ಬೆಂಗಳೂರು, ಜ. 3: “ಅವರು ಫೈರ್ ಬ್ರಾಂಡ್ ಇದ್ದ ಹಾಗೆ. ಈಗ ನಮ್ಮ ಇಲಾಖೆಗೆ ಬಂದಿದ್ದಾರೆ..!’ ಕೆಪಿಎಸ್‍ಸಿಯಲ್ಲಿ ಸುಧಾರಣೆ ತರುತ್ತಿರುವ ಸಂದರ್ಭದಲ್ಲೇ ಅದರ ಕಾರ್ಯದರ್ಶಿ ಹುದ್ದೆಯಿಂದ ಎತ್ತಂಗಡಿಯಾಗಿ ಆರೋಗ್ಯ ಇಲಾಖೆ ಆಯುಕ್ತರಾಗಿ ನೇಮಕಗೊಂಡ ಐಎಎಸ್ ಅಧಿಕಾರಿ ಸುಬೋದ್ ಯಾದವ್ ಬಗ್ಗೆ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು ನೀಡಿದ ಹೇಳಿಕೆಯಿದು. ಹೊಸ ವರ್ಷದ ಅಂಗವಾಗಿ ಆರೋಗ್ಯ ಇಲಾಖೆ ಹೊರತಂದಿರುವ ಕ್ಯಾಲೆಂಡರನ್ನು ವಿಕಾಸಸೌಧದಲ್ಲಿ ಸೋಮವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸುಬೋಧ್ ಯಾದವ್ ಫೈರ್ ಬ್ರಾಂಡ್ ಇದ್ದ ಹಾಗೆ. ಈಗ ನಮ್ಮ ಇಲಾಖೆಗೆ ಬಂದಿದ್ದಾರೆ. ಆಯುಕ್ತರು (ಸುಬೋಧ್) ಮತ್ತು ಪ್ರಧಾನ ಕಾರ್ಯದರ್ಶಿಗಳು (ಶಾಲಿನಿ ರಜನೀಶ್) ಬೆಂಕಿ ಮತ್ತು ನೀರು ಇದ್ದ ಹಾಗೆ. ಅವರಿಂದ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಇದಕ್ಕೆ ನಾವೆಲ್ಲರೂ ಕಾರಣರಾಗಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸಿ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳು ಸರಿ ಇದ್ದರೆ ಜನ ಖಾಸಗಿ ಆಸ್ಪತ್ರೆಗಳತ್ತ ಏಕೆ ಹೋಗುತ್ತಾರೆ ? ಖಾಸಗಿ ಆಸ್ಪತ್ರೆಗೆ ಹೋಗದೇ ಇದ್ದರೆ ಅವುಗಳನ್ನು ದೂಷಿಸುವ ಪರಿಸ್ಥಿತಿಯೂ ಬರುವದಿಲ್ಲ ಎಂದರು. ಐಎಎಸ್ ಅಧಿಕಾರಿ ಸುಬೋಧ್ ಯಾದವ್ ಅವರು ಈ ಹಿಂದೆ ಕೊಡಗು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.