ಕೂಡಿಗೆ, ಜು. 29: ಹಾರಂಗಿ ಅಣೆಕಟ್ಟೆಯಲ್ಲಿನ ಅಧಿಕಾರಿಗಳು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡದೆ ಹಾರಂಗಿ ಜಲಾಶಯದಿಂದ ನಾಲೆಗಳಿಗೆ ನೀರನ್ನು ಹರಿಸಿದ ಪರಿಣಾಮವಾಗಿ ನಾಲೆಯ ಅಂಚಿನಲ್ಲಿ ಕುಳಿತಿದ್ದ ಮಗು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಹಾರಂಗಿಯ ಫಾರಂ ಬಳಿ ನಡೆದಿದೆ. ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ನಿವಾಸಿ ಕೈಬಿಲಿರ ಭರತ್ ಮತ್ತು ಧರಣಿ ಅವರ ಪುತ್ರ ಶಶಾಂಕ್ (5) ಮೃತ ಬಾಲಕ. ಕೂಡಿಗೆಯ ಕಿಶೋರ ಕೇಂದ್ರದಲ್ಲಿ ಓದುತ್ತಿದ್ದ ಈ ಬಾಲಕ ಶಾಲೆಯಿಂದ ಅಜ್ಜಿಯ ಮನೆಗೆ ಬಂದಿದ್ದು, ಅಜ್ಜಿ ಸುಶೀಲ ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಸಮೀಪದ ಮಾವಿನಹಳ್ಳದ ನಾಲೆಯ ಬಳಿ ಬಟ್ಟೆ ತೊಳೆಯಲು ಹೋಗುವಾಗ, ಮೊಮ್ಮಗನನ್ನೂ ಕರೆದೊಯ್ದು ಕಾಲುವೆಯ ಮೆಟ್ಟಿಲ ಮೇಲೆ ಕೂರಿಸಿ ದ್ದಾಳೆ. ಈ ಸಂದರ್ಭ ಇದ್ದಕ್ಕಿದ್ದಂತೆ ನಾಲೆಯಲ್ಲಿ ನೀರು ಬಂದು ಸ್ವಲ್ಪ ಕೆಳಭಾಗದಲ್ಲಿ ಕುಳಿತಿದ್ದ ಮೊಮ್ಮಗ ಶಶಾಂಕ್ ಕೊಚ್ಚಿ ಹೋಗಿದ್ದಾನೆ.
ತಕ್ಷಣ ಅಜ್ಜಿ ನೆರೆಹೊರೆಯವರಿಗೆ ಸುದ್ದಿ ಮುಟ್ಟಿಸಲಾಗಿ ಜಲಾಶಯದ ಅಧಿಕಾರಿಗಳಿಗೆ ಕಾಲುವೆಯ ನೀರು ನಿಲ್ಲಿಸುವಂತೆ ಕೋರಿದ್ದಾರೆ. ಆ ವೇಳೆಗಾಗಲೇ ಸುಮಾರು 300 ಮೀಟರ್‍ಗಳಷ್ಟು ದೂರ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕನನ್ನು ಮದಲಾಪುರ ಸಮೀಪ ಮೇಲೆತ್ತಿದಾಗ ಮೃತಪಟ್ಟಿದ್ದ.
ರಾತ್ರಿ 9.30 ವೇಳೆಗೆ ಮೃತದೇಹವನ್ನು ಕುಶಾಲನಗರ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಅಧಿಕಾರಿಗಳ ವಿರುದ್ಧ ಆಕ್ರೋಶ: ಇಂದು ಬೆಳಿಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಜೆ.ಇ. ಮಹೇಶ್ ಸಂಬಂಧಪಟ್ಟ ನೀರಾವರಿ ಇಲಾಖೆಯ ಇಂಜಿನಿಯರ್‍ಗಳಾದ ಧರ್ಮರಾಜ್ ಮತ್ತು ನಾಗರಾಜ್ ಅವರುಗಳನ್ನು ಠಾಣೆಗೆ ಕರೆಸಿ ಮೃತ ಬಾಲಕನ ಪೋಷಕರು ಮತ್ತು ಸ್ಥಳೀಯ ಮುಖಂಡರ ಸಮಕ್ಷಮದಲ್ಲಿ ಸಭೆ ನಡೆಸಿದರು. ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಯಿಂದಲೇ ಈ ಘಟನೆ ಸಂಭವಿಸಿದೆ. ಹಲವು ವರ್ಷಗಳಿಂದ ಇದೇ ರೀತಿಯಲ್ಲಿ ಮುನ್ಸೂಚನೆ ಇಲ್ಲದೆ ನಾಲೆಗಳಿಗೆ ನೀರನ್ನು ಬಿಟ್ಟ ಪರಿಣಾಮ ಅನೇಕ ಸಾವುಗಳು ಸಂಭವಿಸಿದೆ. ಈಗಲೂ ಕೂಡಾ ಅಧಿಕಾರಿಗಳ ಬೇಜಾಬ್ದಾರಿಯಿಂದ ಈ ಅನಾಹುತ ಸಂಭವಿಸಿವೆ. ತಕ್ಷಣ ಇವರ ಮೇಲೆ ಎಫ್‍ಐಆರ್ ದಾಖಲಿಸಿ, ಪರಿಹಾರ ಕೊಡಿಸಬೇಕೆಂದು ಮೃತನ ಪೋಷಕರು ಮತ್ತು ಸ್ಥಳೀಯರು ಒತ್ತಾಯಿಸಿದರು.
