ಸುಂಟಿಕೊಪ್ಪ, ಸೆ. 9: ಸುಂಟಿಕೊಪ್ಪದ ಸುತ್ತಮುತ್ತಲಿನ ಗ್ರಾಮಗಳ ತೋಟಗಳಲ್ಲಿ ಕಾಡಾನೆ ದಾಂಧಲೆ ಮುಂದುವರೆದಿದ್ದು, ರೈತರಲ್ಲಿ, ತೋಟಗಳ ಮಾಲೀಕರಲ್ಲಿ ಆತಂಕ ಸೃಷ್ಟಿಯಾಗಿದೆ.

ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಗೆ ಸೇರಿದ ಮ್ಯಾಗಡೋರ್‍ವಿನ ಪಾರ್ವತಿ ತೋಟಕ್ಕೆ ಒಂಟಿ ಸಲಗವೊಂದು ರಾತ್ರಿ ವೇಳೆ ಲಗ್ಗೆಯಿಟ್ಟು ಅಲ್ಲಿದ್ದ ಭಾರೀ ಗಾತ್ರದ ತೆಂಗಿನ ಮರವನ್ನು ಕೆಡವಿ ಹಾಕಿದ್ದರಿಂದ ಪಕ್ಕದಲ್ಲಿ ಇದ್ದ ಕೊಟ್ಟಿಗೆ ಮೇಲೆ ಬಿದ್ದ ಪರಿಣಾಮ ಮೇಲ್ಛಾವಣಿ ಸಂಪೂರ್ಣ ಧ್ವಂಸಗೊಂಡಿದೆ.

ನಂತರ ಕಾಫಿ ತೋಟಕ್ಕೆ ನುಗ್ಗಿ ಬೇಲಿಯನ್ನು ತುಂಡರಿಸಿ ಹಾಕಿದಲ್ಲದೆ ಕಾಫಿ ಗಿಡಗಳನ್ನುü ತುಳಿದು ನಾಶ ಗೊಳಿಸಿದೆ. ಕೆಲವು ತಿಂಗಳುಗಳಿಂದ ಸುಂಟಿಕೊಪ್ಪ ಸುತ್ತಮುತ್ತಲಿನ ತೋಟಗಳಲ್ಲಿ ಕಾಡಾನೆಗಳು ನಿರಂತರವಾಗಿ ಫಸಲನ್ನು ನಷ್ಟ ಪಡಿಸುತ್ತಿದ್ದು, ರೈತರು ಕಂಗಾಲಾಗಿ ದ್ದಲ್ಲದೆ ಕಾಡಾನೆಗಳನ್ನು ಹಿಡಿಯ ಬೇಕೆಂದು ಅರಣ್ಯ ಇಲಾಖೆಯವರಲ್ಲಿ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ತೋಟದ ಮಾಲೀಕರಾದ ಟಿ.ಕೆ. ಭಾನುಮತಿ ಆರೋಪಿಸಿದ್ದಾರೆ.