ಸೋಮವಾರಪೇಟೆ, ಸೆ. 6: ಹೊಂಡಾ ಗುಂಡಿಗಳ ಆಗರವಾಗಿರುವ ಸೋಮವಾರಪೇಟೆ ಸರ್ಕಾರಿ ಬಸ್ ನಿಲ್ದಾಣ ಆವರಣ ಕಾಂಕ್ರೀಟೀಕರಣ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ರೂ. 1 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರು ಸದ್ಯದಲ್ಲಿಯೇ ಚಾಲನೆ ನೀಡಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೆಎಸ್‍ಆರ್‍ಟಿಸಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಸಂಸ್ಥೆಯ ವಿಭಾಗಾಧಿಕಾರಿ ನಾಗರಾಜು, ಸಂಚಾರಿ ವ್ಯವಸ್ಥಾಪಕ ವೆಂಕಟೇಶ್, ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ಬ್ಲಾಕ್ ಅಧ್ಯಕ್ಷ ಲೋಕೇಶ್, ಕೆಎಸ್‍ಆರ್‍ಟಿಸಿ ರಾಜ್ಯ ಪ್ರತಿನಿಧಿ ಶೌಕತ್ ಆಲಿ ಸೇರಿದಂತೆ ಇತರ ಪ್ರತಿನಿಧಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂದು ಲೋಕೇಶ್ ಮಾಹಿತಿ ನೀಡಿದರು.

ಸಭೆಯಲ್ಲಿ ಸೋಮವಾರಪೇಟೆ ಬಸ್ ನಿಲ್ದಾಣದ ಆವರಣ ಕಾಂಕ್ರೀಟೀಕರಣ, ಮಡಿಕೇರಿ ಡಿಪೋ ದುರಸ್ತಿಗೆ ಸಂಬಂಧಿಸಿದಂತೆ ಅನುದಾನ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪ್ರಸ್ತಾವನೆಗೆ ಇದೀಗ ಅನುಮೋದನೆ ದೊರಕಿದ್ದು, ಮಡಿಕೇರಿಗೆ ರೂ. 1.5 ಕೋಟಿ ಹಾಗೂ ಸೋಮವಾರಪೇಟೆ ನಿಲ್ದಾಣಕ್ಕೆ ರೂ. 1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರು ಸದ್ಯದಲ್ಲಿಯೇ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೆ.ಎಂ. ಲೋಕೇಶ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಯಾಕೂಬ್, ಮುಖಂಡರಾದ ಚಂಗಪ್ಪ, ನಂದಕುಮಾರ್, ಮುತ್ತಣ್ಣ ಅವರುಗಳು ಉಪಸ್ಥಿತರಿದ್ದರು.