ಮಡಿಕೇರಿ, ಅ. 21: ಬ್ಯಾಂಕ್, ಹಣಕಾಸು ಸಂಸ್ಥೆ, ಲೇವಾದೇವಿದಾರರಿಂದ ಹಣ ಸಾಲ ಪಡೆಯಬೇಕಾದರೆ ಏನೆಲ್ಲ ಹರಸಾಹಸ ಪಡಬೇಕಾಗುತ್ತದೆ ಎಂಬದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯವಾಗಿದೆ. ನೂರೆಂಟು ದಾಖಲೆಗಳು, ಹತ್ತಾರು ಸಾಕ್ಷಿಗಳು, ಸಾಲದಕ್ಕೆ ಪ್ರಮಾಣಪತ್ರ ಹೀಗೆ..., ತಿಂಗಳುಗಟ್ಟಲೆ ಅಲೆದಾಡಬೇಕಾಗುತ್ತದೆ. ಸಾಲದ ಮೇಲಿನ ಬಡ್ಡಿ ಕೂಡ ಹಾಗೇ ಇರುತ್ತದೆ. ಸಾಲ ಪಡೆದಾತ ಬಡ್ಡಿ ಕಟ್ಟಿ ತೀರಿಸುವಷ್ಟರಲ್ಲಿಯೇ ಆತನ ಆಯುಷ್ಯ ಮುಗಿದಿರುತ್ತದೆ. ಅಂತಹದ್ದರಲ್ಲಿ ಇಲ್ಲೊಂದು ಸಂಸ್ಥೆ ಅತಿ ಕಡಿಮೆ ಬಡ್ಡಿ ದರದಲ್ಲಿ ಕೇವಲ 72 ಗಂಟೆಯೊಳಗಡೆ ಸಾಲ ನೀಡುವ ಆಮಿಷದೊಂದಿಗೆ ಅಮಾಯಕರನ್ನು ವಂಚನೆಯ ಬಲೆಗೆ ಬೀಳಿಸುವ ಯತ್ನದಲ್ಲಿದೆ. ಯಾವದೇ ವಿಳಾಸವಿಲ್ಲದೆ ಕೇವಲ ಎರಡು ಮೊಬೈಲ್ ಸಂಖ್ಯೆಗಳನ್ನು ಜಾಹೀರಾತು ಮೂಲಕ ನೀಡಿ ಕರೆ ಮಾಡಿದವರಿಂದ ಹಣ ಪೀಕುತ್ತಿರುವದು ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡು ಹತಾಶರಾದವರು ಇದೀಗ ವಿಧಿ ಇಲ್ಲದೆ ನ್ಯಾಯಕ್ಕಾಗಿ ಪೊಲೀಸ್ ಇಲಾಖೆಯ ಮೊರೆ ಹೋಗಿರುವ ಪ್ರಸಂಗ ಎದುರಾಗಿದೆ.

ಮೊನ್ನೆ, ಮೊನ್ನೆಯಾಗಿ ಪತ್ರಿಕೆಗಳಲ್ಲಿ ಜಾಹೀರಾತೊಂದು ಹರಿದಾಡಿದೆ. ‘ಶ್ರೀ ಲಕ್ಷ್ಮಿ ಗ್ರಾಮೀಣ ಫೈನಾನ್ಸ್' ಎಂಬ ಹೆಸರಿನ ಜಾಹೀರಾತಿನಲ್ಲಿ ‘ವೈಯಕ್ತಿಕ ಸಾಲ, ವ್ಯವಸಾಯ ಸಾಲ, ಮನೆ ಸಾಲ, ಶಿಕ್ಷಣ ಸಾಲ, ಜಮೀನು ಸಾಲ, ಫ್ಲಾಟ್ ಮೇಲೆ ಸಾಲ, ಸರ್ಟಿಫಿಕೇಟ್ ಮೇಲೆ ಸಾಲ' ಎಂದು ನಮೂದಿಸಿದ್ದು, ಎಲ್ಲ ವಿಧವಾದ ಸಾಲಗಳಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ 72 ಗಂಟೆಯೊಳಗೆ ಸಾಲ ಮಂಜೂರಾತಿ ಎಂದು ಪ್ರಕಟಿಸಲಾಗಿದೆ. ಸಂಪರ್ಕಿಸಲು 9986107898 ಹಾಗೂ 9513880273 ಎಂಬ ಎರಡು ಸಂಖ್ಯೆಗಳನ್ನು ನೀಡಲಾಗಿದೆ.

