ಸುಂಟಿಕೊಪ್ಪ, ಸೆ. 1: ಹಲವಾರು ದಶಕಗಳಿಂದ ಮಳೆ, ಗಾಳಿ ಮತ್ತು ಚಳಿಗೆ ಮೈಯೊಡ್ಡಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿದ್ದ ಕಟ್ಟೆಹಾಡಿಯ ಗಿರಿಜನರಿಗೆ ತಮ್ಮದೇ ಆದ ಸೂರಿನ ಭಾಗ್ಯ ಹೊಂದಬೇಕೆಂಬ ಕನಸು ಸದ್ಯದಲ್ಲಿಯೇ ನನಸಾಗಲಿದೆ. ಕುಶಾಲನಗರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಪಿ.ಎಂ. ಲತೀಫ್ ಅವರ ಪ್ರಯತ್ನದ ಫಲವಾಗಿ ಗಿರಿಜನರ ಈ ಆಶೋತ್ತರ ಈಡೇರಲಿದೆ.

ಸುಂಟಿಕೊಪ್ಪ ಸಮೀಪದ ಚಿಕ್ಲಿಹೊಳೆ ಸನಿಹದಲ್ಲಿರುವ ಕಟ್ಟೆಹಾಡಿಯಲ್ಲಿ 30 ಕ್ಕೂ ಹೆಚ್ಚಿನ ಜೇನು ಕುರುಬ ಗಿರಿಜನ ಕುಟುಂಬಗಳಿದ್ದು, ಅಂದಾಜು 120ಕ್ಕಿಂತಲೂ ಗಿರಿಜನರು ನೆಲೆಸಿದ್ದಾರೆ. ಚಿಕ್ಲಿಹೊಳೆ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಜಲಾಶಯದ ಬಲದಂಡೆಯಲ್ಲಿ ನೆಲೆಸಿದ್ದ ಕುಟುಂಬವನ್ನು ಮನೆ ಕಟ್ಟಿಸಿಕೊಡುವ ಆಮಿಷವೊಡ್ಡಿ ಎಡದಂಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಸಂಬಂಧಿಸಿದ ಇಲಾಖೆ ತನ್ನ ವಾಗ್ದಾನದಂತೆ ಮನೆಯನ್ನು ನಿರ್ಮಿಸಿಕೊಡುವ ಗೊಡವೆಗೆ ಹೋಗಿರಲಿಲ್ಲ. ಇದರಿಂದ ಬಡಪಾಯಿ ಗಿರಿಜನರು ಆರ್ಥಿಕವಾಗಿ ದುರ್ಬಲರಾಗಿದ್ದರಿಂದ ಮಣ್ಣಿನ ಗೋಡೆಯನ್ನು ನಿರ್ಮಿಸಿ ಅದಕ್ಕೆ ಪ್ಲಾಸ್ಟಿಕ್ ಹೊದಿಕೆಯನ್ನು ಅಳವಡಿಸಿ ಸುರಿಯುವ ಮಳೆ, ಗಾಳಿ, ಕೊರೆಯುವ ಚಳಿಗೆ ಸಂಸಾರ ನೌಕೆ ಸಾಗಿಸುತ್ತಿದ್ದರು. ಮಳೆ-ಗಾಳಿಗೆ ಯಾವಾಗ ಪ್ಲಾಸ್ಟಿಕ್ ಹೊದಿಕೆ ಹಾರಿ ಹೋಗುತ್ತದೆಯೋ ಎಂಬ ಅಂಜಿಕೆಯಿಂದ ಗೋಡೆ ಇನ್ನೇನು ಬೀಳುತ್ತದೆಯೋ ಎಂಬ ಯಾತನಾಮಯ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಿಳೆಯರು, ಯುವತಿಯರು, ಗರ್ಭಿಣಿಯರು ಮತ್ತು ಹಸುಗೂಸುಗಳು ಬಹು ಪ್ರಯಾಸದಿಂದ ದಿನದೂಡಬೇಕಾಗಿತ್ತು. ಸುಸಜ್ಜಿತವಾದ ಮನೆ ಕಟ್ಟಿಸಿಕೊಡುವದಾಗಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಭರವಸೆ ಕಾರ್ಯಗತಗೊಳ್ಳದ ಕಾರಣ ಈವರೆಗೂ ವಾಸಯೋಗ್ಯ ಸೂರು ಲಭ್ಯವಾಗದೇ ಗಿರಿಜನರ ಆಕ್ರಂದನ ಅರಣ್ಯ ರೋಧನವಾಗಿ ಪರಿಣಮಿಸಿತ್ತು. ಇತ್ತೀಚೆಗೆ ಕುಶಾಲನಗರ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡಿರುವ ಪಿ.ಎಂ. ಲತೀಫ್ ಕಟ್ಟೆಹಾಡಿಗೆ ಭೇಟಿ ನೀಡಿ ತಮ್ಮ ಸ್ವಂತ ವೆಚ್ಚದಿಂದ ಎಲ್ಲಾ ಕುಟುಂಬಗಳಿಗೆ ಕಂಬಳಿ ಹಾಗೂ ಸೀರೆಯನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು.

