ಸಿದ್ದಾಪುರ, ನ. 17: ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಕಾರ್ಮಿಕರನ್ನು ಅಟ್ಟಾಡಿಸಿ ಬಲಿ ತೆಗೆದುಕೊಳ್ಳುತ್ತಿದ್ದ ಪುಂಡಾನೆಯೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಆ ಮೂಲಕ ಈ ತಿಂಗಳು ಜಿಲ್ಲೆಯಲ್ಲಿ ನಾಲ್ಕನೇ ಪುಂಡಾನೆ ಸೆರೆಯಾದಂತಾಗಿದೆ. ಸಿದ್ದಾಪುರದ ಸಮೀಪದ ಬಿ.ಬಿ.ಟಿ.ಸಿ. ಕಂಪೆನಿಗೆ ಸೇರಿದ ಬಾಡಗ ಬಾಣಂಗಾಲ ಗ್ರಾಮದ ವ್ಯಾಪ್ತಿಯ ಚೌಟಿಕಾಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಪುಂಡಾನೆಯೊಂದು ಕಾರ್ಮಿಕರಿಗೆ ಹಾಗೂ ಸಾರ್ವಜನಿಕರನ್ನು ಕಂಡಾಗ ಅಟ್ಟಿಸಿ ಉಪಟಳ ನೀಡುತ್ತಿತ್ತು. ಇಂದು ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸಾಕಾನೆಗಳಾದ ಅಭಿಮನ್ಯು, ಹರ್ಷ, ಗಜೇಂದ್ರ, ದ್ರೋಣ ಇವುಗಳೊಂದಿಗೆ ಮಾವುತರು ಹಾಗೂ ವೈದ್ಯರಾದ ಡಾ. ಉಮಾಶಂಕರ್ ಹಾಗೂ ಸಹಾಯಕ ವೆಂಕಟೇಶ್ ಅವರು ಸಿ. ಚೌಡಿಕಾಡು ಕಾಫಿ ತೋಟದೊಳಗೆ ಕಾರ್ಯಾಚರಣೆ ನಡೆಸಿ 35 ವರ್ಷ ಪ್ರಾಯದ ಪುಂಡಾನೆಯೊಂದನ್ನು ಅರೆವಳಿಕೆ ಚುಚ್ಚು ಮದ್ದನ್ನು ಹಾರಿಸಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಅರೆವಳಿಕೆ ಮದ್ದು ಪುಂಡಾನೆಯ ಶರೀರಕ್ಕೆ ನುಸುಳಿದ ಕೂಡಲೇ ಅಂದಾಜು 1 ಕಿ.ಮೀ. ದೂರದವರೆಗೆ ಓಡಿ ನಂತರ ನೆಲಕ್ಕೆ ಉರುಳಿ ಬಿತ್ತು. ಕೂಡಲೇ ಅರಣ್ಯ ಸಿಬ್ಬಂದಿಗಳು, ಮಾವುತರು, ಕಾವಡಿಗರು ಸೇರಿ ತಲೆಗೆ ನೀರು ಸುರಿದು ಹಗ್ಗವನ್ನು ಕಾಲಿಗೆ ಬಿಗಿಯಾಗಿ ಕಟ್ಟಿದ್ದರು. ಆದರೆ ನೆಲಕ್ಕೆ ಬಿದ್ದ ಪುಂಡಾನೆಗೆ ಮದವೇರಿದ್ದ ಹಿನ್ನೆಲೆಯಲ್ಲಿ ನೆಲದಿಂದ ಒಮ್ಮೆಲೆ ಎದ್ದು ನಿಲ್ಲಲು ಯತ್ನಿಸಿದಾಗ ಒಂದು ಕ್ಷಣ ಸಾರ್ವಜನಿಕರು ಹಾಗೂ ಸಾಕಾನೆಗಳು ಭಯದಿಂದ ದೂರ ಸರಿಯಬೇಕಾಯಿತು. ಸಾಕಾನೆಗಳು ಸಮೀಪಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದವು. ಆದರೆ ಅಭಿಮನ್ಯು ತನ್ನ ಶಕ್ತಿಯನ್ನು ಬಳಸಿ ಪುಂಡಾನೆಯನ್ನು ಎಳೆದು ತರಲು ಶ್ರಮ ಪಡುತ್ತಿತ್ತು. ತೋಟದ ಮಧ್ಯ ಭಾಗದಿಂದ ಪುಂಡಾನೆಯನ್ನು ಎಳೆದು ತರುವ ಸಂದರ್ಭದಲ್ಲಿ ಗರ್ವದಿಂದ ಪುಂಡಾನೆಯು ಬರಲು ನಿರಾಕರಿಸುತ್ತಿದ್ದ ದೃಶ್ಯ ಕಂಡುಬಂತು.
