ಸೋಮವಾರಪೇಟೆ, ಜು. 29:
ಸೋಮವಾರಪೇಟೆ ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಂದರ್ಭ, ಹಲವಷ್ಟು ವಿಚಾರಗಳು ಪ್ರಸ್ತಾಪಗೊಂಡವು. ಜಿಲ್ಲೆಯಲ್ಲಿ ನಕಲಿ ಗೊಬ್ಬರ ಔಷಧ ಹಾಗೂ ಕ್ರಿಮಿನಾಶಕಗಳಿಂದ ಕೃಷಿ ಚಟುವಟಿಕೆ ಕುಂಠಿತಗೊಳ್ಳುತ್ತಿದೆ. ನಕಲಿ ಗೊಬ್ಬರ-ಔಷಧಿಗಳನ್ನು ಬಳಸುವ ರೈತರು ಕೃಷಿಯಲ್ಲಿ ಹಿನ್ನಡೆ ಅನುಭವಿಸಿ ನಷ್ಟಕ್ಕೊಳಗಾಗುತ್ತಿದ್ದಾರೆ. ಇಂತಹ ನಕಲಿ ಔಷಧಿ ಮಾರಾಟ ಮಾಡುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಸದಸ್ಯ ಅನಂತ್‍ಕುಮಾರ್, ಕೃಷಿ ಇಲಾಖಾ ನಿರ್ದೇಶಕ ಡಾ. ರಾಜಶೇಖರ್ ಅವರನ್ನು ಆಗ್ರಹಿಸಿದರು.
ಕಳಪೆ ಗುಣಮಟ್ಟದ ಗೊಬ್ಬರ, ಕ್ರಿಮಿನಾಶಕಗಳನ್ನು ಎಂಆರ್‍ಪಿ ದರಕ್ಕಿಂತ ಅತೀ ಕಡಿಮೆ ದರದಲ್ಲಿ ಖರೀದಿಸಿ ಎಂಆರ್‍ಪಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಔಷಧಿಗಳನ್ನು ಸಿಂಪಡಿಸಿದರೆ ಕೃಷಿ ಫಸಲು ವೃದ್ಧಿಗಿಂತ ನಷ್ಟಗೊಳ್ಳುವದೇ ಅಧಿಕ. ನಿರೀಕ್ಷಿತ ಫಸಲು ದೊರಕದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸಾವಿಗೆ ನಕಲಿ ಕಂಪೆನಿಗಳೂ ಕಾರಣ. ಈ ಬಗ್ಗೆ ಕೃಷಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದಿನಕ್ಕೊಂದು ನಾಯಿಕೊಡೆಗಳಂತೆ ಔಷಧಿ ಮಾರಾಟ ಅಂಗಡಿಗಳು ಹುಟ್ಟಿಕೊಳ್ಳುತ್ತಿವೆ. ಇವುಗಳಿಗೆ ಪರವಾನಗಿ ಕೊಟ್ಟಿರುವವರು ಯಾರು? ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿ ರಾಜಶೇಖರ್, ನಕಲಿ ಗೊಬ್ಬರಗಳನ್ನು ಮಾರಾಟ ಮಾಡುವ ಕಂಪೆನಿಗಳಿಂದ ದೂರವಿದ್ದು, ಸ್ಥಳೀಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿದರೆ ಉತ್ತಮ ಗೊಬ್ಬರ ಹಾಗೂ ಔಷಧಿ, ಕ್ರಿಮಿನಾಶಕಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಳೆ ಬಿದ್ದಿಲ್ಲ. ಕೆಲವೊಂದು ಭಾಗಗಳನ್ನು ಹೊರತುಪಡಿಸಿದರೆ ಕಾಫಿ, ಕಾಳುಮೆಣಸು ಸೇರಿದಂತೆ ಇತರ ಬೆಳೆಗಳು ನಷ್ಟಕ್ಕೊಳಗಾಗುವ ಭೀತಿ ಎದುರಾಗಿದೆ. ರೈತರು ಬ್ಯಾಂಕ್ ಗಳಿಂದ ಪಡೆದಿರುವ ಸಾಲ ಮರು ಪಾವತಿ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸೋಮವಾರಪೇಟೆ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ವಿಶೇಷ ಪ್ಯಾಕೇಜ್ ಒದಗಿಸಲು ಶಾಸಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಸಭೆಯ ಗಮನ ಸೆಳೆದರು. ಈ ಬಗ್ಗೆ ಚರ್ಚೆ ನಡೆದು ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಕೈಗೊಳ್ಳ ಲಾಯಿತು.
ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಂದ ಮಾಹಿತಿ ಬೇಕಿದ್ದರೂ ಸಹ ಎಸಿಎಫ್ ಅವರು ಸಭೆಗೆ ಆಗಮಿಸಿಲ್ಲ. ನಿರಂತರವಾಗಿ ಗೈರಾಗುತ್ತಿದ್ದಾರೆ ಎಂದು ಸದಸ್ಯ ಮಣಿ ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಎಸಿಎಫ್ ಅವರಿಗೆ ನೋಟೀಸ್ ನೀಡಿ ಮುಂದಿನ ಸಭೆಗೆ ಕಡ್ಡಾಯವಾಗಿ ಆಗಮಿಸುವಂತೆ ತಾಕೀತು ಮಾಡಬೇಕು ಎಂದು ಆಗ್ರಹಿಸಿದರು.
ಕಾಡಾನೆ ಧಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇಲಾಖೆಯಲ್ಲಿ ಎಸಿಎಫ್ ಇದ್ದಾರೋ ಇಲ್ಲವೋ ಎಂಬ ಸಂಶಯ ಹುಟ್ಟುಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸಿಎಫ್ ನ್ಯಾಯಾಲಯಕ್ಕೆ ಹೋಗಿದ್ದಾರೆ. ಈ ವಿಚಾರವನ್ನು ಅವರ ಗಮನಕ್ಕೆ ತರಲಾಗುವದು ಎಂದು ಆರ್‍ಎಫ್‍ಓ ಮೊಹಿಸಿನ್ ಬಾಷಾ ಹೇಳಿದರು. ಮುಂದಿನ ಎರಡು ದಿನಗಳ ಒಳಗೆ ವಾಲ್ನೂರು ತ್ಯಾಗತ್ತೂರು, ಚೆಟ್ಟಳ್ಳಿ ವ್ಯಾಪ್ತಿಗೆ ಆಗಮಿಸಿ ಪರಿಸ್ಥಿತಿ ಅವಲೋಕಿಸ ಬೇಕು. ತಪ್ಪಿದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಮಣಿ ಉತ್ತಪ್ಪ ಎಚ್ಚರಿಸಿದರು.
ಅರಣ್ಯ ಇಲಾಖೆ ವತಿಯಿಂದ ಬೆಳೆಸಲಾಗಿದ್ದ ಸಿಲ್ವರ್ ಸಸಿಗಳನ್ನು ತಾಲೂಕು ಪಂಚಾಯಿತಿ ಸದಸ್ಯರುಗಳ ಮುಖಾಂತರ ವಿತರಿಸುವಂತೆ ಕಳೆದ ಕೆಡಿಪಿ ಸಭೆಯಲ್ಲಿ ಶಾಸಕ ರಂಜನ್ ಅವರ ಸಮ್ಮುಖದಲ್ಲಿ ಒಪ್ಪಿ ಕೊಂಡಿದ್ದರೂ ಇದುವರೆಗೂ ಗಿಡ ವಿತರಿಸಿಲ್ಲ ಎಂದು ಸದಸ್ಯ ಸತೀಶ್ ಸೇರಿದಂತೆ ಇತರರು ಆಕ್ಷೇಪಿಸಿ ಈ ಬಗ್ಗೆ ಮಾಹಿತಿ ಬಯಸಿದರು.