ಆದರೆ, ಅಧಿಕಾರಿಗಳು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡು ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಿದಂತೆ ಮೂನ್ಸೂಚನೆ ನೀಡಿಯೇ ನೀರನ್ನು ನಾಲೆಗಳಿಗೆ ಬಿಡಲಾಗಿದೆ ಎಂದರು.
ಆದರೆ ಇದನ್ನು ಒಪ್ಪದ ಪೋಷಕರು ಮತ್ತು ಸ್ಥಳೀಯರು ಮುನ್ಸೂಚನೆಯ ಸೈರನ್ ಕೊಟ್ಟಿದ್ದರೆ ಈ ಅನಾಹುತವೇ ನಡೆಯುತ್ತಿರಲಿಲ್ಲ. ಎಫ್‍ಐಆರ್ ದಾಖಲಿಸಲೇಬೇಕು ಎಂದು ಆಗ್ರಹಿಸಿದರು.
ಆ ವೇಳೆಗೆ ಸ್ಥಳಕ್ಕಾಗಮಿಸಿದ ಡಿವೈಎಸ್‍ಪಿ ಟಿ. ಕುಮಾರ್, ಆಕ್ರೋಶಗೊಂಡಿದ್ದ ಪೋಷಕರು ಹಾಗೂ ಸ್ಥಳೀಯರನ್ನು ಸಮಾಧಾನಿಸಿ, ಸಧ್ಯಕ್ಕೆ ಮೃತದೇಹದ ಶವಪರೀಕ್ಷೆ ಆಗಲು ಅವಕಾಶ ಕೊಡಿ. ನಂತರ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ, ಅವರ ಮೇಲಾಧಿಕಾರಿಗಳ ಅವಗಾಹನೆಗೆ ಕಳುಹಿಸಲಾಗುವದು. ಮುಂದಿನ ದಿನಗಳಲ್ಲಿ ಮೃತನ ಕುಟುಂಬದವರಿಗೆ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭ ಮಾತನಾಡಿದ ರಾಜಾರಾವ್ ನಾಲೆಗಳಿಗೆ ಹಾರಂಗಿ ಜಲಾಶಯದ ನೀರನ್ನು ಬಿಡುವ ವಿಚಾರದಲ್ಲಿ ಕಳೆದ ಹಲವು ವರ್ಷಗಳಿಂದ ನೀರಾವರಿ ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ವರ್ತಿಸುತ್ತಿದ್ದು, ಉನ್ನತ ಅಧಿಕಾರಿಗಳು ತಕ್ಷಣ ಇವರನ್ನು ವರ್ಗಾವಣೆ ಮಾಡಿ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ನಿನ್ನೆ ನಾಲೆಗಳಿಗೆ ಯಾವದೇ ಮುನ್ಸೂಚನೆ ನೀಡದೇ ನೀರನ್ನು ಹರಿಸಿದ ಪರಿಣಾಮ ಮುಗ್ಧ ಮಗುವೊಂದು ಬಲಿಯಾಗಲು ಅಧಿಕಾರಿಗಳು ಕಾರಣರಾಗಿದ್ದಾರೆ.
ಇವರು ಖಾಸಗಿ ವಿದ್ಯುತ್ ಉತ್ಪಾದನಾ ಘಟಕದವರಿಗೆ ಕಾಲುವೆ ಯಲ್ಲಿ ನೀರನ್ನು ಹರಿಸಿಕೊಳ್ಳುವ ಜವಾಬ್ದಾರಿಯ ಜೊತೆಗೆ ಕೀಲಿಕೈಯನ್ನು ಅವರಿಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ವೃತ್ತನಿರೀಕ್ಷಕ ಪರಶಿವಮೂರ್ತಿ, ಗ್ರಾ.ಪಂ. ಸದಸ್ಯ ಭಾಸ್ಕರ್ ನಾಯಕ್ ಸ್ಥಳೀಯ ಮುಖಂಡರಾದ ಕೆ.ಸಿ. ನಂಜುಂಡಸ್ವಾಮಿ, ಕುಮಾರ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್, ನೀರು ಬಳಕೆದಾರರ ಸಂಘದ ಗಣೇಶ್, ಜಿ.ಎಲ್. ನಾಗರಾಜ್, ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ನಾಣಿ ಮುಂತಾದವರು ಇದ್ದರು.