ಸೋಮವಾರಪೇಟೆ, ಆ. 22: ತಮ್ಮ ಪ್ರಾಣದ ಹಂಗು ತೊರೆದು ದೇಶ ಕಾಯುವ ಸೈನಿಕರ ವಿರುದ್ಧವೇ ಅವಹೇಳನಕಾರಿ ಘೋಷಣೆಗಳನ್ನು ಕೂಗಿದವರನ್ನು ತಕ್ಷಣ ಗಡೀಪಾರು ಮಾಡುವಂತೆ ಆಗ್ರಹಿಸಿ ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ನಗರದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಇಲ್ಲಿನ ಗಾಂಧಿ ಪ್ರತಿಮೆಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು, ಸೈನಿಕರ ವಿರುದ್ಧ ಘೋಷಣೆ ಕೂಗಿದವರನ್ನು ಗಡೀಪಾರು ಮಾಡಬೇಕೆಂದು ಆಗ್ರಹಿಸಿದರಲ್ಲದೆ, ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ದರು. ಇಂತಹ ಹೇಳಿಕೆ ನೀಡಿದವರ ವಿರುದ್ಧ ಯಾವದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧವೂ ಘೋಷಣೆ ಮೊಳಗಿಸಿ ದರು. ಗಾಂಧಿ ಪ್ರತಿಮೆಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಮಾಜೀ ಸೈನಿಕರೊಂದಿಗೆ ಕರವೇ ಪದಾಧಿಕಾರಿಗಳು, ಸಂಘ ಪರಿವಾರದ ಪ್ರಮುಖರು ಭಾಗವಹಿಸಿ ದ್ದರು. ನಂತರ ತಾಲೂಕು ಕಚೇರಿಗೆ ತೆರಳಿ ಪ್ರತ್ಯೇಕವಾಗಿ ತಹಶೀಲ್ದಾರ್ ಶಿವಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರಿನ ಥಿಯಾಲಾಜಿಕಲ್ ಕಾಲೇಜಿನಲ್ಲಿ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯವರು ನಡೆಸಿದ 'ಬ್ರೋಕನ್ ಫ್ಯಾಮಿಲಿಸ್' ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆಯನ್ನು ಕೂಗಿದವರನ್ನು ಕೂಡಲೆ ಬಂಧಿಸಿ, ಗಡೀಪಾರು ಮಾಡಬೇಕೆಂದು ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಆಗ್ರಹಿಸಿದರು. ದೇಶದ್ರೋಹಿ ಘೋಷಣೆ ಕೂಗಿದ ಆರೋಪಿಗಳನ್ನು ರಾಜ್ಯ ಸರ್ಕಾರ ಏಕೆ ಬಂಧಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ದೇಶದ್ರೋಹಿ ಘೋಷಣೆ ಕೂಗಲು ಅನುವು ಮಾಡಿಕೊಟ್ಟ ಅಮ್ನೆಸ್ಟಿ ಸಂಸ್ಥೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಅಮ್ನೆಸ್ಟಿ ಸಂಸ್ಥೆಯ ಕಾರ್ಯಕ್ರಮ ದಲ್ಲಿ ದೇಶದ್ರೋಹದ ಘೋಷಣೆ ಕೂಗಿದ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ ಎಂಬದೇ ಖಂಡನೀಯ ಎಂದು ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಹೇಳಿದರು. ಈ ದೇಶವನ್ನು ನಕಲಿ ಬ್ರಿಟೀಷರಿಂದ ಕಾಪಾಡಬೇಕು. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳದಿಂದ ತನಿಖೆಗೊಳಪಡಿಸ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶನಿವಾರಸಂತೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್.ಧರ್ಮಪ್ಪ, ಮಾಜಿ ಸೈನಿಕರಾದ ಎಚ್.ಎನ್.ಗಣಪಯ್ಯ, ಎಚ್.ಎನ್.ಪಾಂಡು, ಎ.ಕೆ.ಮಹೇಶ್, ನಾಗರಾಜ್, ಆರ್.ಜಿ.ಬಸಪ್ಪ, ಶಿವಕುಮಾರ್ ಸೇರಿದಂತೆ ಇತರರು ಹಾಗೂ ಕರವೇ ಪದಾಧಿಕಾರಿಗಳಾದ ರೂಪ ಸುರೇಶ್, ರೋಹಿತ್, ಬಿ.ಎಸ್.ಮಂಜುನಾಥ್, ರವೀಶ್ ಮತ್ತಿತರರು ಇದ್ದರು.