಾಲ್ಕೇರಿ ಹಾಗೂ ಕೆ. ಬಾಡಗ ಈ ಮೂರು ಗ್ರಾ.ಪಂ. ವ್ಯಾಪ್ತಿಗೆ ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ನಿಷೇಧಿಸಿ ಪರ್ಯಾಯವಾಗಿ 10 ಸಾವಿರ ಬಟ್ಟೆಯ ಬ್ಯಾಗ್ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಹಾಗೆಯೇ ತಲಾ 40 ಕಸದ ತೊಟ್ಟಿ ಹಾಗೂ ಜಾಗೃತಿ ಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಮೂರು ಗ್ರಾ.ಪಂ. ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ರಮಕ್ಕೆ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕೇಚಮಾಡ ವಾಸು ಉತ್ತಪ್ಪ ರೂ. 10 ಸಾವಿರ ದೇಣಿಗೆ ನೀಡಿದರು. ಕುಟ್ಟ ಪಟ್ಟಣದಲ್ಲಿ ಈ ಮೂರು ಗ್ರಾ.ಪಂ. ವ್ಯಾಪ್ತಿಯ ಸಂಘ-ಸಂಸ್ಥೆಗಳು, ಗ್ರಾ.ಪಂ. ಪೊಲೀಸ್ ಇಲಾಖೆ, ಸ್ವ ಸಹಾಯ ಸಂಘ, ಕೊಡವ ಸಮಾಜ ಪಾಲ್ಗೊಂಡು ಜಾಗೃತಿ ಮೆರವಣಿಗೆ ಮೂಲಕ ಅರಿವು ಮೂಡಿಸಿದರು.