ಈ ಸಂದರ್ಭ ಸರಕಾರದಿಂದ ಮನೆ ಕಟ್ಟಿಸಿಕೊಡುವ ಮತ್ತು ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿ ಕೊಡುವದಾಗಿ ಭರವಸೆ ನೀಡಿದ್ದ ಲತೀಫ್, ತಮ್ಮ ವಾಗ್ದಾನವನ್ನು ಮರೆಯದೇ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಮನೆ ನಿರ್ಮಾಣಕ್ಕೆ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರಲ್ಲದೇ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಬೆಂಬಿಡದೇ ಕಾಡಿದ ಪರಿಣಾಮ ಕಟ್ಟೆಹಾಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 10 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಅವರ ಪ್ರಯತ್ನದ ಫಲವಾಗಿ ತಲಾ ರೂ. 2 ಲಕ್ಷ ವೆಚ್ಚದಲ್ಲಿ 10 ಮನೆಗಳು ತಲೆ ಎತ್ತಲಿವೆ. ಅಲ್ಲದೇ ಹಾಡಿಗೆ ರೂ. 8 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಕಾರ್ಯಗತಗೊಳ್ಳಲಿದೆ.

ಭೂಮಿಪೂಜೆ: ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಲತೀಫ್ ಮನೆ ಹಾಗೂ ಕುಡಿಯುವ ನೀರಿನ ಯೋಜನೆಗೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ಕಟ್ಟೆ ಹಾಡಿಯ ಅರಣ್ಯವಾಸಿಗಳಿಗೆ ಹಕ್ಕುಪತ್ರ ಒದಗಿಸಿಕೊಡುವದಾಗಿ ಹೇಳಿದರು. ಅರಣ್ಯದಂಚಿನಲ್ಲಿರುವ ಮೂಲ ನಿವಾಸಿಗಳಿಗೆ ಸರಕಾರದಿಂದ ದೊರೆಯಬೇಕಾಗಿರುವ ಮೂಲ ಸವಲತ್ತುಗಳನ್ನು ಅವರ ಮನೆ ಬಾಗಿಲಿಗೆ ತಲಪಿಸಬೇಕೆನ್ನುವ ಆಶಯ ನನ್ನದಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸುವದಾಗಿ ನುಡಿದ ಲತೀಫ್, ಮುಂದಿನ ದಿನಗಳಲ್ಲಿ ಇನ್ನುಳಿದ ಗಿರಿಜನರಿಗೆ ಮನೆ ಕಟ್ಟಿಸಿಕೊಡುವದಾಗಿ ಹೇಳಿದರು.

ಗಿರಿಜನ ಮುಖಂಡ ಆರ್.ಕೆ. ಚಂದ್ರು ಮಾತನಾಡಿ, ಲತೀಫ್ ಅವರು ಅಲ್ಪಾವಧಿಯಲ್ಲಿ ಗಿರಿಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುಂಟಿಕೊಪ್ಪ ನಗರ ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಂ.ಎಸ್. ರವಿ, ಕಟ್ಟೆಹಾಡಿ ಗಿರಿಜನ ನಿವಾಸಿಗಳು ಹಾಗೂ ಇನ್ನಿತರಿದ್ದರು.