ಸೋಮವಾರಪೇಟೆ, ಡಿ. 3: ಭತ್ತದ ಕಣಜ ಎಂದೇ ಪ್ರಖ್ಯಾತಿಯಾಗಿರುವ ಸೋಮವಾರ ಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ ಬರ ಭೀಕರತೆಯ ದೃಶ್ಯ ಗೋಚರವಾಗುತ್ತಿದ್ದು, ಸಣ್ಣಪುಟ್ಟ ನದಿತೊರೆಗಳಲ್ಲಿ ನೀರಿನ ಹರಿವು ಕುಂಠಿತಗೊಂಡಿದ್ದರೆ, ಬೃಹತ್ ಕೆರೆಗಳೂ ಒಣಗುತ್ತಿವೆ. 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಕೈಗೊಳ್ಳಲಾಗಿದ್ದು, ಮಳೆಯ ಅಭಾವದಿಂದ ಈಗಾಗಲೇ 4500 ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಗಿದ್ದ ಭತ್ತದ ಫಸಲು ನಷ್ಟಕ್ಕೊಳಗಾಗಿದೆ.

ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲೂ ವಾಡಿಕೆ ಮಳೆಗಿಂತ ಕಡಿಮೆ ಮಳೆ ಬಿದ್ದಿದ್ದು, ವಾರ್ಷಿಕ ಸರಾಸರಿ 200 ಇಂಚಿಗೂ ಹೆಚ್ಚು ಮಳೆ ಬೀಳುತ್ತಿದ್ದ ಈ ಪ್ರದೇಶದಲ್ಲಿ ಪ್ರಸಕ್ತ ವರ್ಷ 100 ರಿಂದ 120 ಇಂಚಿನಷ್ಟು ಮಳೆ ಸುರಿದಿದೆ. ಉಳಿದಂತೆ ಇತರ ಭಾಗಗಳಲ್ಲಿ 60 ರಿಂದ 80 ಇಂಚಿನಷ್ಟು ಮಳೆಯಾಗುತ್ತಿದ್ದ ಪ್ರದೇಶಗಳಲ್ಲಿ ಕೇವಲ 20 ರಿಂದ 30 ಇಂಚಿನಷ್ಟು ಮಾತ್ರ ಮಳೆ ಬಿದ್ದಿದೆ.

ಭತ್ತದ ಗದ್ದೆಗಳಲ್ಲಿ ಅಧಿಕ ನೀರು ಸಂಗ್ರಹಗೊಳ್ಳಬೇಕಿದ್ದು, ಭತ್ತ ಕಟಾವು ಅವಧಿಯವರೆಗೂ ನೀರಿನ ತೇವಾಂಶವಿರಬೇಕಿದೆ. ಆದರೆ ಪ್ರಸಕ್ತ ವರ್ಷ ಮಳೆಯ ಕೊರತೆಯಿಂದ ಭತ್ತ ಬಲಿಯುವ ಸಮಯದಲ್ಲೇ ನೀರಿನ ಅಭಾವ ಕಂಡುಬಂದ ಹಿನ್ನೆಲೆ ಹಲವು ಭಾಗಗಳಲ್ಲಿ ಭತ್ತ ಜೊಳ್ಳಾಗಿದೆ. ಇದರಿಂದಾಗಿ ರೈತರು ಭಾರೀ ನಷ್ಟಕ್ಕೊಳಗಾಗುತ್ತಿದ್ದಾರೆ.

ಅಧಿಕ ಕೂಲಿ, ಕೃಷಿ ಪರಿಕರಗಳಿಗೆ ಅಧಿಕಗೊಂಡ ಬೆಲೆ, ರಸಗೊಬ್ಬರಗಳ ಅಲಭ್ಯತೆ, ಅಧಿಕ ದರಗಳಿಂದ ಬೇಸತ್ತಿದ್ದರೂ ಸಹ ಭತ್ತದ ಕೃಷಿಯನ್ನು ಕೈಗೊಂಡ ರೈತಾಪಿ ವರ್ಗಕ್ಕೆ ಮಳೆಯ ಕೊರತೆ ಬಹು ದೊಡ್ಡ ಆಘಾತವನ್ನೇ ನೀಡಿದೆ. ಕೆರೆ ಕಟ್ಟೆಗಳಲ್ಲೂ ನೀರು ಬತ್ತಿದ ಹಿನ್ನೆಲೆ ತಾಲೂಕಿನ ಶೇ.40ರಷ್ಟು ಭತ್ತದ ಪ್ರದೇಶ ಬರಡಾಗುವ ಲಕ್ಷಣಗಳು ಗೋಚರಿಸಿವೆ.

