ಸೋಮವಾರಪೇಟೆ,ಆ.12: ವರಮಹಾಲಕ್ಷ್ಮೀ ಹಬ್ಬವನ್ನು ಪಟ್ಟಣದಲ್ಲಿ ಇಂದು ಶ್ರದ್ಧಾಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ಬರುವ ವರಮಹಾಲಕ್ಷ್ಮೀ ಹಬ್ಬವನ್ನು ಪಟ್ಟಣದ ಮನೆಗಳಲ್ಲಿ ಮಹಿಳೆಯರು ವಿಶೇಷವಾಗಿ ಆಚರಿಸಿದರು. ಬೆಳಗ್ಗಿನಿಂದಲೇ ತಳಿರು ತೋರಣಗಳಿಂದ ಮನೆ ಹಾಗೂ ದೇವರ ಮನೆಯನ್ನು ಅಲಂಕರಿಸಿ ದೇವಿಯ ಕಳಸವಿಟ್ಟು ಅರ್ಚನೆ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿ ವರಮಹಾಲಕ್ಷ್ಮೀ ಕಟಾಕ್ಷ ಕಥೆಯನ್ನು ಪಠಿಸಿ,ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಬಳೆ, ತಾಂಬೂಲ ನೀಡಿದರು.

ಪಟ್ಟಣದ ಸೋಮೇಶ್ವರ, ಬಸವೇಶ್ವರ, ಗಣಪತಿ ದೇವಾಲಯ ಅಯ್ಯಪ್ಪ ದೇವಾಲಯದ ಆವರಣ ದಲ್ಲಿರುವ ಭುವನೇಶ್ವರಿ ದೇವಾಲಯ, ಗಾಂಧೀ ನಗರದ ಮಾರಿಯಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.