ಕುಶಾಲನಗರ, ಆ. 26: ಗುಡ್ಡೆಹೊಸೂರು ಆಟೋ ಚಾಲಕ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಸ್ಥಳ ಮಹಜರು ಮಾಡಲು ಪೊಲೀಸರು ಗುಡ್ಡೆಹೊಸೂರು ಗ್ರಾಮಕ್ಕೆ ತೆರಳಿದಾಗ ಸ್ಥಳೀಯರಿಂದ ಭಾರೀ ಆಕ್ರೋಶ ವ್ಯಕ್ತಗೊಂಡು ಪೊಲೀಸರು ಸ್ಥಳದಿಂದ ಕಾಲ್ಕಿತ್ತ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಪ್ರವೀಣ್ ಪೂಜಾರಿ ಹತ್ಯೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕುಶಾಲನಗರ ಪೊಲೀಸ್ ಕಸ್ಟಡಿಗೆ ವಹಿಸಿದ್ದು, ಹೆಚ್ಚಿನ ತನಿಖೆಯ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ ಮತ್ತು ಸಿಬ್ಬಂದಿಗಳು ವಾಹನದಲ್ಲಿ ಇಬ್ಬರು ಆರೋಪಿಗಳನ್ನು ಕರೆ ತರುತ್ತಿದ್ದ ಮಾಹಿತಿ ತಿಳಿದ ಆಟೋ ಚಾಲಕರು, ಸ್ಥಳೀಯರು ಗುಂಪು ಸೇರಿದ ಸಂದರ್ಭ ಗೊಂದಲ ಸೃಷ್ಟಿಯಾಯಿತು. ಆರೋಪಿಯೊಬ್ಬ ಪೊಲೀಸ್ ವಾಹನದ ಒಳಗಿನಿಂದಲೇ ಸ್ಥಳೀಯ ಆಟೋ ಚಾಲಕನೊಬ್ಬನನ್ನು ದುರುಗುಟ್ಟಿ ನೋಡಿದ ಸಂದರ್ಭ ಘರ್ಷಣೆಯ ಸಂಭವ ಕಂಡುಬಂದು ಪರಿಸ್ಥಿತಿ ಸೂಕ್ಷ್ಮತೆ ಅರಿತ ವೃತ್ತ ನಿರೀಕ್ಷಕರು ತಕ್ಷಣ ಸ್ಥಳದಿಂದ ಆರೋಪಿಗಳೊಂದಿಗೆ ಸಿದ್ದಾಪುರ ರಸ್ತೆ ಕಡೆಗೆ ತೆರಳಿದರು.
ಘಟನಾ ಸ್ಥಳದಲ್ಲಿ ನೂರಾರು ಜನರ ಗುಂಪು ಆಕ್ರೋಶದೊಂದಿಗೆ ಆರೋಪಿಗಳಿಗೆ ಹಿಡಿಶಾಪ ಹಾಕುತ್ತಿದ್ದುದು ಕೇಳಿಬಂತು.