ಸೋಮವಾರಪೇಟೆ,ಸೆ.15: ನಗರ ಸೇರಿದಂತೆ ಇತರ ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಅದ್ಧೂರಿಯಾಗಿ ನೆರವೇರಿತು. ಅಲಂಕೃತ ಮಂಟಪಗಳಲ್ಲಿ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ವಾದ್ಯಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಿ ಇಲ್ಲಿನ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶ್ರೀ ಗೌರಿ-ಗಣೇಶೋತ್ಸವ ಸಮಿತಿ ವತಿಯಿಂದ ಕುಳ್ಳಿರಿಸಿದ್ದ ಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವದ ಅಂಗವಾಗಿ ಹೋಮ ಸೇರಿದಂತೆ ವಿವಿಧ ಅರ್ಚನೆ, ಪೂಜೆಗಳು ನಡೆದವು.ಕಳೆದ ಹತ್ತು ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿಗಳಿಗೆ ಪ್ರತಿನಿತ್ಯ ವಿಶೇಷ ಪೂಜೆಗಳು ನಡೆಯುತ್ತಿತ್ತು. ಪ್ರತಿದಿನ ಸಂಜೆ ವಿಶೇಷ ಪೂಜೆಗಳ ಪ್ರಾಯೋಜಕರುಗಳಾಗಿ ವಿವಿಧ ಸಂಘ-ಸಂಸ್ಥೆಗಳು ಜವಾಬ್ದಾರಿ ವಹಿಸಿಕೊಂಡು ಸೇವಾ ಕಾರ್ಯಗಳನ್ನು ಮಾಡಿದರು.

ಉತ್ಸವ ಮೂರ್ತಿಗಳ ವಿಸರ್ಜನೆ ಅಂಗವಾಗಿ ಬುಧವಾರ ಬೆಳಿಗ್ಗೆಯಿಂದಲೇ ವಿವಿಧ ಅರ್ಚನೆ, ಪೂಜೆಗಳು ನಡೆಯಿತು. ಅರ್ಚಕ ರಮೇಶ್ ಅವರ ಸಹಕಾರದೊಂದಿಗೆ ಚಿತ್ರಕುಮಾರ್ ಭಟ್‍ರವರ ಪೌರೋಹಿತ್ಯದಲ್ಲಿ ಗಣಹೋಮ ನಡೆಯಿತು. ಮಧ್ಯಾಹ್ನ ನೆರೆದಿದ್ದ ಸಾವಿರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂದೀಪ್, ಅರುಣ್‍ಕುಮಾರ್, ನಾಪಂಡ ಮುದ್ದಪ್ಪ, ರವಿ ಅವರುಗಳು ಅನ್ನಸಂರ್ಪಣೆÉ ದಾನಿಗಳಾಗಿದ್ದರು.

ಸಮೀಪದ ಅಲೇಕಟ್ಟೆ ರಸ್ತೆಯ ಭಾರತೀಯ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಗಳನ್ನು ಅದ್ಧೂರಿ ಮೆರವಣಿಗೆಯ ನಂತರ ವಿಸರ್ಜಿಸಲಾಯಿತು. ಪ್ರತಿಷ್ಠಾಪನಾ ಸ್ಥಳದಲ್ಲಿ ಬೆಳಿಗ್ಗೆ ಗಣಪತಿ ಹೋಮ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು ನೆರವೇರಿದವು. ಸಂಜೆ ರನ್ನಿಂಗ್ ಆರ್ಕೆಸ್ಟ್ರಾದೊಂದಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯಿತು.

ಇಲ್ಲಿನ ಕಕ್ಕೆಹೊಳೆ ಸಮೀಪ, ಕಟ್ಟೆ ಬಸವೇಶ್ವರ ದೇವಾಲಯ, ಮಾನಸ ಹಾಲ್ ಸಮೀಪದ ಜೈ ಭಾರತ್ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿಗಳು ಸೇರಿದಂತೆ ಗ್ರಾಮೀಣ ಭಾಗದ ಒಟ್ಟು 11 ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಗಳನ್ನು ಭವ್ಯ ಮೆರವಣಿಗೆಯೊಂದಿಗೆ ಕೊಂಡೊಯ್ದು ಆನೆಕೆರೆಯಲ್ಲಿ ವಿಸರ್ಜಿಸಲಾಯಿತು.

ಸೋಮವಾರಪೇಟೆ ಸೇರಿದಂತೆ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ನೂರಾರು ಮಂದಿ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿಗಳು ಅಗತ್ಯ ಬಂದೋಬಸ್ತ್ ಕಲ್ಪಿಸಿದ್ದರು. ಇದರೊಂದಿಗೆ ಹಾನಗಲ್ಲು, ಅಬ್ಬೂರುಕಟ್ಟೆ, ತಣ್ಣಿರುಹಳ್ಳ, ಕಿಬ್ಬೆಟ್ಟ ಎಸ್ಟೇಟ್, ಕಟ್ಟೆಬಸವೇಶ್ವರ ದೇವಾಲಯ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಗಳನ್ನು ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು.