ಸಿದ್ದಾಪುರ, ಡಿ. 19: ಸ್ವತಃ ಗ್ರಾ.ಪಂ. ಅಧ್ಯಕ್ಷರೇ ಗುತ್ತಿಗೆ ಕೆಲಸಗಳನ್ನು ಮಾಡಿಸುತ್ತಿದ್ದು, ಸಿದ್ದಾಪುರ ಗ್ರಾ.ಪಂ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಿ.ಪಿ.ಐ (ಎಂ) ಮುಖಂಡ ಅನಿಲ್ ಕುಟ್ಟಪ್ಪ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾ.ಪಂ. ಅಧ್ಯಕ್ಷರು ಸ್ವತಃ ಗುತ್ತಿಗೆ ಕಾಮಗಾರಿ ಕೈಗೊಂಡಿದ್ದು, ಆ ಬಿಲ್‍ಗಳನ್ನು ಜಮಾಬಂಧಿ ಸಭೆಯಲ್ಲಿ ಪ್ರಸ್ತಾಪಿಸದೇ ಹಣ ಬಿಡುಗಡೆ ಮಾಡಲಾಗಿದೆ.
ವಿರೋಧ ಪಕ್ಷವು ಕೂಡ ಈ ವಿಚಾರದಲ್ಲಿ ಚಕಾರವೆತ್ತದೇ ಪರೋಕ್ಷವಾಗಿ ಅಧ್ಯಕ್ಷರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದಾಪುರ ವ್ಯಾಪ್ತಿಯ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣದೆ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಹೇಳಿಕೆಯನ್ನು ನೀಡುತ್ತಾ, ಪುಕ್ಕಟೆ ಪ್ರಚಾರವನ್ನು ಪಡೆಯುತ್ತಿದ್ದು, ಜನವಸತಿ ಪ್ರದೇಶದಲ್ಲಿ ಕಸವಿಲೇವಾರಿ ಮಾಡಬಾರದು ಎಂದು ತಮ್ಮದೇ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಮೇಲೆ ವಿರೋಧ ಪಕ್ಷದ ಬೆಂಬಲದೊಂದಿಗೆ ಖಂಡನಾ ನಿರ್ಣಯವನ್ನೂ ಮಾಡಿದ್ದಾರೆ. ಈ ಹಿಂದೆ ಕರಡಿಗೋಡುವಿನಿಂದ ಆಯ್ಕೆಯಾಗಿದ್ದ ಸದಸ್ಯರೋರ್ವರು, ತಮ್ಮ ಅಧಿಕಾರ ದುರುಪಯೋಗಪಡಿಸಿ, ಶೇ. 25 ರ ನಿಧಿಯಲ್ಲಿ ತಮ್ಮ ಖಾಸಗಿ ತೋಟದಲ್ಲಿ ಬಾವಿಯನ್ನು ತೋಡಿದ್ದು, ಈ ವಿಚಾರದಲ್ಲಿ ಅಂದಿನ ಗ್ರಾ.ಪಂ. ಉಪಾಧ್ಯಕ್ಷರೂ ಹಾಗೂ ಕಾಂಗ್ರೆಸ್ ವಲಯ ಅಧ್ಯಕ್ಷರೂ ಆಗಿದ್ದ ಮುಖಂಡರೋರ್ವರು ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದರು. ಬಳಿಕ ಅವರೇ ಆ ಬಿಲ್ ಪಾವತಿ ಮಾಡಿದ್ದು, ಈ ಸಂದರ್ಭ ಸಾಧಕ ರಾಜಕೀಯ ಮಾಡಿರುವದು ಆ ಪಕ್ಷದ ರಾಜಕೀಯ ಪ್ರಬುದ್ಧತೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಅಧ್ಯಕ್ಷರು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು, ವಾಣಿಜ್ಯ ಕಟ್ಟಡ ನಿರ್ಮಿಸಿಕೊಂಡಿರುವದರಿಂದ ಪಿ.ಡಿ.ಓ. ಮುಂದೆ ಮಂಡಿಯೂರುತ್ತಿದ್ದು, ಹೀಗಾಗಿ ಪಿ.ಡಿ.ಓ. ಗ್ರಾ.ಪಂ.ನಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಗ್ರಾಮ ಸಮಿತಿ ಕಾರ್ಯದರ್ಶಿ ಎಸ್.ಬೈಜು ಮಾತನಾಡಿ, ಸಿದ್ದಾಪುರ ಪಂಚಾಯಿತಿಯ ಪ್ರಸ್ತುತ ಆಡಳಿತ ಮಂಡಳಿಯ ಕರಡಿಗೋಡು ಭಾಗದ ಗ್ರಾ.ಪಂ. ಸದಸ್ಯೆ ನಿವೇಶನ ರಹಿತರಿಗೆ ಸರಕಾರ ನೀಡುವ ಬಸವ ವಸತಿ ಯೋಜನೆಯಲ್ಲಿ ಕಾನೂನು ಬಾಹಿರವಾಗಿ ಮನೆಯನ್ನು ಪಡೆದು ಬಳಿಕ ಆ ಮನೆಯನ್ನು ಬಾಡಿಗೆಗೆ ನೀಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸದಸ್ಯರಾದ ರಾಮನ್‍ಕುಟ್ಟಿ, ಎನ್.ಮಂಜು, ವೈ.ಜೆ. ಸೋಮ ಇದ್ದರು.