ಮಾರು ಹೋದರು

ಸಾಲ ಪಡೆಯಲು ಕಷ್ಟ ಪಡಬೇಕಾದ ಈ ಕಾಲದಲ್ಲಿ ಇಷ್ಟೊಂದು ಸುಲಭದಲ್ಲಿ ಸಾಲ ಸಿಗುತ್ತದಲ್ಲ ಎಂಬ ಆಸೆಯೊಂದಿಗೆ ಹಲವಾರು ಮಂದಿ ಸಂಪರ್ಕ ಮಾಡಿದ್ದಾರೆ. ಸಂಪರ್ಕ ಮಾಡಿದವರ ವಿವರ ಪಡೆದುಕೊಂಡಿರುವ ಸಂಸ್ಥೆಯ ಸಿಬ್ಬಂದಿಗಳೆಂದುಕೊಂಡವರು ಆ ವೆಚ್ಚ, ಈ ವೆಚ್ಚ ವಿಮಾ ಕಂತು ಎಂದೆಲ್ಲ ಹೇಳಿ ಅವರದ್ದೇ ಬ್ಯಾಂಕ್ ಖಾತೆ ಸಂಖ್ಯೆ ನೀಡಿ ಅದಕ್ಕೆ ಹಣ ತುಂಬಲು ಹೇಳಿದ್ದಾರೆ. ಲಕ್ಷಗಟ್ಟಲೆ ಹಣ ಸಿಗುತ್ತದೆಂಬ ಆಸೆಯಿಂದ ಎಲ್ಲರೂ ರೂ. 6, 7 ಸಾವಿರದಿಂದ 10 ಸಾವಿರದವರೆಗೆ ಹಣ ಜಮಾ ಮಾಡಿದ್ದಾರೆ. ಆದರೆ, ಈವರೆಗೂ ಯಾರೊಬ್ಬರಿಗೂ ಸಾಲದ ಹಣ ಬಂದಿಲ್ಲ. ಬದಲಿಗೆ ಸಂಸ್ಥೆಯವರ ಒಂದು ಮೊಬೈಲ್ ‘ಸ್ವಿಚ್ ಆಫ್' ಆಗಿದ್ದರೆ ಮತ್ತೊಂದರಿಂದ ಯಾವದೇ ಸ್ಪಂದನ ಸಿಗುತ್ತಿಲ್ಲ.

ಸಂಸ್ಥೆ ಎಲ್ಲಿದೆ...?

ಹಣ ಕಳೆದುಕೊಂಡವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಈ ಬಗ್ಗೆ ‘ಶಕ್ತಿ'ಯ ಗಮನಕ್ಕೆ ತಂದಿದ್ದಾರೆ. ಈ ನಿಟ್ಟಿನಲ್ಲಿ ‘ಶಕ್ತಿ' ಸಂಸ್ಥೆಯ ದೂರವಾಣಿಯನ್ನು ಸಂಪರ್ಕಿಸಿದಾಗ ಒಂದು ‘ಸ್ವಿಚ್‍ಆಫ್' ಆಗಿತ್ತು. ಮತ್ತೊಂದಕ್ಕೆ ಎಡೆಬಿಡದೆ ಕರೆ ಮಾಡಿದಾಗ ಅತ್ತಲಿಂದ ಮಾತನಾಡಿದ ವ್ಯಕ್ತಿ ‘ಎಲ್ಲಿಂದ ಕರೆ ಮಾಡುತ್ತಿದ್ದೀರಿ..., ಯಾವ ಲೋನ್ ಬೇಕು' ಎಂದು ಕೇಳಿದ್ದಾರೆ. ಮನೆ ಸಾಲಕ್ಕಾಗಿ ರೂ. 1.50 ಲಕ್ಷ ಬೇಕೆಂದಾಗ

