ಸುಂಟಿಕೊಪ್ಪ, ಮೇ 24: ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಆಯೋಜಿತಗೊಂಡಿರುವ ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸ್ಟೋನ್ ಸಿಟಿ ಕ್ಯಾಲಿಕಟ್ ತಂಡವು ಸೆಮಿಫೈನಲ್ ಹಂತಕ್ಕೆ, ಎಚ್ ಡಬ್ಲ್ಯೂಎ ಎಫ್.ಸಿ. ತಲಾಪಾಡಿ ಮಂಗಳೂರು ತಂಡವು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ಬ್ರದರ್ಸ್ ಎಫ್.ಸಿ. ಮೊಗ್ರಲ್ ಕುಂಬ್ಳೆ ಹಾಗೂ ಸ್ಟೋನ್ ಸಿಟಿ ಕ್ಯಾಲಿಕಟ್ ತಂಡಗಳ ನಡುವಿನ ಪಂದ್ಯಾವಳಿ ರೋಮಂಚನಕಾರಿ ರಸದೌತಣವನ್ನು ಪ್ರೇಕ್ಷಕರಿಗೆ ನೀಡಿತು. 2 ತಂಡಗಳಿಗೂ ಹತ್ತಾರು ಅವಕಾಶಗಳು ದೊರೆತರೂ ಗೋಲುಗಳಿಸುವಲ್ಲಿ ವಿಫಲಗೊಂಡ ಹಿನ್ನೆಲೆ ಟ್ರೈಬ್ರೇಕರ್ ಅಳವಡಿಸಲಾಗಿ 10-9 ಗೋಲುಗಳಿಂದ ಸ್ಟೋನ್ ಸಿಟಿ ಕ್ಯಾಲಿಕಟ್ ತಂಡವು ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿತು.

ಎರಡನೇ ಪಂದ್ಯಾವಳಿಯು ಬೆನಕ ಎಫ್.ಸಿ. ಮಂಡ್ಯ ಹಾಗೂ ಎಚ್ ಡಬ್ಲ್ಯೂಎ ಎಫ್.ಸಿ. ತಲಾಪಾಡಿ ಮಂಗಳೂರು ತಂಡಗಳ ನಡುವೆ ನಡೆದು ಮೊದಲಾರ್ಧದಲ್ಲಿ ಸಮಬಲದ ಪ್ರದರ್ಶನವನ್ನು ಎರಡು ತಂಡಗಳು ಪ್ರದರ್ಶಿಸಿ ದ್ವಿತೀಯಾರ್ಧದಲ್ಲಿ ಎಚ್ ಡಬ್ಲ್ಯೂಎ ಎಫ್.ಸಿ. ತಲಾಪಾಡಿ ತಂಡವು ಗೋಲುಗಳಿಸುವ ಮೂಲಕ ಮಂಡ್ಯ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು.