ಸೋಮವಾರಪೇಟೆ, ನ. 3: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರ ಶಾಸಕರ ಅನುದಾನದಡಿ ಇಲ್ಲಿನ ಜೇಸೀ ವೇದಿಕೆ ಸಮೀಪ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಶಾಸಕ ರಂಜನ್ ಹಾಗೂ ಪ್ರಧಾನಿ ಮೋದಿ ಅವರ ಭಾವಚಿತ್ರ ಅಳವಡಿಸಿರುವ ಕ್ರಮಕ್ಕೆ ಕ್ಯಾತೆ ತೆಗೆದ ಕಾಂಗ್ರೆಸ್, ಪಟ್ಟು ಬಿಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಅಳವಡಿಸುವಲ್ಲಿ ಯಶಸ್ವಿಯಾದ ಬೆನ್ನಲ್ಲೇ, ಇದೀಗ ಬಿಜೆಪಿ ಕಾರ್ಯಕರ್ತರು 108 ಆ್ಯಂಬ್ಯುಲೆನ್ಸ್‍ಗಳಿಗೆ ಮೋದಿ ಚಿತ್ರ ಅಳವಡಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ರಂಜನ್ ಹಾಗೂ ಮೋದಿ ಅವರ ಭಾವಚಿತ್ರ ಅಳ ವಡಿಸಿದ್ದು, ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಭಾವಚಿತ್ರ ಅಳವಡಿಸಿಲ್ಲ ಎಂದು ಪ.ಪಂ. ಸದಸ್ಯರಾದ ಆದಂ ಹಾಗೂ ಶೀಲಾ ಡಿಸೋಜ ಅವರುಗಳು ರಾಜ್ಯ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ನೀಡಿದ್ದರು.

ಸಚಿವರು ತಕ್ಷಣ ಮುಖ್ಯಮಂತ್ರಿ ಗಳ ಭಾವಚಿತ್ರ ಅಳವಡಿಸುವಂತೆ ಪಂಚಾಯಿತಿ ಅಭಿಯಂತರ ಹಾಗೂ ಮುಖ್ಯಾಧಿಕಾರಿಗೆ ಸೂಚಿಸಿದ್ದರು. ಈ ಮಧ್ಯೆ ಒಂದು ವೇಳೆ ನೀರಿನ ಘಟಕಕ್ಕೆ ಸಿದ್ದರಾಮಯ್ಯ ಅವರ ಭಾವಚಿತ್ರ ಅಳವಡಿಸಿದರೆ ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಎಲ್ಲಾ ಯೋಜನೆಗಳ ಪ್ರಚಾರ ಫಲಕಗಳಿಗೂ ಮೋದಿ ಅವರ ಚಿತ್ರ ಅಂಟಿಸುವದಾಗಿ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು.

ಈ ಬೆಳವಣಿಗೆಗಳ ನಡುವೆಯೇ ನೀರಿನ ಘಟಕಕ್ಕೆ ಮುಖ್ಯಮಂತ್ರಿಗಳ ಭಾವಚಿತ್ರ ಅಳವಡಿಸಲಾಗಿತ್ತು. ಇದರಿಂದ ಕಾಂಗ್ರೆಸ್ ಪಕ್ಷದವರು ಹಿರಿಹಿರಿ ಹಿಗ್ಗಿದ್ದರು. ಅಂದು ನೀಡಿದ ಎಚ್ಚರಿಕೆಯನ್ನು ಇದೀಗ ಕಾರ್ಯರೂಪಕ್ಕೆ ತರುತ್ತಿರುವ ಭಾರತೀಯ ಜನತಾ ಪಾರ್ಟಿಯವರು, ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ನೀಡಿರುವ 108 ಆ್ಯಂಬ್ಯುಲೆನ್ಸ್ ಸೇರಿದಂತೆ ಶಾಸಕರ ಕಚೇರಿ ಎದುರು, ತಾಲೂಕು ಪಂಚಾಯಿತಿ ಕಚೇರಿ ಎದುರು ಕೇಂದ್ರ ಸರ್ಕಾರದ ಸಹಯೋಗದಲ್ಲಿ ರಾಜ್ಯದಲ್ಲಿ ಜಾರಿಗೆ ತರುತ್ತಿರುವ ಯೋಜನೆಗಳ ಪ್ರಚಾರ ಫಲಕಗಳಿಗೆ ಪ್ರಧಾನಿ ಮೋದಿ ಅವರ ಭಾವಚಿತ್ರ ಅಂಟಿಸಿದರು.

ಈ ಬಗ್ಗೆ ಮಾತನಾಡಿದ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮನುಕುಮಾರ್ ರೈ, ಶಾಸಕರ ನಿಧಿಯಡಿ ನಿರ್ಮಿಸಿದ ನೀರಿನ ಘಟಕಕ್ಕೆ ಮೋದಿ ಹಾಗೂ ರಂಜನ್ ಅವರ ಭಾವಚಿತ್ರ ಅಳವಡಿಸಿರುವದನ್ನು ವಿವಾದವನ್ನಾಗಿಸಿದ ಕಾಂಗ್ರೆಸ್, ಕೇಂದ್ರದ ಅನುದಾನದಲ್ಲಿ ರಾಜ್ಯದಲ್ಲಿ ಜಾರಿಗೊಳ್ಳುತ್ತಿರುವ ಯೋಜನೆಗಳ ಫಲಕದಲ್ಲಿ ಮೋದಿ ಅವರ ಭಾವಚಿತ್ರ ಅಳವಡಿಸುವದನ್ನು ಮರೆತಿದ್ದಾರೆ.

108 ಆ್ಯಂಬ್ಯುಲೆನ್ಸ್ ಸೇವೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಅಳವಡಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಶೇ.20ರಷ್ಟಿದ್ದರೆ, ಕೇಂದ್ರ ಶೇ 80ರಷ್ಟು ಅನುದಾನ ನೀಡುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅನ್ನಭಾಗ್ಯ, ಬೆಳಕು ಯೋಜನೆಗಳಲ್ಲೂ ಕೇಂದ್ರದ ಅನುದಾನ ಇದೆ. ಈ ಹಿನ್ನೆಲೆ ಎಲ್ಲಾ ಫಲಕಗಳಿಗೆ ಮೋದಿ ಅವರ ಭಾವಚಿತ್ರ ಅಳವಡಿಸುತ್ತಿರುವದಾಗಿ ತಿಳಿಸಿದರು. ಈ ಸಂದರ್ಭ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ಆರ್. ಸೋಮೇಶ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಉಪಾಧ್ಯಕ್ಷ ಕೊಮಾರಿ ಸತೀಶ್, ನಗರ ಯುವ ಮೋರ್ಚಾ ಅಧ್ಯಕ್ಷ ಶರತ್‍ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.