(ಮೊದಲ ಪುಟದಿಂದ) ಫೋನ್ ಮತ್ತೋರ್ವನ ಕೈಗೆ ಹೋಗುತ್ತದೆ. ಆತ ಮೊಬೈಲ್ ಸಂಖ್ಯೆ ಪಡೆದುಕೊಂಡು ‘ಎರಡು ಭಾವಚಿತ್ರ, ಆಸ್ತಿ, ನಿವೇಶನದ ದಾಖಲೆ ಪತ್ರ, ಬ್ಯಾಂಕ್ ಪಾಸ್‍ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಿಕೊಡಿ' ಎಂದು ಹೇಳುತ್ತಾನೆ. ‘ನಿಮ್ಮ ವಿಳಾಸ ಕೊಡಿ, ಪ್ರತಿಗಳನ್ನು ಕೊರಿಯರ್ ಮಾಡುತ್ತೇವೆ' ಎಂದಾಗ ‘ನಮ್ಮದು ಮುಖ್ಯ ಕಚೇರಿ ಹೈದರಾಬಾದ್ ನಲ್ಲಿದೆ. ಮಡಿಕೇರಿಯಲ್ಲಿ ಕಚೇರಿ ತೆರೆಯುತ್ತೇವೆ. ಈಗ ತುರ್ತಾಗಿ ಈ ಮೇಲ್ ಮೂಲಕ ಕಳುಹಿಸಿ, ನಮ್ಮ ಇಮೇಲ್ ವಿಳಾಸವನ್ನು ನಿಮ್ಮ ನಂಬರಿಗೆ ಮೆಸೆಜ್ ಮಾಡುತ್ತೇವೆ' ಎಂದು ಹೇಳುತ್ತಾರೆ.

ಹಣ ಹೋಯಿತು

ಇದೇ ರೀತಿ ಕರೆ ಮಾಡಿದ ಎಲ್ಲರಿಗೂ ಅವರ ಇಮೇಲ್ ವಿಳಾಸ ಬಂದಿದ್ದು, ನಂಬಿದ ಗ್ರಾಹಕರು ತಮ್ಮ ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಕೂಡಲೇ ಅತ್ತಲಿಂದ ಕರೆ ಬರುತ್ತದೆ. ಇಂತಿಷ್ಟು ಲಕ್ಷ ಸಾಲಕ್ಕೆ ಇಂತಿಷ್ಟು ಕಂತಿನ ಹಣ ಪಾವತಿ ಮಾಡಬೇಕಿದೆ. ಅಲ್ಲದೆ ಸ್ಟ್ಯಾಂಪ್ ವೆಚ್ಚ, ಇಂತಿಷ್ಟು ಪಾವತಿ ಮಾಡಬೇಕೆಂದು ಮತ್ತೊಂದು ಕರೆ ಹೀಗೆ 5ರಿಂದ 7 ಸಾವಿರ ರೂಪಾಯಿ ಯಷ್ಟು ಬೇಡಿಕೆ ಬರುತ್ತದೆ. ಜೊತೆಗೆ ಅವರ ಬ್ಯಾಂಕ್ ಖಾತೆ ಸಂಖ್ಯೆ ಕೂಡ. ಅದು ಪಾವತಿಯಾದ ಬಳಿಕ ಮತ್ತೊಂದು ಕರೆ ಬರುತ್ತದೆ. ವಿಮಾ ಪಾಲಿಸಿಗಾಗಿ ರೂ. 3 ಸಾವಿರ ಪಾವತಿ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಸಾಲ ಪಡೆದಾತರಿಗೆ ಅವಘಡ ಸಂಭವಿಸಿ ಮೃತರಾದರೆ ನಂತರ ಕಂತಿನ ಹಣ ಪಾವತಿ ಮಾಡಬೇಕಾಗಿಲ್ಲ. ವಿಮಾ ಹಣದಿಂದ ಪಡೆದುಕೊಳ್ಳುತ್ತೇವೆ ಎಂದು ನಂಬಿಸಲಾಗುತ್ತದೆ. ಇದನ್ನೂ ನಂಬಿದ ಕೆಲವರು ಒಟ್ಟು 10 ಸಾವಿರಕ್ಕೂ ಅಧಿಕ ಹಣ ಪಾವತಿ ಮಾಡಿದ್ದಾರೆ. ಪೊಲೀಸರಿಗೆ ದೂರು ಸಲ್ಲಿಸಿರುವ ಈರ್ವರು ತಲಾ ರೂ. 10,200ರಂತೆ 20,400 ಹಣವನ್ನು ‘ಉಮಾಪತಿ ಲಕ್ಷ್ಮಿ ನರಸಮ್ಮ, ಬೆಂಗಳೂರಿನ ಮೋತಿನಗರದ ಎಸ್.ಬಿ.ಐ. ಖಾತೆ ಸಂಖ್ಯೆ 20292198042 ಈ ಖಾತೆಗೆ ಜಮೆ ಮಾಡಿದ್ದಾರೆ. ‘ತಾ. 18ರಂದು ನಿಮ್ಮ ಖಾತೆಗೆ ರೂ. 3 ಲಕ್ಷ ಹಣ ಜಮೆಯಾಗಲಿದೆ' ಎಂದು ಭರವಸೆ ಕೂಡ ಸಂಸ್ಥೆಯವರು ನೀಡಿದ್ದಾರೆ. ಆದರೆ ಇದುವರೆಗೂ ಬಿಡಿಕಾಸು ಕೂಡ ಬಂದಿರುವದಿಲ್ಲ.

