ಸೋಮವಾರಪೇಟೆ,ನ.8: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಾಡಿಗಳ ಅರಣ್ಯ ಹಕ್ಕುಗಳ ಸಮಿತಿ ಸಭೆ ಯಡವನಾಡು ಗಿರಿಜನ ಸಮುದಾಯ ಭವನದಲ್ಲಿ, ಐಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಪಿ. ಶೋಭಾ ಅಧ್ಯಕ್ಷತೆಯಲ್ಲಿ ನಡೆದು, ಹಾಡಿ ನಿವಾಸಿಗಳಿಗೆ ಮೂಲ ಸೌಕರ್ಯ ನೀಡದ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಕಳೆದ ಹಲವು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ವಾಸವಿದ್ದವರಿಗೆ ಸರ್ಕಾರ ಭೂಮಿಯ ಹಕ್ಕುಪತ್ರ ನೀಡುವಂತೆ ಆದೇಶ ನೀಡಿದ್ದರೂ ಇಲ್ಲಿಯವರೆಗೆ ಹಕ್ಕುಪತ್ರ ನೀಡದ ಬಗ್ಗೆ ಹಾಡಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸಭೆಗೆ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದು, ಪ್ರಮುಖ ಅರಣ್ಯ ಇಲಾಖೆಯ ಅಧಿಕಾರಿಗಳು ಗೈರಾಗಿರುವದರ ಬಗ್ಗೆ ಆಕ್ಷೇಪಿಸಿದರು.

ಕೂಡಲೇ ಹಾಡಿಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಕೃಷಿ ಚಟುವಟಿಕೆ ನಡೆಸುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಬೇಕು ಎಂದು ಹಾಡಿಯ ನಿವಾಸಿ ರವಿ ಒತ್ತಾಯಿಸಿದರು.

ಸಭೆಯಲ್ಲಿ ಐಗೂರು ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಎಂ. ರಮೇಶ್, ಕೆ.ಪಿ ದಿನೇಶ್, ಗೋಪಾಲ್, ಮಹೇಶ್ವರಿ, ಮಂಜುಳ, ಪಾಂಚಾಲಿ, ಸವಿತಾ, ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ಡಿ.ಎಸ್. ಲಿಂಗರಾಜು, ಪರಿಶಿಷ್ಟ ಜಾತಿ ಜಿಲ್ಲಾ ಸಮಿತಿಯ ಜೆ.ಪಿ. ರಾಜು, ಅರಣ್ಯ ಸಮಿತಿ ಸದಸ್ಯ ಎಂ.ಎನ್. ಅಶೋಕ ಉಪಸ್ಥಿತರಿದ್ದರು. ರಂಗಾಡಿ, ಕೂಪಾಡಿ, ಸೂಳೆಬಾವಿ, ಸಜ್ಜಳ್ಳಿ ಹಾಗೂ ಕಮ್ತಳ್ಳಿ ಹಾಡಿಗಳ ನಿವಾಸಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.