ಇಂದು ಪುಂಡಾನೆಗೆ ಅರೆವಳಿಕೆ ಮದ್ದು ಸಿಡಿಸುವ ಸಂದರ್ಭ ಇತರ ಕಾಡಾನೆಗಳು ಗುಂಪಿನಿಂದ ಚದುರಿ ತೋಟದೊಳಗೆ ಕಾಫಿ ಗಿಡಗಳ ನಡುವೆ ಓಡಿ ಹೋದವು. ಸಿದ್ದಾಪುರ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕಳೆದ ಕೆಲವು ತಿಂಗಳ ಹಿಂದೆ ಹಲವು ಕಾರ್ಮಿಕರನ್ನು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾಡಾನೆಗಳಿಗೆ ಬಲಿಯಾದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಅರಣ್ಯ ಇಲಾಖೆಯ ಮುಖಾಂತರ ಪುಂಡಾನೆಗಳನ್ನು ಸೆರೆಹಿಡಿಯಲು ಒತ್ತಾಯಿಸಿದ ಮೇರೆಗೆ ಸರ್ಕಾರವು 4 ಪುಂಡಾನೆಗಳನ್ನು ಸೆರೆಹಿಡಿಯಲು ಅನುಮತಿ ನೀಡಿತ್ತು. ಈಗಾಗಲೇ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ 2 ಕಾಡಾನೆ ಹಾಗೂ ಸಿದ್ದಾಪುರ ವ್ಯಾಪ್ತಿಯಲ್ಲಿ 2 ಕಾಡಾನೆಗಳನ್ನು ಸೆರೆಹಿಡಿಯಲಾಗಿದೆ. ಕಳೆದ ಒಂದು ವಾರಗಳಿಂದ ನಿರಂತರವಾಗಿ ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖಾದಿ üಕಾರಿಗಳು ಹಾಗೂ ಸಿಬ್ಬಂದಿ, ಕಾವಾಡಿಗರು, ಮಾವುತರು ರಾತ್ರಿ- ಹಗಲು ಸುತ್ತಾಡಿ ದಣಿದಿದ್ದಾರೆ. ಅದೇ ರೀತಿ ಸಾಕಾನೆಗಳು ಕೂಡ ಸಾಥ್ ನೀಡಿವೆ. 4 ಕಾಡಾನೆಗಳನ್ನು ಸೆರೆಹಿಡಿಯುವ ಮೂಲಕ ಸ್ವಲ್ಪ ಮಟ್ಟಿಗೆ ಕಾರ್ಮಿಕರಿಗೆ ಹಾಗೂ ಕಾಫಿ ತೋಟದ ಮಾಲೀಕರಿಗೆ ನಿಟ್ಟುಸಿರು ಬಿಡುವಂತಾಗಿದೆ. 4 ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿದ್ದ ಮಡಿಕೇರಿ ವಿಭಾಗದ ಡಿ.ಎಫ್.ಓ. ಏಡುಕೊಂಡಲ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಆದೇಶ ನೀಡಿದ್ದ 4 ಪುಂಡಾನೆಗಳನ್ನು ಸೆರೆ ಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಉಪಟಳ ನೀಡುವ ಪುಂಡಾನೆಗಳನ್ನು ಗುರುತಿಸಿ ಸೆರೆಹಿಡಿಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು. ಇನ್ನೊಂದು ಪುಂಡಾನೆಯೊಂದನ್ನು ಎಫ್.ಎಂ.ಖಾನ್ ಅವರ ಕಾಫಿ ತೋಟದಲ್ಲಿ ಸೆರೆ ಹಿಡಿದು ಕಬಿನಿಗೆ ಬಿಡಲಾಗುವದು ಎಂದರು. ಎಫ್.ಎಂ. ಖಾನ್ ಅವರ ಕಡಗದಾಳುವಿನ ತೋಟದಲ್ಲಿರುವ ಪುಂಡಾನೆಯ ಕಾಲಿಗೆ ಗಾಯವಾಗಿದ್ದು, ಇದನ್ನು ಸೆರೆಹಿಡಿದ ಬಳಿಕ ಚಿಕಿತ್ಸೆ ಕೊಡಿಸಲಾಗುವದೆಂದರು. ಕಾರ್ಯಾಚರಣೆ ನಡೆಸಿ ಸೆರೆಹಿಡಿದ 4 ಪುಂಡಾನೆಗಳನ್ನು ದುಬಾರೆ ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿದ್ದು, ಮುಂದಿನ ದಿನಗಳಲ್ಲಿ ಮನುಷ್ಯನಿಗೆ ಹಾಗೂ ಕೃಷಿ ಫಸಲಿಗೆ ಹಾನಿ ಮಾಡುವ ಪುಂಡಾನೆಗಳನ್ನು ಸೆರೆಹಿಡಿಯಲು ಪ್ರಸ್ತಾವನೆ ಸಲ್ಲಿಸಿ 6 ತಿಂಗಳ ಬಳಿಕ ಸೆರೆಹಿಡಿಯುವ ಯೋಜನೆ ರೂಪಿಸಲಾಗುವದೆಂದರು.
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ, ಎಸಿಎಫ್ ಎಂ.ಎಸ್. ಚಿಣ್ಣಪ್ಪ, ಸುರೇಶ್, ವಲಯ ಅರಣ್ಯಾಧಿಕಾರಿಗಳಾದ ಗೋಪಾಲ್, ಶಿವರಾಂ, ನೆಹರು, ದೇವಿಪ್ರಸಾದ್, ಉಪವಲಯ ಅರಣ್ಯ ಅಧಿಕಾರಿ ದೇವಯ್ಯ, ರಂಜನ್, ಠಾಣಾಧಿಕಾರಿ ಸಂತೋಷ್ ಕಶ್ಯಪ್, ಇನ್ನಿತರರು ಹಾಜರಿದ್ದರು.