ಮೂರ್ನಾಡು, ಜ. 19: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟೆಕಾಡುವಿನ ಪೈಸಾರಿ ಜಾಗದಲ್ಲಿ ಜಿಲ್ಲಾಡಳಿತ ಗುರುತಿಸಲಾದ ಸ್ಮಶಾನ ಜಾಗಕ್ಕೆ ಪಾಲೇಮಾಡು ಪೈಸಾರಿಯ ಒಂದು ಗುಂಪಿನ ನಿವಾಸಿಗಳು ಬೇಲಿ ಹಾಕಿ ನಾಮಫಲಕ ಅಳವಡಿಸಿದರೆ, ಇನ್ನೊಂದು ಗುಂಪಿನ ನಿವಾಸಿಗಳು ಗ್ರಾಮ ಪಂಚಾಯಿತಿಯೆದುರು ಜಮಾಯಿಸಿ ಬೇಲಿ ಹಾಕುವದನ್ನು ನಿಲ್ಲಿಸುವಂತೆ ಮನವಿ ನೀಡಿದ ಘಟನೆ ಗುರುವಾರ ನಡೆಯಿತು.

ಹೊದ್ದೂರು ಗ್ರಾ.ಪಂ.ಗೆ ಒಳಪಟ್ಟ ಪಾಲೇಮಾಡು ಪೈಸಾರಿ ಜಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಸುಮಾರು 300 ನಿರಾಶ್ರಿತ ಕುಟುಂಬಗಳು ಶೆಡ್ ನಿರ್ಮಿಸಿಕೊಂಡು ವಾಸ ಮಾಡಿ ಕೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೊಡಗಿನಲ್ಲಿ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಸರ್ವೆ ನಂ. 167/1ಎ ರಲ್ಲಿನ ಪಾಲೇಮಾಡುವಿನ ಪೈಸಾರಿ ಖಾಲಿ ಇದ್ದ ಜಾಗದಲ್ಲಿ ಸ್ಥಳ ಗುರುತಿಸಿ ಸಂಸ್ಥೆಯ ಹೆಸರಿಗೆ 12.70 ಏಕರೆ ಜಾಗವನ್ನು ನೀಡಲಾಗಿದೆ. ಹತ್ತು ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳು 2 ಏಕರೆ ಜಾಗವನ್ನು ಗುರುತಿಸಿಕೊಂಡು ಬೇಲಿ ಹಾಕಿ ಶವ ಸಂಸ್ಕಾರ ನಡೆಸುತ್ತಿದ್ದರು. ಕ್ರಿಕೆಟ್ ಸ್ಟೇಡಿಯಂಗೆ ಮಂಜೂರಾದ ಜಾಗದ ಒಳಭಾಗದಲ್ಲಿ

(ಮೊದಲ ಪುಟದಿಂದ) ಸ್ಮಶಾನ ಇದ್ದು ಇದರಿಂದ ಸ್ಮಶಾನಕ್ಕಾಗಿ ನಿವಾಸಿಗಳಲ್ಲಿ ಎರಡು ಗುಂಪುಗಳು ರಚನೆಗೊಂಡು ವಿವಾದ ಶುರುವಾಗಿತ್ತು.

ಪಾಲೇಮಾಡು ಪೈಸಾರಿ ನಿವಾಸಿಗಳಲ್ಲಿ ಒಂದು ಗುಂಪಿನವರು ನಾವು ಶವಸಂಸ್ಕಾರ ನಡೆಸುತ್ತಿದ್ದ ಅದೇ ಸ್ಮಶಾನ ಜಾಗ ನಮಗೆ ನೀಡಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದು ಗುಂಪಿನ ನಿವಾಸಿಗಳು ನಮಗೆ ವಾಟೆಕಾಡುವಿ ನಲ್ಲಿ ಜಿಲ್ಲಾಡಳಿತ ಗುರುತಿಸಿದ ಸ್ಮಶಾನ ಜಾಗ ಸಾಕು ಎಂದು ಬೇಲಿ ಹಾಕಿ ನಾಮಫಲಕ ಅಳವಡಿಸಿದ್ದಾರೆ.

