ಸೋಮವಾರಪೇಟೆ, ಜು. 14: ಡಿವೈಎಸ್‍ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ, ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಕರೆ ನೀಡಿದ್ದ ಕೊಡಗು ಬಂದ್‍ಗೆ ಸೋಮವಾರಪೇಟೆ ಪಟ್ಟಣ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಗಡಿ ಗ್ರಾಮಗಳಲ್ಲೂ ಬಂದ್ ಯಶಸ್ವಿಯಾಯಿತು.

ತಾಲೂಕಿನ ಕೊಡ್ಲಿಪೇಟೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ಹಿಂದೂಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಪಟ್ಟಣದ ಎಲ್ಲಾ ಅಂಗಡಿಮುಂಗಟ್ಟುಗಳೂ ಬಂದ್ ಆಗಿದ್ದವು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಾಬು ರಾಜೇಂದ್ರ ಪ್ರಸಾದ್, ತಾಲೂಕು ಉಪಾಧ್ಯಕ್ಷ ಪ್ರಸಾದ್ ಪಟೇಲ್, ಜೆಡಿಎಸ್‍ನ ಕೆ.ಆರ್. ಚಂದ್ರಶೇಖರ್, ವಿಶ್ವ ಹಿಂದೂ ಪರಿಷತ್ ಮುಖಂಡ ಶರತ್‍ಚಂದ್ರ, ಶೋಭಿತ್, ಚೇಂಬರ್ ಆಫ್ ಕಾಮರ್ಸ್‍ನ ಯತೀಶ್ ಅವರುಗಳು ಮಾತನಾಡಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ನಂತರ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ತೆರಳಿ ಕಂದಾಯ ಇಲಾಖಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಬ್ಯಾಡಗೊಟ್ಟ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಖ್ಯಾತೆ ಶಿವು, ವಿಎಸ್‍ಎಸ್‍ಎನ್ ನಿರ್ದೇಶಕ ನಾಗೇಶ್, ಬಿಜೆಪಿ ತಾಲೂಕು ಕಾರ್ಯದರ್ಶಿಗಳಾದ ಡಿ. ಭಗವಾನ್, ಹೇಮಾವತಿ ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಸೋಮವಾರಪೇಟೆ-ಕೊಣನೂರು ಗಡಿ ಗ್ರಾಮ ಬಾಣಾವಾರದಲ್ಲೂ ಬಂದ್ ಯಶಸ್ವಿಯಾಗಿ ನಡೆಯಿತು. ಬಾಣಾವಾರದಲ್ಲಿ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ತಪಾಸಣಾ ಗೇಟ್‍ಗಳನ್ನು ಮುಚ್ಚಿದ ಪ್ರತಿಭಟನಾಕಾರರು ಕುಶಾಲನಗರ, ಕೊಣನೂರು, ಶನಿವಾರಸಂತೆ, ಮಲ್ಲಿಪಟ್ಟಣ ಭಾಗಗಳಿಂದ ಆಗಮಿಸುತ್ತಿದ್ದ ವಾಹನಗಳು ಕೆಲಕಾಲ ತಡೆದರು.

ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಮಧುಶಂಕರ್, ಕಾರ್ಯದರ್ಶಿ ಚೇತನ್, ಪ್ರಮುಖರಾದ ಮದನ್, ಮೂರ್ತಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆಲೂರು ಸಿದ್ದಾಪುರ ಮುಖ್ಯ ರಸ್ತೆಗೆ ಮರವನ್ನು ಅಡ್ಡ ಇರಿಸಿ ರಸ್ತೆ ತಡೆ ಮಾಡಲಾಯಿತು. ಶಾಂತಳ್ಳಿ, ಐಗೂರು, ಮಾದಾಪುರ, ಕುಂಬೂರು, ಗೌಡಳ್ಳಿ, ಶನಿವಾರಸಂತೆ, ಅಬ್ಬೂರುಕಟ್ಟೆ ಭಾಗದಲ್ಲೂ ಬಂದ್ ಯಶಸ್ವಿಯಾಯಿತು.

ಗ್ರಾಮೀಣ ಪ್ರದೇಶಗಳಲ್ಲೂ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿತ್ತು. ತಾಲೂಕಿನಾದ್ಯಂತ ಅಲ್ಲಲ್ಲಿ ಪೊಲೀಸರು ಬೀಡುಬಿಟ್ಟಿದ್ದರು. ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಒಟ್ಟಾರೆ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಡೆದ ಬಂದ್ ಸಂಪೂರ್ಣ ಶಾಂತಿಯುತವಾಗಿ ಯಶಸ್ವಿಯಾಯಿತು.