ಮಡಿಕೇರಿ, ಜ. 10: ಕನ್ನಡ ಸಾಹಿತ್ಯ ಪರಿಷತ್ತು ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ನಾಡಿನ ಅಭಿವೃದ್ಧಿಗೂ ಶ್ರಮಿಸುತ್ತಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಲ್ಲಿನ ರೈತ ಸಹಕಾರ ಭವನದಲ್ಲಿನ ದಿ. ಎದುರ್ಕಳ ಶಂಕರನಾರಾಯಣ ಭಟ್ ವದಿಕೆಯಲ್ಲಿ ಹನ್ನೊಂದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 1915ರಲ್ಲಿ ಆರ್ಥಿಕ ಕೇಂದ್ರವಾಗಿ ಆರಂಭಗೊಂಡ ಸಂಸ್ಥೆ ನಂತರದಲ್ಲಿ ಸಾಹಿತ್ಯ ಪರಿಷತ್ ಆಗಿ ರೂಪುಗೊಂಡಿತು. ಇದೀಗ ಉತ್ತಮವಾಗಿ ಬೆಳೆದು ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪರಿಷತ್‍ನ ಅಭಿವೃದ್ಧಿಗೆ ಸರಕಾರ ಕೂಡ ಕೈ ಜೋಡಿಸುತ್ತಿದ್ದು, ವಿವಿಧ ಸಂಘಟನೆ, ಜನರ ಬೆಂಬಲ ಕೂಡ ಸಿಕ್ಕಿದೆ. ಕೊಡಗು ಜಿಲ್ಲೆ 80ನೇ ಅಖಿಲ ಭಾರತ ಸಮ್ಮೇಳನ ಮಾಡಿ ಒಳ್ಳೆಯ ಹೆಸರು ಗಳಿಸಿದೆ ಎಂದರು. ಕೊಡಗು ಜಿಲ್ಲೆ ಸಾಹಿತ್ಯ ಮಾತ್ರವಲ್ಲದೆ ರಾಜಕೀಯ ದಲ್ಲೂ ಹೆಸರು ಮಾಡಿದೆ. ಕುಶಾಲನಗರದ ಗುಂಡೂರಾಯರು ರಾಜ್ಯದ ಮುಖ್ಯಮಂತ್ರಿಯಾಗಿ ಹೆಸರು ಮಾಡಿರುವದನ್ನು ಮರೆಯಲಾಗ ದೆಂದರು.

(ಮೊದಲ ಪುಟದಿಂದ) ಕೊಡಗಿನ ಗೌರಮ್ಮ ಸೇರಿದಂತೆ ಹತ್ತು ಹಲವಾರು ಸಾಹಿತಿಗಳು ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಹೇಳಿದರು.

ಸಮ್ಮೇಳನದ ಗೌರವ ಅಧ್ಯಕ್ಷ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮಾತನಾಡಿ, ಎಲ್ಲರೂ ಕನ್ನಡಕ್ಕೆ ಒತ್ತು ನೀಡುತ್ತಾ ಬದುಕಿನ ಭಾಷೆ ಕಲಿಯಬೇಕೆಂದರು. ಅನ್ಯರಿಗೂ ಕನ್ನಡ ಕಲಿಸುವದರೊಂದಿಗೆ ಭಾಷೆಯನ್ನು ಬೆಳೆಸಬೇಕಿದೆ, ಜಾತ್ಯಾತೀತವಾಗಿ ಪಕ್ಷ ಬೇಧ ಮರೆತು ಎಲ್ಲರೂ ಸೇರಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನೀರ್ಕಜೆ ಮಹಾಭಲೇಶ್ವರ್ ಭಟ್ ಮಾತನಾಡಿ, ಕನ್ನಡದ ಔನ್ನತ್ಯ, ಹರವು, ಆಳ ಇರುವದು ಗ್ರಾಮೀಣ ಪ್ರದೇಶದಲ್ಲಿ. ಸಮ್ಮೇಳನಗಳಿಂದ ಜನರನ್ನು ಕೂಡಿಸುವದರೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಭಾಷೆ ಎನ್ನುವದು ಭಾವನೆಗಳನ್ನು ವ್ಯಕ್ತಪಡಿಸುವ ಕಲೆಯಾಗಿದೆ ಎಂದರು.

ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಭಾಷೆಯ ಬದುಕು, ಬೆಳವಣಿಗೆಗೆ ಬಗೆಗಿನ ಪರಿಶ್ರಮದ ಹಿನ್ನೆಲೆಯಲ್ಲಿ ಪರಿಷತ್ತು ಸ್ಥಾಪನೆಯಾಗಿದ್ದು, ಶತಮಾನೋತ್ಸವ ಆಚರಿಸಿಕೊಂಡಿದೆ. ಜಗತ್ತಿನ ಎಲ್ಲಾ ಭಾಷೆಗಳಿಗಿಂತ ಶ್ರೀಮಂತ ಭಾಷೆ ಕನ್ನಡವಾಗಿದೆ. ಪ್ರುಸ್ತುತ ಇಂಗ್ಲೀಷ್ ಭಾಷೆ ಬಗ್ಗೆ ಅಪರಿಮಿತ ವ್ಯಾಮೋಹ ಕಂಡುಬರುತ್ತಿದೆ, ಕನ್ನಡದ ಸೊಗಡು, ವೈಭವವನ್ನು ಮಕ್ಕಳಿಗೆ ಹೇಳಿಕೊಟ್ಟು ಮುಂದಿನ ತಲೆಮಾರಿಗೆ ಉಳಿಸ ಬೇಕಿದೆ. ಸಾಹಿತ್ಯ ಪರಿಷತ್ತು ಪರಿಮಿತಿಯಡಿ ಯಲ್ಲಿ ಪ್ರಯತ್ನಿಸ ಬಹುದು. ನಾಡಿನ ಜನತೆ ಕೂಡ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಮಾತನಾಡಿ, ಕನ್ನಡ ವೇದಿಕೆಯಲ್ಲಿ ಪ್ರಚಾರ ಮಾಡುವ ಭಾಷೆಯಾಗಬಾರದು, ಮನೆ ಮನೆಯಲ್ಲಿ ಮಾತನಾಡುವ ಭಾಷೆಯಾಗಬೇಕೆಂದರು. ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.

ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡದಲ್ಲಿ ಮಾತನಾಡುವಂತಾಗ ಬೇಕು. ಮಕ್ಕಳಲ್ಲಿ ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಬೇಕು ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯವೆಂದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಅವರುಗಳು ಶುಭ ಹಾರೈಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರು, ಎಲ್ಲರ ಸಹಕಾರದೊಂದಿಗೆ ಸಮ್ಮೇಳನ ಆಯೋಜಿಸಿರುವದಾಗಿ ತಿಳಿಸಿದರಲ್ಲದೆ, ನೆರವು ಸಹಕಾರ ನೀಡಿದವರನ್ನು ಸ್ಮರಿಸಿಕೊಂಡರು. ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್, ಸದಸ್ಯರುಗಳಾದ ಕೆ.ಆರ್. ಮಂಜುಳ, ಲತೀಫ್, ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಹೆಚ್.ಜೆ. ಜವರ, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ಹೋಬಳಿ ಘಟಕಗಳ ಅಧ್ಯಕ್ಷರುಗಳು, ಇನ್ನಿತರರಿದ್ದರು. ಭಾರತಿ ಮತ್ತು ತಂಡದವರು ನಾಡ ಗೀತೆ ಹಾಗೂ ರೈತಗೀತೆ ಹಾಡಿದರೆ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಸ್ವಾಗತಿಸಿದರು. ಹಂಡ್ರಂಗಿ ನಾಗರಾಜ್ ಹಾಗೂ ಸ್ಮಿತಾ ಅಮೃತರಾಜ್ ಅವರುಗಳು ನಿರೂಪಿಸಿದರು. ಎನ್.ಎ. ಅಶ್ವತ್ಥ್ ಕುಮಾರ್ ಹಾಗೂ ಈಶ, ಡಾ. ಸುಭಾಶ್ ನಾಣಯ್ಯ ನಿರ್ವಹಿಸಿದರು. ಗೌರವ ಕೋಶಾಧಿಕಾರಿ ಎಸ್.ಎ. ಮುರಳೀಧರ್ ವಂದಿಸಿದರು.