ನಂದಕುಮಾರ್ ಮುಖಂಡತ್ವ ದಲ್ಲಿ ರಚನೆಗೊಂಡ ಗುಂಪೊಂದು ವಾಟೆಕಾಡುವಿನ 167/1ಎ ಪೈಸಾರಿ ಜಾಗದಲ್ಲಿ ಸ್ಮಶಾನಕ್ಕೆಂದು ಜಿಲ್ಲಾಡಳಿತ ಗುರುತಿಸಲಾದ ನಾಲ್ಕು ಎಕರೆ ಸ್ಥಳದಲ್ಲಿ ಗುರುವಾರ ಪಾಲೇಮಾಡು ಪೈಸಾರಿ ಹಾಗೂ ವಾಟೆಕಾಡು ನಿವಾಸಿಗಳು ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾಮೋಹನ್, ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮನ ಮುರಳಿ ಕರುಂಬಮ್ಮಯ್ಯ ಅವರ ಉಪಸ್ಥಿತಿಯಲ್ಲಿ ಬೇಲಿ ನಿರ್ಮಿಸಿದರು. ನಾಲ್ಕು ಎಕರೆ ಸ್ಥಳದ ಸುತ್ತಲು ಸಿಮೆಂಟ್ ಕಂಬಗಳನ್ನು ಹಾಕಿ ಹೊದ್ದೂರು ಗ್ರಾ.ಪಂ. ಹಿಂದೂ ರುದ್ರ ಭೂಮಿ ಪಾಲೇಮಾಡು ಎಂಬ ನಾಮಫಲಕ ಅಳವಡಿಸಿದ್ದಾರೆ. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಪಾಡಿಯಮ್ಮನ ಮುರಳಿ ಕರುಂಬಮ್ಮಯ್ಯ ಮಾತನಾಡಿ ಜಿಲ್ಲಾಡಳಿತ ವಾಟೆಕಾಡು ಹಾಗೂ ಪಾಲೇಮಾಡುವಿನ ನಿವಾಸಿಗಳಿಗೆ ವಾಟೆಕಾಡುವಿನಲ್ಲಿ ನಾಲ್ಕು ಏಕರೆ ಸ್ಮಶಾನ ಜಾಗವನ್ನು ಗುರುತಿಸಿ ಮಂಜೂರು ಮಾಡಿದೆ. ಇದರಲ್ಲಿ ಎರಡು ಏಕರೆಯಲ್ಲಿ ಒಂದು ಏಕರೆ ವಾಟೆಕಾಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಒಂದು ಏಕರೆ ಇತರೆ ಪಂಗಡದವರಿಗೆ, ಮತ್ತು ಇನ್ನುಳಿದ ಎರಡು ಏಕರೆಯಲ್ಲಿ ಒಂದು ಏಕರೆ ಪಾಲೇಮಾಡುವಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಒಂದು ಏಕರೆ ಇತರೆ ವರ್ಗದವರಿಗೆ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆ: ಕರ್ನಾಟಕ ರಾಜ್ಯ ಬಹುಜನ ಶೋಷಿತ ಹಾಗೂ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ನೇತೃತ್ವದಲ್ಲಿ ಮೊದಲಿನಿಂದಲೂ ಬಳಸಿಕೊಂಡು ಬಂದ ಸ್ಮಶಾನ ಜಾಗ ನಮಗೆ ನೀಡಬೇಕು ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಯಿತು. ಪಾಲೇಮಾಡುವಿನ ಸ್ಮಶಾನ ಜಾಗಕ್ಕಾಗಿ ಹೋರಾಟ ನಡೆಸುತ್ತಿರುವ ಗುಂಪಿನ ನಿವಾಸಿಗಳು ಹೊದ್ದೂರು ಗ್ರಾಮ ಪಂಚಾಯಿತಿಗೆ ಜಮಾಯಿಸಿ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚ್ಚನ ದಿನೇಶ್ ಅವರಿಗೆ ಮನವಿ ನೀಡಿ, ಈವರೆಗೆ 40 ಮಂದಿಯ ಶವ ಸಂಸ್ಕಾರ ಸ್ಟೇಡಿಯಂಗೆ ನೀಡಿದ ಜಾಗದಲ್ಲಿ ಮಾಡಲಾಗಿದೆ. ನಮಗೆ ವಾಟೆಕಾಡುವಿನಲ್ಲಿ ಜಿಲ್ಲಾಡಳಿತ ಗುರುತಿಸಿರುವ ಸ್ಮಶಾನ ಜಾಗ ಬೇಡ ಎಂದರು.

ಮೊಣ್ಣಪ್ಪ ಮಾತನಾಡಿ, ಪಂಚಾಯಿತಿಗೆ ತಿಳಿಸದೆ ಜನಪ್ರತಿನಿಧಿಗಳು ವಾಟೆಕಾಡುವಿನಲ್ಲಿ ಗುರುತಿಸಲಾದ ಸ್ಥಳಕ್ಕೆ ಬೇಲಿ ಹಾಕಲು ಮುಂದಾಗಿದ್ದಾರೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳು ಇರುವಾಗ ಗ್ರಾ.ಪಂ.ಯ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿ ಸೋಮವಾರದಿಂದ ಸ್ಟೇಡಿಯಂ ಜಾಗದಲ್ಲಿರುವ ಸ್ಮಶಾನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವದಾಗಿ ಹೇಳಿದರು.

ಹೊದ್ದೂರು ಗ್ರಾ.ಪಂ. ಅಧ್ಯಕ್ಷ ಕುಲ್ಲಚ್ಚನ ದಿನೇಶ್ ಮನವಿ ಸ್ವೀಕರಿಸಿ ವಾಟೆಕಾಡುವಿನಲ್ಲಿ ಮಂಜೂರಾದ ಸ್ಮಶಾನ ಜಾಗಕ್ಕೆ ಬೇಲಿ ಹಾಕುವ ಕಾರ್ಯ ಪಂಚಾಯಿತಿ ಅರಿವಿಗೆ ಬಂದಿಲ್ಲ.

ಈ ಕುರಿತು ಗ್ರಾಮ ಪಂಚಾಯಿತಿಯಲ್ಲಿ ಯಾವದೇ ಸಭೆ ನಡೆದಿಲ್ಲ ಎಂದು ತಿಳಿಸಿ ಮನವಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕಳುಹಿಸುವದಾಗಿ ಹೇಳಿದರು.