ನೀರಿಲ್ಲದೆ ಒಣಗುತ್ತಿರುವ ಗದ್ದೆಗಳಲ್ಲಿ ಅಳಿದುಳಿದಿರುವ ಭತ್ತವೂ ಜೊಳ್ಳಾಗುವ ಭೀತಿ ಎದುರಾಗಿದ್ದು, ಅಕ್ಕಿ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಕುಂಠಿತ ಕಂಡುಬರುತ್ತಿದೆ.

ಸೋಮವಾರಪೇಟೆ ತಾಲೂಕಿನ 6 ಹೋಬಳಿಗಳಲ್ಲಿ ಪ್ರಸಕ್ತ ಸಾಲಿನಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಕೈಗೊಳ್ಳಲಾಗಿದ್ದು, ಮಳೆಯ ಕೊರತೆಯಿಂದಾಗಿ ಈಗಾಗಲೇ 4500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ನಷ್ಟಕ್ಕೊಳಗಾಗಿದೆ.

ತಾಲೂಕಿನ ಶನಿವಾರಸಂತೆ ಹೋಬಳಿಯಲ್ಲಿ 47 ದೊಡ್ಡ ರೈತರು, 1760 ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸೇರಿದ 1280 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಯಾಗಿದೆ. ಕೊಡ್ಲಿಪೇಟೆ ಹೋಬಳಿಯಲ್ಲಿ 2305 ಮಂದಿ ರೈತರಿಗೆ ಸೇರಿದ 1100 ಹೆಕ್ಟೇರ್, ಸೋಮವಾರಪೇಟೆ ಕಸಬ ಹೋಬಳಿಯಲ್ಲಿ 1000 ರೈತರಿಗೆ ಸೇರಿದ 868 ಹೆಕ್ಟೇರ್ ಪ್ರದೇಶದಲ್ಲಿ ಕೈಗೊಳ್ಳಲಾಗಿದ್ದ ಭತ್ತ ಕೃಷಿ ಈಗಾಗಲೇ ಹಾನಿಗೊಳಗಾಗಿದೆ.

ಇನ್ನು ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 870 ರೈತರಿಗೆ ಸೇರಿದ 405 ಹೆಕ್ಟೇರ್ ಗದ್ದೆ, ಕುಶಾಲನಗರ ಹೋಬಳಿಯ 762 ರೈತರಿಗೆ ಸೇರಿದ 642 ಹೆಕ್ಟೇರ್, ಸುಂಟಿಕೊಪ್ಪ ಹೋಬಳಿಯ 85 ರೈತರಿಗೆ ಸೇರಿದ 205 ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು 6829 ಮಂದಿ ರೈತರಿಗೆ ಸೇರಿದ 4500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತದ ಪೈರು ನಷ್ಟಕ್ಕೊಳಗಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ವರದಿ ತಯಾರಿಸಿದ್ದಾರೆ.

ಅನ್ನದಾತ ಎಂದೇ ಪರಿಗಣಿಸಲ್ಪಟ್ಟಿರುವ ರೈತರ ಆರ್ಥಿಕ ಸಂಕಷ್ಟ ಇನ್ನಷ್ಟು ವಿಸ್ತರಿಸುವ ಸ್ಪಷ್ಟ ಸೂಚನೆ ಗೋಚರವಾಗುತ್ತಿದೆ. ಒಂದೆಡೆ ಜಲಮೂಲಗಳು ಬರಿದಾಗುತ್ತಿದ್ದು, ಕೆಲವೆಡೆ 400 ರಿಂದ 500 ಅಡಿಗಳವರೆಗೂ ಬೋರ್‍ವೆಲ್ ಕೊರೆಯಿಸಿದರೂ ಅರ್ಧ ಇಂಚು ನೀರೂ ಕಾಣದಾಗಿದೆ. ತಾಲೂಕಿನ ಗಣಗೂರು, ಅಬ್ಬೂರುಕಟ್ಟೆ, ನೇರುಗಳಲೆ, ಬಾಣಾವರ, ಸಿದ್ದಲಿಂಗಪುರ, ಗೌಡಳ್ಳಿ, ಆಲೂರುಸಿದ್ದಾಪುರ, ಹೆಬ್ಬಾಲೆ, ಆಡಿನಾಡೂರು, ಯಲಕನೂರು ಭಾಗದಲ್ಲಂತೂ ವಾಡಿಕೆಯ ಅರ್ಧದಷ್ಟು ಮಳೆಯೂ ಬಿದ್ದಿಲ್ಲ. ಪರಿಣಾಮ ಗದ್ದೆಗಳು ಒಣಗಲಾರಂಭಿಸಿದ್ದು, ಕೆಲ ಪ್ರದೇಶಗಳಲ್ಲಿ ಪೈರಿನ ಬೆಳವಣಿಗೆಯೂ ಕುಂಠಿತಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಗದ್ದೆಯಲ್ಲಿ ಕೃಷಿ ಕಾರ್ಯಗಳನ್ನು ಕೈಗೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದ್ದು, ಹವಾಮಾನ ವೈಪರೀತ್ಯದ ನಡುವೆಯೂ ಮಳೆಯ ನಿರೀಕ್ಷೆಯಲ್ಲಿ ಭಂಡ ಧೈರ್ಯ ಮಾಡಿ ಗದ್ದೆ ಕೃಷಿ ಕೈಗೊಂಡ ರೈತಾಪಿ ವರ್ಗದ ಬೆನ್ನಮೇಲೆ ಇದೀಗ ಮಣಭಾರದ ಮೂಟೆ ಬಿದ್ದಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರು ತಮ್ಮ ಕುಟುಂಬಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ಪಡೆಯಲು ಭತ್ತ ಕೃಷಿ ಕೈಗೊಳ್ಳುತ್ತಿದ್ದು, ಬೇಕಾದಷ್ಟನ್ನು ದಾಸ್ತಾನಿರಿಸಿ ಹೆಚ್ಚಿನ ಭತ್ತವನ್ನು ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿ ಇಳುವರಿ ಊಹಿಸಲೂ ಆಗದ ರೀತಿಯಲ್ಲಿ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ರೈತರೂ ಸಹ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಕೈಯೊಡ್ಡಬೇಕಾಗಿದೆ. ಅಥವಾ ಅಂಗಡಿಯಿಂದ ಹಣ ಕೊಟ್ಟು ಅಕ್ಕಿ ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ತೋಳೂರುಶೆಟ್ಟಳ್ಳಿಯ ಕೃಷಿಕ ಸುಧಾಕರ್ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ ಮಳೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಸೋಮವಾರಪೇಟೆಯನ್ನು ಬರಪೀಡಿತ ತಾಲೂಕೆಂದು ಸರ್ಕಾರ ಘೋಷಿಸಿದೆ.

ಆದಾಗ್ಯೂ ಇಲಾಖೆಗಳ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ತಮಗೆ ತೋಚಿದಂತೆ ವರದಿ ನೀಡುವ ಬದಲು ಗ್ರಾಮೀಣ ಪ್ರದೇಶದ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ವಾಸ್ತವಾಂಶವನ್ನು ಅರಿತು ಅನ್ನದಾತ ರೈತರ ಹಿತ ಕಾಪಾಡುವ ವಸ್ತುನಿಷ್ಠ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ತಾಕೇರಿ ಪೊನ್ನಪ್ಪ ಒತ್ತಾಯಿಸಿದ್ದಾರೆ.

