ಸೋಮವಾರಪೇಟೆ,ಜ.11: ಕುಶಾಲನಗರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕವಿ ಮನಸುಗಳು ಹೆಚ್ಚಿನ ಕಳೆ ಕಟ್ಟಿದ್ದರು. ಜಿಲ್ಲೆಯ ಆಯ್ದ ಕವಿಗಳು ವಾಚಿಸಿದ ಕವನಗಳು ಎಲ್ಲರ ಮನಸ್ಸನ್ನೂ ಪುಳಕಿತಗೊಳಿಸಿತಲ್ಲದೆ, ಕೆಲ ಕವನಗಳ ಸಾಲುಗಳು ಚಿಂತನೆಗೀಡು ಮಾಡಿತು.

ಕನ್ನಡ ಭಾಷೆ, ಜನ ಜೀವನ, ಹೆಣ್ಣಿನ ಸಮಸ್ಯೆಗಳನ್ನು ತಮ್ಮ ಕವನದ ಮೂಲಕ ಕವಿಗಳು ಅಭಿವ್ಯಕ್ತಿಗೊಳಿಸಿದರು. ಜಿಲ್ಲೆಯ ಹಿರಿಯ ಕವಯತ್ರಿ ಶೋಭಾ ಸುಬ್ಬಯ್ಯ ಅವರು ವಾಚಿಸಿದ ಜೀವನ ನರ್ತನ ಕವನದಲ್ಲಿ ಅರ್ಜುನನು ಯುದ್ಧ ಸಂದರ್ಭ ಎದುರಿಸಿದ ತುಮುಲಗಳ ಬಗ್ಗೆ ಬೆಳಕು ಚೆಲ್ಲಿದರು.

ಬೇಬಿ ಚಿಣ್ಣಪ್ಪ ಅವರ ಕನ್ನಡದ ಕಹಳೆ ಮೊಳಗಲಿ, ಶರ್ಮಿಳಾ ರಮೇಶ್ ಅವರ ಕನಸಿನ ಮಂಟಪದಿಂದ, ಜಯಲಕ್ಷ್ಮೀ ಅವರ ಕಂಬನಿ, ಕಾಂಚನ ಅವರ ಚಿಂದಿ ಬದುಕು, ತೀರ್ಥಕುಮಾರ್ ಅವರ ಜೀವ ಮೊಳೆಯುವ ಸತ್ಯ, ಕಡ್ಲೇರ ತುಳಸಿ ಮೋಹನ್ ಅವರ ಮರುಳೋ ಭ್ರಮೆಯೋ, ಎನ್.ಆರ್. ನಾಗೇಶ್ ಅವರ ಅಮ್ಮ ಕನ್ನಡಮ್ಮ ಕವನಗಳು ಕೇಳುಗರ ಮನಸ್ಸನ್ನು ಪ್ರಫುಲ್ಲಗೊಳಿಸಿತು.

ಮಿಲನಾ ಭರತ್ ಅವರು ವಾಚಿಸಿ ಅಜ್ಜಿ, ತೊರೆನೂರು ಶಿವಕುಮಾರ್ ಅವರ ಮಲೀನಗೊಂಡಿದೆ ಅಮೃತ ಕಳಸ, ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರ ಬಾಳ ನಾವಿಕ, ವೈಲೇಶ್ ಅವರ ಪ್ರಕೃತಿ ದೌರ್ಜನ್ಯ ಕವನಗಳು ನೆರೆದಿದ್ದ ಸಾಹಿತ್ಯಾಭಿಮಾನಿಗಳ ಮನಸ್ಸು ಮುಟ್ಟಿದವು.

ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‍ನ ಮಾಜೀ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರು ಮಾತನಾಡಿ, ಕವಿಗಳು ತಮ್ಮ ಕವನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಬೇಕು. ಜನರ ಅಂತಃಸತ್ವವನ್ನು ಬಡಿದೆಬ್ಬಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಹಿರಿಯ ಸಾಹಿತಿ ನಾಗೇಶ್ ಕಾಲೂರು, ಮೋಹನ್ ಪಾಳೆಗಾರ್, ಕಾಜೂರು ಸತೀಶ್,ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಸತೀಶ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.