ಮಡಿಕೇರಿ, ಡಿ. 31: ಪಾಲೆಮಾಡಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ 12.70 ಎಕರೆ ಜಾಗವನ್ನು ಸರಕಾರ ಮಂಜೂರು ಮಾಡಿದೆ. ಸಂಸ್ಥೆಯ ಹೆಸರಿಗೆ ಆರ್.ಟಿ.ಸಿ. ದೊರೆತಿದೆ. ಸಂಸ್ಥೆಯ ವತಿಯಿಂದ ಜಾಗಕ್ಕೆ ಭದ್ರ ಬೇಲಿ ನಿರ್ಮಿಸಲಾಗಿದೆ. ಆದರೆ ಈ ಜಾಗದಲ್ಲಿ ತಮ್ಮ ಸ್ಮಶಾನ ಒಳಗೊಂಡಿದೆ ಎಂದು ಕೂಗೆಬ್ಬಿಸಿದ ಕೆಲವು ಗುಡಿಸಲು ನಿವಾಸಿಗಳು ತಿಮ್ಮಪ್ಪ ಎಂಬ ವ್ಯಕ್ತಿಯ ಶವವನ್ನು ಎದುರಿಟ್ಟು, ಪ್ರತಿಭಟಿಸಿ, ಅಧಿಕಾರಿಗಳನ್ನು ಎಚ್ಚರಿಸಿ ಅದೇ ಜಾಗದಲ್ಲಿ ಶವ ಸಂಸ್ಕಾರ ನಡೆಸಿದ ಘಟನೆ ಕಳೆದ ವಾರ ನಡೆಯಿತು. ಆದರೆ ಈ ಪ್ರಕರಣವನ್ನು ಅತಿಕ್ರಮ ಪ್ರವೇಶ ಎಂದು ಹೇಳಿರುವ ರಾಜ್ಯ ಕ್ರಿಕೆಟ್ ಸಂಸ್ಥೆಯ ಜಿಲ್ಲಾ ಸಂಚಾಲಕ ಪೃಥ್ವಿ ದೇವಯ್ಯ ಅವರು, ನಿಗಧಿತ ಜಾಗದ ಒಂದು ಇಂಚು ಕೂಡಾ ಇತರರಿಗೆ ನೀಡಲಾಗುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವರ ಭರವಸೆ ಈ ವಿಚಾರವಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ಸಿ.ಇ.ಒ. ಎಂ.ಬಿ. ಗಣೇಶ್, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ದಾಖಲೆ ನೀಡಿದ್ದಾರೆ. ನಿಗಧಿತ ಸ್ಥಳ ಕ್ರಿಕೆಟ್ ಸಂಸ್ಥೆಗೆ ಸೇರಿರುವದಾಗಿ ಒಪ್ಪಿದ ಅವರು ಅದೇ ಜಾಗದಲ್ಲಿ ಸ್ಟೇಡಿಯಂ ಕಾರ್ಯ ಮುಂದುವರೆಸುವಂತೆ ಹೇಳಿದ್ದಾರೆ. ಗುಡಿಸಲು ನಿವಾಸಿಗಳಿಗೆ ಸರ್ವೆ ನಂಬರ್ 167/1ಂ ಯಲ್ಲಿ ಅರವತ್ತು ವರುಷದಿಂದ ಎರಡು ಎಕರೆ ಸ್ಮಶಾನ ಜಾಗವಿದ್ದು, ಅದರೊಂದಿಗೆ ಮತ್ತೊಂದು ಎಕರೆ ಜಾಗ ನೀಡುವ ಭರವಸೆ ನೀಡಿದುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ಪೃಥ್ವಿ ದೇವಯ್ಯ ಹೇಳಿದ್ದಾರೆ. ಈ ಜಾಗಗಳ ನಕ್ಷೆಯೂ ತಯಾರಾಗಿ ಸಿಕ್ಕಿದೆ ಎಂದಿದ್ದಾರೆ. ತಾವು ಈ ಕುರಿತು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಬಿ.ಕೆ. ಸಿಂಗ್ ಅವರನ್ನು ಭೇಟಿಯಾಗಿದ್ದು, ಜಾಗಕ್ಕೆ ರಕ್ಷಣೆಯ ಭರವಸೆ ನೀಡಿದ್ದಾರೆ ಎಂದು ಪೃಥ್ವಿ ದೇವಯ್ಯ ಹೇಳಿದ್ದಾರೆ. ಅತಿಕ್ರಮಣ ಘಟನೆಗಳು ಮತ್ತೆ ಜರುಗಿದರೆ ಪೊಲೀಸರ ಗಮನಕ್ಕೆ ತರಲು ಹೇಳಿದ್ದಾರೆ ಎಂದಿದ್ದಾರೆ. ಸ್ಟೇಡಿಯಂ ನಿರ್ಮಾಣಕ್ಕೆ ಊರಿನ ಎಲ್ಲಾ ಮಂದಿ ಸಹಕರಿಸುತ್ತಿದ್ದು, ಕೇವಲ ನಾಲ್ಕು ಮಂದಿ ಗುಡಿಸಲು ನಿವಾಸಿಗಳನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.
ನಲವತ್ತು ಕೋಟಿ ರೂಪಾಯಿ ವೆಚ್ಚದ ಸ್ಟೇಡಿಯಂ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದ್ದು, ಟೆಂಡರ್ಗಳನ್ನು ಆಹ್ವಾನಿಸಲಾಗಿದೆ. ಇಲ್ಲಿ ಸುಸಜ್ಜಿತ ಒಳಾಂಗಣ ಕ್ರಿಕೆಟ್ ಸ್ಟೇಡಿಯಂ ಟೆನಿಸ್ ಕೋರ್ಟ್, ಶಟಲ್ ಕೋರ್ಟ್, ಬಿಲಿಯಡ್ರ್ಸ್, ಈಜುಕೊಳ, ಮಲ್ಟಿ ಜಿಂ, ಬಾಸ್ಕೆಟ್ ಬಾಲ್ ಸ್ಕ್ವಾಶ್ಕೋರ್ಟ್, ಫಲಾಹಾರ ಮಂದಿರ ಹಾಗೂ ಬಾರ್ ಬರಲಿದೆ. ಸುಸಜ್ಜಿತ ರಾಷ್ಟ್ರೀಯ ಸ್ಟೇಡಿಯಂ ಆಗಿ ಹೊರಹೊಮ್ಮಲಿದ್ದು, ದೇಶ- ವಿದೇಶಗಳ ಆಟಗಾರರನ್ನು ಆಕರ್ಷಿಸಲಿದ್ದು, ಕೊಡಗಿನ ಆಟಗಾರರಿಗೂ ತರಬೇತಿ ಸೌಲಭ್ಯ ಒದಗಲಿದೆ.
-ಇಟರ್ನಲ್.