ಸರ್ಕಾರವೂ ಸಹ ರೈತಾಪಿ ವರ್ಗದ ಮೇಲೆ ಕರುಣೆ ತೋರಿ, ಅವರುಗಳ ಹಿತ ಕಾಪಾಡಲು ಮುಂದಾಗಬೇಕು. ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸಲು ಸಮಗ್ರ ಯೋಜನೆ ರೂಪಿಸಬೇಕು. ಈಗಾಗಲೇ ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರದ ನೆಪದಲ್ಲಿ ಮೂಗಿನ ಮೇಲೆ ಬೆಣ್ಣೆ ಸವರುವ ಬದಲು ಹೆಚ್ಚಿನ ಪರಿಹಾರ ಒದಗಿಸಬೇಕು. ರೈತರಿಗೆ ನೀಡುತ್ತಿರುವ ಸಹಾಯಧನವನ್ನು ಹೆಚ್ಚಿಸಿ, ಭತ್ತ ಕೃಷಿಗೆ ಇನ್ನಷ್ಟು ಪ್ರೋತ್ಸಾಹ ನೀಡುವಂತಾಗಬೇಕು ಎಂದು ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಯ್ಯ ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹಿಂದೆಂದಿಗಿಂತಲೂ ಹೆಚ್ಚಿನ ಬರ ಭೀಕರತೆಯ ದೃಶ್ಯಗಳು ತಾಲೂಕಿನಾದ್ಯಂತ ಕಂಡುಬರುತ್ತಿದ್ದು, ನಿಡ್ತ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 44 ಹೆಕ್ಟೇರ್ ಪ್ರದೇಶದಲ್ಲಿರುವ ಮುಳ್ಳೂರು ಕೆರೆ ಪ್ರಸಕ್ತ ಸಾಲಿನಲ್ಲಿ ಬತ್ತಿದೆ. ಕೆರೆಯಲ್ಲಿದ್ದ ಜಲಚರಗಳು ಕಣ್ಮರೆಯಾಗಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ. ಕಾಫಿ ತೋಟಗಳಿಗೂ ಬರಗಾಲದ ಬಿಸಿ ತಟ್ಟಿದ್ದು, ಸೂಕ್ತ ಸಮಯದಲ್ಲಿ ಮಳೆಯಾಗದ ಹಿನ್ನೆಲೆ ಕಾಫಿ ಕಾಯಿ ಹಣ್ಣುಕಟ್ಟಲು ಆಗದೇ ಒಣಗುತ್ತಿದೆ. ಬೇಳೆ ಬದಲಿಗೆ ಕಾಫಿ ಬೀಜಗಳು ಜೊಳ್ಳಾಗುವ ಲಕ್ಷಣಗಳು ಕಂಡುಬರುತ್ತಿದೆ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ನೆಟ್ಟಿದ್ದ ನೂತನ ಕಾಫಿ ಗಿಡಗಳು ಬಿಸಿಲಿನ ಪ್ರಖರತೆಗೆ ಒಣಗುತ್ತಿವೆ.

ಕಾಫಿ ಫಸಲಿನ ಮೇಲೆ ಮಳೆಯ ಕೊರತೆ ನೇರ ಪರಿಣಾಮ ಬೀರಿದ್ದು, ಸರ್ಕಾರ ಕಾಫಿ ಬೆಳೆಗಾರರ ಹಿತ ಕಾಪಾಡಲು ಮುಂದಾಗಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ, ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಒಟ್ಟಾರೆ ಹಲ ದಶಕಗಳ ಬಳಿಕ ಬರಗಾಲದ ಪರಿಸ್ಥಿತಿಗೆ ಸೋಮವಾರಪೇಟೆ ಸಿಲುಕಿದ್ದು, ಸರ್ಕಾರ ರೈತರು ಹಾಗೂ ಬೆಳೆಗಾರರ ಹಿತ ಕಾಪಾಡಲು ಯಾವ ಕ್ರಮ ಕೈಗೊಳ್ಳಲಿದೆ ಎಂಬದನ್ನು ಕಾದುನೋಡಬೇಕಿದೆ.