ಸುಂಟಿಕೊಪ್ಪ, ನ. 4: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರಬರಾಜುಗೊಳ್ಳುತ್ತಿರುವ ಕುಡಿಯುವ ನೀರು ಕಲುಷಿತ ಗೊಂಡಿದ್ದು, ರೋಗ ರುಜಿನಗಳಿಗೆ ಆಹ್ವಾನ ನೀಡುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸುಂಟಿಕೊಪ್ಪ ಹೋಬಳಿ ಕೇಂದ್ರದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರೇ ನೆಲೆಸಿದ್ದಾರೆ. ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ನೂರಾರು ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಒಳರೋಗಿಗಳು ದಾಖಲಾಗುತ್ತಿದ್ದಾರೆ. ಆಸ್ಪತ್ರೆಯ ವಸತಿ ಗೃಹದಲ್ಲಿ ನೆಲೆಸಿರುವ ಸಿಬ್ಬಂದಿ ವರ್ಗದವರಿಗೂ ಕುಡಿಯುವ ಬೋರ್‍ವೆಲ್‍ನಲ್ಲಿರುವ ಸಿಂಟೆಕ್ಸ್ ಟ್ಯಾಂಕ್‍ನಿಂದಲೇ ಸರಬರಾಜು ಆಗುತ್ತಿದೆ. ಆದರೆ ಸಿಂಟೆಕ್ಸ್ ಟ್ಯಾಂಕ್ ಶುಚಿಗೊಳಿಸದೆ ವರ್ಷಗಳೇ ಕಳೆದಿದೆ. ಹುಳ ಹುಪ್ಪಟಗಳು ಈ ನೀರಿನ ಶೇಖರಣಾ ಕೇಂದ್ರದಲ್ಲಿ ವಾಸ್ತವ್ಯ ಹೂಡಿದೆ. ಸಿಂಟೆಕ್ಸ್ ಟ್ಯಾಂಕ್‍ನ ಮೇಲೆ ಗಿಡಗಂಟಿಗಳು ಬೆಳೆದು ಕಾಡು ಪಾಲಾಗಿದೆ. ಹಾಗಿದ್ದರೂ ಗ್ರಾಮ ಪಂಚಾಯಿತಿ ಹಾಗೂ ಆಸ್ಪತ್ರೆಯ ಮೇಲುಸ್ತುವಾರಿ ರಕ್ಷಾ ಸಮಿತಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಇದರ ಪರಿವೇ ಇಲ್ಲದಾಗಿದೆ.

ಆರೋಗ್ಯ ಕೇದ್ರಕ್ಕೆ ರಕ್ಷಾ ಸಮಿತಿ ಸರಕಾರ ಆದೇಶದ ಪ್ರಕಾರ ರಚಿಸಲಾಗಿದೆ. ಗ್ರಾ.ಪಂ. ಅಧ್ಯಕ್ಷರು ಇದರ ಅಧ್ಯಕ್ಷರಾಗಿದ್ದಾರೆ. ತಾ.ಪಂ. ಸದಸ್ಯರು, ಗ್ರಾ.ಪಂ. ಸದಸ್ಯರು ಈ ಸಮಿತಿ ಸದಸ್ಯರಾಗಿದ್ದಾರೆ. ಆದರೆ ಈ ಸಮಿತಿ ಸಭೆ ನಡೆಸದೆ ತಿಂಗಳುಗಳೇ ಉರುಳಿದೆ. ರಕ್ಷಾ ಸಮಿತಿ ಇದ್ದೂ ಇಲ್ಲದಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಲ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವ ರಕ್ಷಾ ಸಮಿತಿ ನಿದ್ರಾವಸ್ಥೆಯಲ್ಲಿರುವದರಿಂದ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಅನಾರೋಗ್ಯ ಕೇಂದ್ರವಾಗಿ ನಲುಗುತ್ತಿದೆ.

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಸುಂಟಿಕೊಪ್ಪ ಹೋಬಳಿಯ ಬಡ ಜನತೆಗೆ ಆಶಾಕಿರಣವಾಗಿದೆ. ಆದರೆ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಆರೋಗ್ಯ ರಕ್ಷಾ ಸಮಿತಿಯವರಿಗೆ ಯಾವದೇ ರೀತಿಯ ನಿಗಾ ಇಲ್ಲ ಕನಿಷ್ಟ ಕುಡಿಯುವ ನೀರು ಆಸ್ಪತ್ರೆಗೆ ಬಳಸಲಾಗುತ್ತಿದ್ದು, ಈ ಸಿಂಟೆಕ್ಸ್ ಟ್ಯಾಂಕ್‍ನಲ್ಲಿ ಪಾಚಿ ಕಟ್ಟಿದೆ ಸಿಂಟೆಕ್ಸ್ ಟ್ಯಾಂಕ್ ಇರಿಸಿದ ಸುತ್ತಲ್ಲೂ ಕಾಡು ಗಿಡಗಂಟಿಗಳು ಬೆಳೆದು ನಿಂತು ಹಾವು, ಚೇಳುಗಳ ಅವಾಸ ಸ್ಥಾನವಾಗಿದೆ.

ಈ ನೀರನ್ನು ಕುಡಿದರೆ ರೋಗಿಗಳ ಆರೋಗ್ಯ ಏನಾಗಬಹುದು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.