ಮಡಿಕೇರಿ, ಜು. 25: ಸ್ವಚ್ಛ ಭಾರತವೆಂಬ ಪಟ್ಟದೊಂದಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಗ್ರಾ.ಪಂ. ಇಂದು ಸ್ವಚ್ಛ ಭಾರತ ಅಭಿಯಾನಕ್ಕೆ ಸವಾಲೆಸೆದಂತಿದೆ. ಗುಂಡಿಬಿದ್ದ ರಸ್ತೆಯ ಅವ್ಯವಸ್ಥೆ ನೋಡಿದಾಗ ದೇವರಿಗೆ ಪ್ರೀತಿ ಎನ್ನುವಂತಿದೆ ಇಲ್ಲಿನ ಪರಿಸ್ಥಿತಿ.

ಇಲ್ಲಿಗೆ ಸಮೀಪದ ಹಾಕತ್ತೂರು ಗ್ರಾ.ಪಂ. 2007ರಲ್ಲಿ ಸ್ವಚ್ಛ ಗ್ರಾಮದ ಹಿನ್ನೆಲೆಯಲ್ಲಿ ರಾಷ್ಟ್ರಪ್ರಶಸ್ತಿ ಹಾಗೂ 2011ರಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿತ್ತು. ಆದರೆ ಈಗಿನ ಪರಿಸ್ಥಿತಿ ಅದಕ್ಕೆ ಭಿನ್ನವಾಗಿದೆ. ಕಗ್ಗೋಡ್ಲು ಹಾಗೂ ಹಾಕತ್ತೂರಿನ ಗ್ರಾಮಸ್ಥರು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿರುವದು ಕಾಣಬಹುದು.

ಹಾಕತ್ತೂರು ಗ್ರಾ.ಪಂ. ಕಚೇರಿಯ ಸಮೀಪದಲ್ಲೇ ಇರುವ ಬಸ್ ತಂಗುದಾಣ ಕಸದ ಕೊಂಪೆಯಾಗಿ ಪರಿವರ್ತನೆಯಾಗಿದೆ. ಬಸ್ ತಂಗುದಾಣ ಅಶುಚಿತ್ವದಿಂದ ಕೂಡಿದೆ. ದಿನನಿತ್ಯ ನೂರಾರು ಮಂದಿ ಕಾರ್ಮಿಕರು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್‍ಗಾಗಿ ಕಾಯುತ್ತಿರುವ ಸಂದರ್ಭ ಮಳೆ, ಬಿಸಿಲಿನ ಸಂದರ್ಭ ಆಸರೆಗಾಗಿ ಬಸ್ ತಂಗುದಾಣವನ್ನು ಆಶ್ರಯಿಸುತ್ತಾರೆ. ಆದರೆ ಇದೀಗ ಬಸ್ ತಂಗುದಾಣ ಅಶುಚಿತ್ವದಿಂದ ಕೂಡಿರುವದು ಗ್ರಾ.ಪಂ. ಕಚೇರಿಗೆ ಆಗಮಿಸುವ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಕಾಣದಿರುವದು ದುರಂತವೇ ಎನ್ನಬಹುದು.

ಇನ್ನು ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪರಿಸ್ಥಿತಿ ಹೇಳತೀರದಾಗಿದೆ. ಹಾಕತ್ತೂರು ಭಗವತಿ ದೇವಸ್ಥಾನ ರಸ್ತೆ, ಕಗ್ಗೋಡ್ಲು, ಆನೆಕೊಲ್ಲಿ ರಸ್ತೆ, ಹುಲಿತಾಳ ರಸ್ತೆಗಳಲ್ಲಿ ಬೊಜ್ಜು ಇರುವ ವ್ಯಕ್ತಿಗಳನ್ನು ವಾಹನಗಳಲ್ಲಿ ಒಂದು ಬಾರಿ ಕರೆದುಕೊಂಡು ಸುತ್ತಾಡಿಸಿದರೆ ಹಿಂತಿರುಗಿ ಬರುವಾಗ ಬೊಜ್ಜೆಲ್ಲ ಕರಗಿ ತೆಳುವಾಗಿ ಬರುವದಂತೂ ಖಂಡಿತ ಎನ್ನುವಂತಿದೆ ರಸ್ತೆಯ ಪರಿಸ್ಥಿತಿ. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಪ್ರಶ್ನಿಸಿದರೆ ಅನುದಾನವಿಲ್ಲವೆಂದು ಹಾರಿಕೆಯ ಉತ್ತರ ನೀಡುತ್ತಾರೆ. ಅಲ್ಲದೆ ಗ್ರಾ.ಪಂ. ವ್ಯಾಪ್ತಿಯ ಹಲವು ಮಂದಿಗೆ ನಿವೇಶನ ಹಾಗೂ ವಸತಿ ಸೌಲಭ್ಯಗಳಿಲ್ಲದೆ ತೋಟದ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರುಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಗ್ರಾ.ಪಂ. ಯಾವದೇ ಕ್ರಮಕೈಗೊಳ್ಳುತ್ತಿಲ್ಲ. ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ವಸತಿ ರಹಿತರ ಆಗ್ರಹವಾಗಿದೆ.

ಗ್ರಾ.ಪಂ. ವ್ಯಾಪ್ತಿಯ ಕೃಷಿಕರು ಬಾವಿ ಸೌಲಭ್ಯವನ್ನು ಕಲ್ಪಿಸಿಕೊಡು ವಂತೆ ಆಗ್ರಹಿಸಿದ್ದಾರೆ. ಗ್ರಾ.ಪಂ. ಆಡಳಿತ ಮಂಡಳಿ ಮತದಾರರ ಸಮಸ್ಯೆಗಳ ಬಗ್ಗೆ ನಿಗಾವಹಿಸಿ ಸೌಲಭ್ಯಗಳನ್ನು ಕಲ್ಪಿಸುವಂತೆ ಹಲವು ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಚೇತನ್ ಕಗ್ಗೋಡ್ಲು