ನಿವೃತ್ತ ಅಧಿಕಾರಿಗಳಿಗೆ ಸರ್ಕಾರ ದಿಂದ ಸಿಗುವ ಪಿಂಚಣಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಖಜಾನೆಯಲ್ಲಿರುವ ಕೆಲ ಅಧಿಕಾರಿಗಳು ಕಮಿಷನ್ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಮಣಿ ಉತ್ತಪ್ಪ ಆರೋಪಿಸಿದರು. ಒಂದು ಲಕ್ಷಕ್ಕೆ ಇಂತಿಷ್ಟು ಹಣ ಕಮಿಷನ್ ಎಂದು ಖಜಾನೆಯ ಅಧಿಕಾರಿಗಳು ಅಲಿಖಿತ ನಿಯಮ ರೂಪಿಸಿಕೊಂಡಿದ್ದಾರೆ. ಇತ್ತೀಚೆಗೆ ನಿವೃತ್ತರಾದ ಸಿಬ್ಬಂದಿ ಯೋರ್ವರಿಗೆ 6 ತಿಂಗಳು ಕಳೆದರೂ ಸೌಲಭ್ಯ ವಿತರಿಸಿಲ್ಲ. ಇದನ್ನು ಮುಂದುವರೆಸಿದರೆ ದಾಖಲೆಗಳನ್ನು ಮಾಧ್ಯಮದ ಮೂಲಕವೇ ಬಹಿರಂಗಗೊಳಿಸಲಾಗುವದು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗೆ ಎಚ್ಚರಿಸಿದರು.
ಅಂಗನವಾಡಿಗಳಲ್ಲಿ ವಿತರಿಸುವ ಆಹಾರ ಧಾನ್ಯಗಳ ವಿತರಣೆ ಸಮರ್ಪಕವಾಗಿಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪಡಿತರ ಪಡೆದು ಕೊಳ್ಳುತ್ತಿದ್ದು, ವಾಸ್ತವದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದೆ. ಹಾನಗಲ್ಲು ಬಾಣೆ ಅಂಗನವಾಡಿ ಕೇಂದ್ರದಲ್ಲಿ ಸಮರ್ಪಕವಾಗಿ ಆಹಾರ ನೀಡುತ್ತಿಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಮೆನು ಚಾರ್ಟ್‍ನಂತೆ ಆಹಾರ ನೀಡುತ್ತಿಲ್ಲ ಎಂದು ಸದಸ್ಯರಾದ ತಂಗಮ್ಮ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಯವರಲ್ಲಿ ದೂರಿದರು. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆ ವ್ಯಾಪ್ತಿಯ ಸದಸ್ಯ ಅನಂತ್‍ಕುಮಾರ್ ಆಗ್ರಹಿಸಿದರು.
ಅಬ್ಬೂರುಕಟ್ಟೆಯಿಂದ ಗೋಣಿಮರೂರುವರೆಗೆ ತೆರಳುವ ರಸ್ತೆಯ ಎರಡೂ ಬದಿಯಿರುವ ಅರಣ್ಯದಲ್ಲಿನ ಮರಗಳು ರಸ್ತೆಗೆ ಬಾಗಿದ್ದು, ರಸ್ತೆಯ ಬದಿ ಕುರುಚಲು ಬೆಳೆದಿರುವದರಿಂದ ಕಾಡಾನೆಗಳು ನಿಂತಿದ್ದರೆ ಕಾಣಿಸುವದಿಲ್ಲ. ಇದರಿಂದಾಗಿ ದ್ವಿಚಕ್ರ ಸೇರಿದಂತೆ ಇನ್ನಿತರ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದೆ. ತಕ್ಷಣ ಕುರುಚಲುಗಳನ್ನು ತೆರವು ಗೊಳಿಸಬೇಕೆಂದು ಸದಸ್ಯೆ ಸವಿತಾ ಅವರು ಅರಣ್ಯ ಇಲಾಖೆಯನ್ನು ಆಗ್ರಹಿಸಿದರು. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿ ಗಳಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ನೂತನ ಹಾಸ್ಟೆಲ್ ಪ್ರಾರಂಭಿಸಲು ಚಿಂತಿಸಲಾಗಿದ್ದು, ಸುತ್ತಮುತ್ತಲಿನ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆಯನ್ನು ಸಂಗ್ರಹಿಸಲಾಗುತ್ತಿದೆ. ಈ ಬಗೆಗಿನ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ ಸಭೆಯ ಗಮನಕ್ಕೆ ತಂದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ದರು. ತಾ.ಪಂ. ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖಾ ವರದಿಯನ್ನು ಮಂಡಿಸಿದರು.