ಇನ್ನೂ ಹಲವರು

ಈ ರೀತಿ ವಂಚನೆಯ ಜಾಲಕ್ಕೆ ಬಿದ್ದವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೂರ್ನಾಡು ವ್ಯಾಪ್ತಿಯಲ್ಲಿ ಸುಮಾರು 7 ಮಂದಿ ಇದೇ ರೀತಿ ಹಣ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಸಂಸ್ಥೆಯ ಮೊಬೈಲ್‍ಗೆ ಕರೆ ಮಾಡಿದರೆ ಯಾವದೇ ಪ್ರತಿಕ್ರಿಯೆ ಸಿಗದೆ ಹತಾಶರಾಗಿದ್ದಾರೆ.

ಮಾಧ್ಯಮ ಬಳಕೆ

ಸಂಸ್ಥೆಯವರು ಬಹಳ ಬುದ್ಧಿವಂತಿಕೆ ಉಪಯೋಗಿಸಿ ಮಾಧ್ಯಮಗಳನ್ನು ಬಳಸಿಕೊಂಡಿ ದ್ದಾರೆ. ಜಾಹೀರಾತು ಏಜೆನ್ಸಿಗಳ ಮೂಲಕ ಏಜೆನ್ಸಿಗಳನ್ನು ಬಳಸಿ ಇಮೇಲ್ ಮೂಲಕ ಅವನ್ನು ಕಳುಹಿಸುವದರೊಂದಿಗೆ ಆನ್‍ಲೈನ್ ಹಣ ಪಾವತಿ ಮಾಡಿ ಕಿಂಚಿತ್ತ್ ಸಂಶಯ ಬಾರದಂತೆ ವ್ಯವಹಾರ ನಡೆಸಿದ್ದಾರೆ. ಇದೀಗ ಹಣ ಕಳೆದುಕೊಂಡವರು ಪತ್ರಿಕೆಗಳ ಗಮನಕ್ಕೆ ತಂದಾಗಲೇ ಜಾಹೀರಾತು ದಾರರ ವಂಚನೆಯ ಜಾಲದ ಬಗ್ಗೆ ತಿಳಿದುಬಂದಿದೆ.

ಎಚ್ಚರವಿರಲಿ

ಪ್ರತಿನಿತ್ಯ ಅಲ್ಲಲ್ಲಿ ಈ ರೀತಿಯ ವಂಚನೆಯ ವಿಚಾರಗಳು ಬಹಿರಂಗವಾಗುತ್ತಿದ್ದರೂ ಜನರು ಆಸೆ, ಆಮಿಷಗಳಿಗೆ ಬಲಿಯಾಗುತ್ತಿರು ವದು ಹೆಚ್ಚಾಗುತ್ತಿದೆ. ಯಾವದೇ ಖಾತ್ರಿ, ಗೊತ್ತು ಗುರಿಯಿಲ್ಲದವರು ಖಾತೆಗೆ ಹಣ ಜಮಾ ಮಾಡಲು ಹೇಳಿದ ಮಾತ್ರಕ್ಕೆ ಹಣ ಜಮೆ ಮಾಡುವದು ಎಷ್ಟು ಸರಿ? ಇನ್ನಾದರೂ ಜನತೆ ಈ ಬಗ್ಗೆ ಎಚ್ಚರದಿಂದಿರಲೇಬೇಕೆಂಬದೇ ಆಶಯ.