ಸೋಮವಾರಪೇಟೆ, ಜೂ. 30: ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ನಗರದಲ್ಲಿ ಆಯೋಜಿಸಲಾಗಿರುವ ಒಂದು ವಾರಗಳ ಸುದರ್ಶನ ಕ್ರಿಯಾ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಇಲ್ಲಿನ ಅಲೋಕ ಸಭಾಂಗಣದಲ್ಲಿ ಒಂದು ವಾರಗಳ ಕಾಲ ಬೆಳಿಗ್ಗೆ 5.30 ರಿಂದ 7.30 ರವರೆಗೆ ಶಿಬಿರ ನಡೆಯಲಿದ್ದು, ಆರ್ಟ್ ಆಫ್ ಲಿವಿಂಗ್‍ನ ಮಂಗಳೂರಿನ ಶಿಕ್ಷಕಿ ಸುರೇಖಾ ಅವರು ಶಿಬಿರಾರ್ಥಿಗಳಿಗೆ ಯೋಗ ಶಿಕ್ಷಣ ನೀಡುತ್ತಿದ್ದಾರೆ.

ಶಿಬಿರದಲ್ಲಿ ಪ್ರತಿದಿನ ಯೋಗ, ಪ್ರಾಣಾಯಾಮ, ಕಪಾಲ್ ಭಾತಿ, ಭಸ್ತ್ರಿಕಾ, ಲಗು ವ್ಯಾಯಾಮ, ಧ್ಯಾನ, ಸುದರ್ಶನಾ ಕ್ರಿಯೆ ಸೇರಿದಂತೆ ಇತರ ಯೋಗ ಪ್ರಾಕಾರಗಳನ್ನು ತಿಳಿಸಿಕೊಡಲಾಗುತ್ತಿದೆ.

ಶಿಬಿರದ ಆಯೋಜಕರಾದ ರಾಗಿಣಿ ಮತ್ತು ವಿಜಯ್ ಮಾತನಾಡಿ, ಯೋಗಕ್ಕೆ ಇಂದು ವಿಶ್ವ ಮಾನ್ಯತೆ ದೊರೆತಿದ್ದರೂ ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿನಂತೆ ಭಾರತೀಯರೇ ಇದರಿಂದ ದೂರ ಉಳಿಯುತ್ತಿದ್ದಾರೆ. ಈ ಹಿನ್ನೆಲೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಾಮಾಜಿಕ ಸೇವೆಗಳೊಂದಿಗೆ ಗ್ರಾಮೀಣ ಭಾಗದಲ್ಲೂ ಯೋಗ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು. ಪ್ರತಿ ದಿನ ಬೆಳಗ್ಗೆ ಸೋಮವಾರಪೇಟೆಯ ಅಲೋಕ ಸಭಾಂಗಣ ಹಾಗೂ ಸಂಜೆ 5.30 ರಿಂದ 7.30 ರವರೆಗೆ ಶಾಂತಳ್ಳಿ ಗ್ರಾಮದ ಶ್ರೀಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಯೋಗ ಶಿಬಿರ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.