ಸೋಮವಾರಪೇಟೆ, ಸೆ. 12: ಕಳೆದ 50 ರಿಂದ 60 ವರ್ಷ ಗಳಿಂದಲೂ ಸಿ ಮತ್ತು ಡಿ ಜಾಗದಲ್ಲಿ ಕೃಷಿ ಕಾರ್ಯ ಕೈಗೊಂಡಿರುವ ರೈತರನ್ನು ಯಾವದೇ ಕಾರಣಕ್ಕೂ ಒಕ್ಕಲೆಬ್ಬಿಸದೇ ಜಾಗಕ್ಕೆ ಹಕ್ಕುಪತ್ರ ನೀಡಬೇಕು. ಸಿ ಮತ್ತು ಡಿ ಜಾಗ ಸಮಸ್ಯೆಯನ್ನು ಬಗೆಹರಿಸಲು ರಾಜಕೀಯ ರಹಿತವಾದ ಹೋರಾಟದ ವೇದಿಕೆ ಸೃಷ್ಟಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ನಗರದ ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಿ ಮತ್ತು ಡಿ ಜಾಗ ಸಮಸ್ಯೆ ಕುರಿತಾದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರು ಒತ್ತುವರಿ ಮಾಡಿಕೊಂಡಿರುವ ಜಾಗಕ್ಕೆ ಸರ್ಕಾರವೇ ಹಕ್ಕುಪತ್ರ ನೀಡಬೇಕು. ಅರಣ್ಯ ಇಲಾಖೆಯಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸಿ ರೈತರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸಿ ಮತ್ತು ಡಿ ಜಾಗ ಸಮಸ್ಯೆಯನ್ನು ಎದುರಿಸುತ್ತಿರುವ ರೈತರು ತಮ್ಮ ಕಚೇರಿಗೆ ಅರ್ಜಿ ನೀಡಿದರೆ, ಕಂದಾಯ ಮಂತ್ರಿ ಮತ್ತು ಸರ್ಕಾರದ ಗಮನ ಸೆಳೆಯಲಾಗುವದು ಎಂದರು.
ಕಳೆದ 1994ರಲ್ಲಿ ಈ ಜಾಗವನ್ನು ಲ್ಯಾಂಡ್ ಬ್ಯಾಂಕ್ಗೆ ನೀಡಿದ್ದು, ಯಾವದೇ ಕಾರಣಕ್ಕೂ ಅರಣ್ಯ ಕಾಯಿದೆಗಳಿಗೆ ಒಳಪಡಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿತ್ತು. ಯಾವದೇ ಸಂದರ್ಭದಲ್ಲೂ ಸರ್ಕಾರ ಸಾರ್ವಜನಿಕ ಉಪಯೋಗಕ್ಕೆ ಈ ಜಾಗವನ್ನು ವಾಪಸ್ ಪಡೆಯಬಹುದು ಎಂಬ ನಿಯಮವನ್ನೂ ಅಳವಡಿಸಿತ್ತು. ಆದರೆ ಇದೀಗ ಅರಣ್ಯ ಇಲಾಖೆ ಈ ಜಾಗ ತಮ್ಮದೇ ಎಂದು ಆವಾಜ್ ಹಾಕುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ರಂಜನ್ ಆಗ್ರಹಿಸಿದರು.
