ಸೋಮವಾರಪೇಟೆ,ಆ.7: ನಾಗರ ಪಂಚಮಿಯನ್ನು ಸೋಮವಾರಪೇಟೆ ಯಾದ್ಯಂತ ವಿವಿಧ ಭಾಗಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ನಾಗಬನಗಳಿಗೆ ತೆರಳಿದ ಭಕ್ತರು ದಿನದ ಅಂಗವಾಗಿ ವಿಶೇಷ ಪೂಜೆಗಳನ್ನು ನೆರವೇರಿಸಿದರು.

ನಗರದ ಸೋಮೇಶ್ವರ ದೇವಾಲಯ, ಆನೆಕೆರೆ ನಾಗಬನ, ಮುತ್ತಪ್ಪ ಹಾಗೂ ಅಯ್ಯಪ್ಪ ದೇವಾಲಯ, ಚಂದನಮಕ್ಕಿ ಸೇರಿದಂತೆ ಇತರ ಭಾಗಗಳಲ್ಲಿ ನಾಗದೇವರ ಆರಾಧನೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಂತೆ ಕೊಡಗು ಜಿಲ್ಲೆಯಲ್ಲೂ ಸಹ ನಾಗಾರಾಧನೆಯನ್ನು ಮಾಡುವ ಕುಟುಂಬಗಳು ಬಹಳಷ್ಟಿದ್ದು, ನಾಗರ ಪಂಚಮಿ ಹಬ್ಬದ ದಿನದಂದು ವೃತಾಚರಣೆಯೊಂದಿಗೆ ಬೆಳಿಗ್ಗೆ ದೇವಸ್ಥಾನಗಳಿಗೆ ತೆರಳಿ ಪ್ರತಿಷ್ಠಾಪಿತ ನಾಗದೈವಗಳ ವಿಗ್ರಹಗಳಿಗೆ ಹಾಲೆರೆದು ಪೂಜಿಸಿದರು.

ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ನಾಗರಾಜ ಹಾಗೂ ನಾಗಕನ್ಯೆ ಮೂರ್ತಿಗಳಿಗೆ ವಿಶೇಷ ಪೂಜೆಗಳು ದೇವಾಲಯದ ಪ್ರಧಾನ ಅರ್ಚಕ ಶ್ರೀ ಮಣಿಕಂಠನ್ ನಂಬೂದರಿಯವರ ಪೌರೋಹಿತ್ಯದಲ್ಲಿ ನಡೆಯಿತು. ನೂರಾರು ಕುಟುಂಬಗಳು ದೇವಾಲಯಕ್ಕೆ ಆಗಮಿಸಿ, ನಾಗದೈವಗಳಿಗೆ ವಿವಿಧ ಸೇವೆಗಳನ್ನು ಅರ್ಪಿಸಿದರು. ದೇವಾಲಯದಲ್ಲಿ ಆಶ್ಲೇಷ ಪೂಜೆ, ನಾಗತಂಬಿಲ, ಅರಿಶಿಣ, ಸಿಯಾಳ ಅಭಿಷೇಕ ಹಾಗೂ ಸುಮಾರು 35 ಲೀಟರ್‍ಗೂ ಅಧಿಕ ಕ್ಷೀರಾಭಿಷೇಕ ನಡೆಯಿತು.

ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಿತು. ಆನೆಕೆರೆಯ ಬಳಿಯಲ್ಲಿನ ನಾಗಬನದಲ್ಲಿ ಹಲವು ಕುಟುಂಬಗಳು ತಂಡೋಪತಂಡವಾಗಿ ನಾಗನ ವಿಗ್ರಹಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.