ಸಿದ್ದಾಪುರ, ಸೆ. 24: ಗ್ರಾ.ಪಂ. ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿ ಸಿದ್ದಾಪುರದ ಪಶುವೈದ್ಯಾಧಿಕಾರಿ ಡಾ. ಎ.ಬಿ. ತಮ್ಮಯ್ಯ ಅವರ ಸಮ್ಮುಖದಲ್ಲಿ ನಡೆಯಿತು.

ಕಂದಾಯ ಹಾಗೂ ಆಹಾರ ಇಲಾಖಾಧಿಕಾರಿಗಳು ಸಭೆಗೆ ಗೈರಾಗಿದ್ದು, ಅಧಿಕಾರಿಗಳು ಬರಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಸಂದರ್ಭ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಎಂ.ಸಿ.ವಾಸು ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಸಿಸುವ ಇತರೆ ಪಾರಂಪರಿಕ ನಿವಾಸಿಗಳಿಗೆ ಹಕ್ಕುಪತ್ರ ಈವರೆಗೂ ಲಭಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ಸಂದರ್ಭ ಸಮಾಜ ಕಲ್ಯಾಣ ಇಲಾಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅರಣ್ಯ ಪ್ರದೇಶದ ನಿವಾಸಿಗಳು ತಮಗೆ ಹಕ್ಕುಪತ್ರ ನೀಡದೆ ಸತಾಯಿಸುತ್ತಿದ್ದು, 75 ವರ್ಷಗಳ ಹಿಂದಿನ ದಾಖಲೆಗಳನ್ನು ನೀಡುವಂತೆ ತಿಳಿಸುತ್ತಿದ್ದು, ಸ್ವಾತಂತ್ರ್ಯ ಬಂದು ಇನ್ನೂ 75 ವರ್ಷಗಳಾಗಿಲ್ಲ. ಹಲವಾರು ವರ್ಷಗಳಿಂದ ಹಕ್ಕುಪತ್ರ ನೀಡದೇ ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ತೊಂದರೆ ನೀಡುವದು ಸರಿಯಲ್ಲ ಎಂದÀು ಆಗ್ರಹಿಸಿದರು.

ಕೂಡುಗದ್ದೆ ನಿವಾಸಿ ಸುನಿಲ್ ಮಾತನಾಡಿ, ನದಿ ದಡದಲ್ಲಿ ವಾಸಿಸುವ ನಿವಾಸಿಗಳಿಗೆ ಸರಕಾರದ ವತಿಯಿಂದ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದ್ದು, ಅದೇ ನಿವಾಸಿಗಳಿಗೆ ವಸತಿ ನಿರ್ಮಾಣಕ್ಕೆ ಸಹಾಯಧನ ನೀಡದೆ ತಾರತಮ್ಯ ಮಾಡುತ್ತಿರುವದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದರು.

ಕರಡಿಗೋಡು ನಿವಾಸಿ ಬೈಜು ಮಾತನಾಡಿ, ಸಿದ್ದಾಪುರದಿಂದ ಕರಡಿಗೋಡುವಿಗೆ ತೆರಳುವ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಗ್ರಾಮದಲ್ಲಿರುವ ರಸ್ತೆಗಳನ್ನು ಅಗಲೀಕರಣಗೊಳಿಸುವಂತೆ ಗ್ರಾ.ಪಂ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಈವರೆಗೂ ಇದಕ್ಕೆ ಸ್ಪಂದಿಸದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಸ್ಥರಾದ ಮನೋಹರ್ ಹಾಗೂ ರಾಜೇಂದ್ರ ಮಾತನಾಡಿ, ಸಿದ್ದಾಪುರ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿರುವ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇತ್ತೀಚೆಗೆ ಕಾಡಾನೆ ಹಾವಳಿಯಿಂದ ವ್ಯಕ್ತಿಯೋರ್ವರು ಮೃತಪಟ್ಟ ಸಂದರ್ಭ ಸ್ಥಳಕ್ಕೆ ಡಿ.ಎಫ್.ಓ. ಭೇಟಿ ನೀಡಿ ಪುಂಡಾನೆಗಳನ್ನು ಒಂದು ವಾರದಲ್ಲಿ ಹಿಡಿಯುವ ಭರವಸೆ ನೀಡಿದರು. ಆದರೆ, ಪುಡಾನೆಗಳು ರಾಜಾರೋಷವಾಗಿ ಸುತ್ತಾಡುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ದೇವಯ್ಯ, ಸಾಕಾನೆಗಳು ಮೈಸೂರು ದಸರಾಕ್ಕೆ ತೆರಳಿದ್ದು, ಬಂದ ಕೂಡಲೇ ಪುಂಡಾನೆ ಹಿಡಿಯುವ ಕಾರ್ಯಾಚರಣೆ ಕೈಗೊಳಲಾಗುವದು ಎಂದರು.

