ಮಡಿಕೇರಿ, ಜು. 20: ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶ ಸತ್ಯಕ್ಕೆ ಸಿಕ್ಕ ಜಯವಾಗಿದ್ದು, ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಪ್ರಮುಖ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆ ಇನ್ನೂ ಕೂಡ ಗಟ್ಟಿಯಾಗಿದ್ದು, ನ್ಯಾಯಾಲಯದ ಆದೇಶ ಹಟಮಾರಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆ.ಜೆ. ಜಾರ್ಜ್ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸದೆ ಕಾನೂನಿಗೆ ಅಗೌರವ ತೋರಿದ ಸರಕಾರದ ವಿರುದ್ಧ ಜನ ಜಾಗೃತರಾಗಬೇಕಾಗಿದೆ ಮತ್ತು ಸಿಬಿಐ ತನಿಖೆಗಾಗಿ ಒತ್ತಾಯ ಹೆಚ್ಚಾಗಬೇಕಾಗಿದೆ. ನ್ಯಾಯಾಲಯ ನ್ಯಾಯವನ್ನು ಎತ್ತಿ ಹಿಡಿದ ಕಾರಣಕ್ಕಾಗಿ ಇಂದು ಜನ ನ್ಯಾಯಾಂಗದ ಕಡೆ ತಿರುಗಿ ನೋಡುವಂತಾಗಿದೆ. ರಾಜ್ಯದ ಜನತೆಯ ಹೋರಾಟ ಮತ್ತು ಅನ್ಯಾಯವನ್ನು ಬಯಲಿಗೆಳೆದ ಮಾಧ್ಯಮಗಳಿಗೆ ಸಂದ ಜಯ ಇದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 1600 ರೈತರ ಆತ್ಮಹತ್ಯೆ, ಐಎಎಸ್, ಐಪಿಎಸ್ ಅಧಿಕಾರಿಗಳ ಮೇಲೆ ಒತ್ತಡ, ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಸೇರಿದಂತೆ ಅನೇಕ ಘಟನಾವಳಿಗಳಿಂದ ರಾಜ್ಯದಲ್ಲಿ ಅರಾಜಕತೆ ಮೂಡಿದೆ ಎಂದು ಆರೋಪಿಸಿರುವ ರವಿ ಕುಶಾಲಪ್ಪ ರಾಷ್ಟ್ರಪತಿ ಆಡಳಿತ ಜಾರಿಗೆ ತರುವದು ಸೂಕ್ತವೆಂದು ಹೇಳಿದ್ದಾರೆ.

ರಾಜ್ಯ ಸರಕಾರದಿಂದ ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರೂ ಕೊಡಗು ಜಿಲ್ಲಾ ಕಾಂಗ್ರೆಸ್ ಯಾಕೆ ಮೌನಕ್ಕೆ ಶರಣಾಗಿದೆ ಎಂದು ಪ್ರಶ್ನಿಸಿರುವ ರವಿ ಕುಶಾಲಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ಮಾತ್ರ ರಾಜ್ಯದಲ್ಲಿ ನ್ಯಾಯ ನೆಲೆಸಲು ಸಾಧ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.