ವೀರಾಜಪೇಟೆ, ಆ. 14: ವೀರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ಸ್ವಚ್ಛ ಭಾರತ್ ಮಿಷನ್ನಡಿಯಲ್ಲಿ ಜನ ಜಾಗೃತಿ ಮೂಡಿಸುವ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಎರಡನೇ ದಿನವಾದ ಇಂದು 4 ರಿಂದ 7ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಗೆ ಪಟ್ಟಣ ಪಂಚಾಯಿತಿ ಅಭಿಯಂತರ ಎನ್.ಪಿ. ಹೇಮ್ಕುಮಾರ್ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೇಮ್ಕುಮಾರ್ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ದಕ್ಷತೆ ಹಾಗೂ ಪ್ರಾಮಾಣಿಕತೆಯೊಂದಿಗೆ ಕಲಿಕೆಗಿರುವ ಮಹತ್ವ, ಚಿತ್ರಕಲೆಯನ್ನು ರೂಪಿಸುವ ವಿಧಾನ, ಸ್ವಚ್ಛತೆ ಕುರಿತು ಯಾವ ರೀತಿಯಲ್ಲಿ ಜಾಗೃತರಾಗಬೇಕು, ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಪರಿಸರ ಮಾಲಿನ್ಯ ತಡೆಗಟ್ಟುವದರ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಸದಸ್ಯ ಎಸ್.ಎಚ್. ಮತೀನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಚಿನ್ ಕುಟ್ಟಯ್ಯ, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸದಸ್ಯ ಇ.ಸಿ. ಜೀವನ್ ಕಲಾವಿದ ಬಿ.ಎಸ್. ಸತೀಶ್ ಚಿತ್ರಕಲಾ ಸ್ಪರ್ಧೆಯ ಉಸ್ತುವಾರಿ ವಹಿಸಿದ್ದರೆ, ಎ.ಆರ್ ಮಂಜುನಾಥ್ ಪ್ರಬಂಧ ಸ್ಪರ್ಧೆಯ ಉಸ್ತುವಾರಿಯಲ್ಲಿದ್ದರು.