ವೀರಾಜಪೇಟೆ ರಸ್ತೆಯ ಬದಿಯಲ್ಲಿ ಇಂಟರ್‍ಲಾಕ್ ಅಳವಡಿಸಿದ್ದು, ಪಾಲಿಬೆಟ್ಟ ರಸ್ತೆಯವರೆಗೆ ಜೆ.ಸಿ.ಬಿ ಯಿಂದ ಮಣ್ಣು ಅಗೆಯಲಾಗಿದೆ. ಆದರೇ ಇಂಟರ್‍ಲಾಕ್ ಹಾಕುವ ಸಂದರ್ಭ ಗ್ರಾ.ಪಂ. ಸದಸ್ಯರೋರ್ವರÀ ಮನೆಯ ಮುಂಭಾಗದವರೆಗೆ ಮಾತ್ರ ಹಾಕಲಾಗಿರುವ ಬಗ್ಗೆ ಮನೋಹರ್ ಪ್ರಶ್ನಿಸಿದರು.

ಎನ್.ಕೆ. ಅನಿಲ್ ಕುಟ್ಟಪ್ಪ ಮಾತನಾಡಿ, ಸಿದ್ದಾಪುರ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಹಸಿ ಮೀನು ಹಾಗೂ ಮಾಂಸ ಮಾರಾಟ ಮಾಡಲಾಗುತ್ತಿದ್ದು, ಅಶುಚಿತ್ವ ತಾಂಡವವಾಡುತ್ತಿದೆ. ಮೀನು ಹಾಗೂ ಮಾಂಸದ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಗ್ರಾ.ಪಂ ನಿರ್ಲಕ್ಷ್ಯ ವಹಿಸಿರುವದು ಖಂಡನೀಯ ಎಂದರು.

ಗ್ರಾಮದ ಕೆಲ ಭಾಗದಲ್ಲಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಂತೆ ಸೆಸ್ಕ್ ಇಂಜಿನಿಯರ್ ಬಳಿ ಮನವಿ ಮಾಡಿದರೂ, ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಸರಕಾರದ ಯೋಜನೆಯಾದ ಉಚಿತ ಶಿಕ್ಷಣದಲ್ಲಿ ಬಡ ಮಕ್ಕಳಿಗೆ ಅವಕಾಶ ಸಿಗುತ್ತಿಲ್ಲ. ಯೋಜನೆ ದುರ್ಬಳಕೆಯಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಗ್ರಾಮಸ್ಥರಾದ ಎಂ.ಹೆಚ್. ಮೂಸ ಮಾತನಾಡಿ, ಕಸ ವಿಲೇವಾರಿಗೆ ಗುಹ್ಯ ಗ್ರಾಮದಲ್ಲಿ ಅವಕಾಶ ನೀಡುವದಿಲ್ಲ ಎಂದು ಕೆಲವು ಸದಸ್ಯರು ಪತ್ರಿಕಾಗೋಷ್ಠಿ ಕರೆದಿದ್ದು, ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕು ಹಾಗೂ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ ಮಾತನಾಡಿ, ಅರಣ್ಯ ವ್ಯಾಪ್ತಿಯಲ್ಲಿ ಹಕ್ಕುಪತ್ರ ವಂಚಿತರಾದವರ ಬಗ್ಗೆ ಜಿ.ಪಂ ಸಭೆಯಲ್ಲಿ ಪ್ರಸ್ತಾಪಿಸಲಾಗುವದು. ಈಗಾಗಲೇ ಅವರೆಗುಂದ ಹಾಗೂ ಕಕ್ಕಟ್ಟುಕಾಡು, ಗುಹ್ಯ ಮುಂತಾದೆಡೆ ತನ್ನ ಅನುದಾನದಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಹದಗೆಟ್ಟಿರುವ ರಸ್ತೆಗಳನ್ನು ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ದುರಸ್ತಿ ಪಡಿಸಲಾಗುವದೆಂದು ಹಾಗೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವದಾಗಿ ಭರವಸೆ ನೀಡಿದರು.

ತಾ.ಪಂ ಸದಸ್ಯರಾದ ಜನೀಶ್ ಹಾಗೂ ಚಿನ್ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಗ್ರಾ.ಪಂ. ಸದಸ್ಯರುಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು. ಪಿ.ಡಿ.ಓ. ವಿಶ್ವನಾಥ್ ಸ್ವಾಗತಿಸಿ, ವಂದಿಸಿದರು.