ಎರಡು ಲಕ್ಷದ ಐವತ್ತೆಂಟು ಸಾವಿರ ಏಕರೆ ಪ್ರದೇಶವನ್ನು ಹಸ್ತಾಂತರ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದರೂ, ವಾಸ್ತವದಲ್ಲಿ 1,31,888 ಹೆಕ್ಟೇರ್ ಮಾತ್ರ ಹಸ್ತಾಂತರ ಮಾಡಲಾಗಿದೆ. ಈ ವರದಿಯಲ್ಲೇ ಲೋಪವಿದೆ. ಲ್ಯಾಂಡ್ ಬ್ಯಾಂಕಿಗೆ ಹಸ್ತಾಂತರಿಸುವದಕ್ಕೂ ಮುನ್ನವೇ ಈ ಜಾಗದಲ್ಲಿ ಕೃಷಿ ಕಾರ್ಯಕೈಗೊಳ್ಳಲಾಗಿತ್ತು ಎಂಬದು ತಿಳಿದುಬರುತ್ತದೆ ಎಂದ ರಂಜನ್, ವಾಸ್ತವಾಂಶ, ಸ್ಥಳ ಪರಿಶೀಲನೆ ಮಾಡದೇ ಕಚೇರಿಯಲ್ಲೇ ಕುಳಿತು ಇಂತಹ ವರದಿ ನೀಡಿದ್ದರಿಂದ ಇಂದಿಗೂ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಈ ಜಾಗವನ್ನು ಸಕ್ರಮ ಗೊಳಿಸಲು ರೈತರು ಫಾರಂ 50 ಮತ್ತು 53 ಅಡಿಯಲ್ಲಿ ಅರ್ಜಿ ಹಾಕಿದ್ದು, ಸರ್ಕಾರದ ಅಧಿಕಾರಿಗಳು ವಜಾಗೊಳಿಸುತ್ತಿದ್ದಾರೆ. ಈ ಕ್ರಮ ಖಂಡನೀಯ. ತಕ್ಷಣವೇ ಇಂತಹ ಜಾಗಗಳಿಗೆ ಹಕ್ಕುಪತ್ರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆ ರೈತರು ತಮ್ಮ ಕಚೇರಿಗೆ ತಾ. 20ರ ಒಳಗೆ ಅರ್ಜಿ ನೀಡಿದರೆ, ವಸ್ತುನಿಷ್ಠ ವರದಿ, ಅಂಕಿಅಂಶಗಳೊಂದಿಗೆ ತಾ. 21ರಂದು ಜಿಲ್ಲೆಗೆ ಭೇಟಿ ನೀಡುತ್ತಿರುವ ಕಂದಾಯ ಸಚಿವರಿಗೆ ವರದಿ ನೀಡಲಾಗುವದು. ಸರ್ಕಾರದ ಮಟ್ಟದಲ್ಲೂ ಹೋರಾಟ ನಡೆಸಲಾಗುವದು ಎಂದು ರಂಜನ್ ತಿಳಿಸಿದರು.
ಸಿ ಮತ್ತು ಡಿ ಜಾಗ ಸಮಸ್ಯೆ ಕುರಿತು ದೊಡ್ಡ ಮಟ್ಟದ ಹೋರಾಟ ಆಗಬೇಕಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ಒಳಗೊಂಡಂತೆ ರೈತ ಮುಖಂಡರ ನೇತೃತ್ವದಲ್ಲಿಯೇ ರಾಜಕೀಯ ರಹಿತ ಹೋರಾಟ ರೂಪಿಸಲಾಗುವದು. ಇಂದಿನ ಸಭೆಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರಿಗೆ ಆಹ್ವಾನ ನೀಡಲಾಗಿದ್ದರೂ, ಅವರುಗಳು ಭಾಗಿಯಾಗಿಲ್ಲ. ಆದರೂ ಹೋರಾಟ ನಿಲ್ಲುವದಿಲ್ಲ. ಮುಂದಿನ ದಿನಗಳಲ್ಲಿ ಅವರುಗಳನ್ನೂ ಒಳಗೊಂಡಂತೆ ಸಮಿತಿ ರಚಿಸಲಾಗುವದು ಎಂದರು.
ಸಭೆಯಲ್ಲಿದ್ದ ಕಾಫಿ ಬೆಳೆಗಾರರ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಎಂ.ಸಿ. ಮುದ್ದಪ್ಪ ಮಾತನಾಡಿ, ಸೋಮವಾರಪೇಟೆ ತಾಲೂಕು ಕಚೇರಿಗೆ ಫಾರಂ ನಂ. 50 ರಡಿ 2120 ಹಾಗೂ 53 ರಡಿ 4012 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳ ವಿಲೇವಾರಿಗೆ ಕೆಲವೊಂದು ನಿಬಂಧನೆಗಳಿದ್ದು, ಕೃಷಿಕರು ಈ ಬಗ್ಗೆ ಮಾಹಿತಿ ಹೊಂದುವ ಮೂಲಕ ತಮ್ಮ ಜಾಗಗಳಿಗೆ ದಾಖಲಾತಿಗಳನ್ನು ಹೊಂದಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯ ವೇದಿಕೆಯಲ್ಲಿ ಮಾಜೀ ವಿಧಾನ ಪರಿಷತ್ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರುಗಳಾದ ಬಿ.ಜೆ. ದೀಪಕ್, ಸರೋಜಮ್ಮ, ಶ್ರೀನಿವಾಸ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಸದಸ್ಯರುಗಳಾದ ಧರ್ಮಪ್ಪ, ಸವಿತಾ, ಮಣಿ, ವಿಮಲಾವತಿ, ಲೀಲಾವತಿ, ಗಣೇಶ್, ಕುಶಾಲಪ್ಪ, ಬೆಳೆಗಾರರ ಸಂಘದ ಕಾರ್ಯದರ್ಶಿ ಸುದೀಪ್, ಪ್ರಮುಖರಾದ ಶುಂಠಿ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.