ಸೋಮವಾರಪೇಟೆ, ಡಿ.17: ತಾಲೂಕು ಹಿಂದೂ ಮಲಯಾಳಿ ಸಮಾಜದ ಆಶ್ರಯದಲ್ಲಿ ಇಲ್ಲಿನ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆಯೋಗ್ಯ ತಪಾಸಣಾ ಶಿಬಿರದಲ್ಲಿ ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಮಂದಿ ಸಾರ್ವಜನಿಕರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆ, ಜೆ.ಎಸ್.ಎಸ್. ದಂತ ಮಹಾ ವಿದ್ಯಾಲಯ ಹಾಗೂ ಜೆ.ಎಸ್.ಎಸ್. ಆರ್ಯುವೇದ ಆಸ್ಪತ್ರೆಯ ತಜ್ಞ ವೈದ್ಯರುಗಳು ಹೃದಯ, ಕಿವಿ, ಮೂಗು, ಗಂಟಲು, ಚರ್ಮರೋಗ, ಮಕ್ಕಳ ಆರೋಗ್ಯ ತಪಾಸಣೆ, ನೇತ್ರ, ಸ್ತ್ರೀ ರೋಗ, ಕೀಲು ಮತ್ತು ಮೂಳೆ, ದಂತಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಿದರು.
ಹಿರಿಯ ಹೃದ್ರೋಗ ತಜ್ಞ ಡಾ. ಮಹಾಂತೇಶ್ ನೇತೃತ್ವದಲ್ಲಿ ವೈದ್ಯರುಗಳಿಂದ ಹೃದಯ ತಪಾಸಣೆ ನಡೆಯಿತು. ಇದೇ ಸಂದರ್ಭ ಚಿಕಿತ್ಸೆ ಯೊಂದಿಗೆ ಉಚಿತ ಇ.ಸಿ.ಜಿ., ಎಕೋ ಸ್ಕ್ಯಾನಿಂಗ್, ರಕ್ತದ ಗುಂಪು ಪತ್ತೆ ಹಚ್ಚಲಾಯಿತು. ಆಯುರ್ವೇದ ತಜ್ಞ ವೈದ್ಯರುಗಳಿಂದ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ನಡೆಯಿತು.
ಹಿಂದೂ ಮಲಯಾಳಿ ಸಮಾಜ ಆಯೋಜಿಸಿದ್ದ ಶಿಬಿರಕ್ಕೆ ಹೈಕೋರ್ಟ್ನ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಜಾನಕಿ ಕನ್ವೆನ್ಷನ್ ಹಾಲ್ನ ಮಾಲೀಕ ಸುಂದರ್ ಅವರುಗಳು ಮುಖ್ಯ ಪ್ರಾಯೋಜಕ ರಾಗಿದ್ದರು. ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆಯನ್ನು ವೈದ್ಯರುಗಳಾದ ರೇಷ್ಮಾ, ದಿವ್ಯ ಅವರುಗಳು ನಡೆಸಿದರೆ, ಕಿವಿ ಮೂಗು ಗಂಟಲು ತಪಾಸಣೆಯನ್ನು ನಯನ, ರಾಕೇಶ್ ನಡೆಸಿದರು.
(ಮೊದಲ ಪುಟದಿಂದ) ಇಕೋ ಕಾರ್ಡಿಯಾಗ್ರಫಿಯನ್ನು ಡಾ. ಸಹನ, ಇಕೋ ಸ್ಕ್ಯಾನ್ನ್ನು ಪಾಟೀಲ್, ಕಿಲು ನೋವನ್ನು ಮಂಜುನಾಥ್ ಹಾಗೂ ಪ್ರಮೋದ್, ಚರ್ಮರೋಗಕ್ಕೆ ಸಂಬಂಧಿಸಿದಂತೆ ಡಾ. ಶ್ರೀನಿವಾಸ್, ಸ್ತ್ರೀ ರೋಗ ತಜ್ಞರಾಗಿ ಹೇಮಪ್ರಿಯ, ಶಿಲ್ಪ, ಶೈಲಜಾ, ಮಕ್ಕಳ ತಜ್ಞರಾಗಿ ಕುಶಾಲ್, ರಜತ್, ಆಯುರ್ವೇದ ಚಿಕಿತ್ಸಾ ತಜ್ಞರಾಗಿ ಉಷಾ, ದೀಪಾ, ಮಧುಮೇಹ ತಜ್ಞರಾಗಿ ಭಾಗ್ಯವತಿ ಸೇರಿದಂತೆ ಇತರ ವೈದ್ಯರು ಕಾರ್ಯನಿರ್ವಹಿಸಿದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ಮನುಷ್ಯ ತನ್ನ ಅನಾರೋಗ್ಯದ ಬಗ್ಗೆ ತಾತ್ಸಾರ ತೋರದೆ ತಕ್ಷಣ ಚಿಕಿತ್ಸೆ ಪಡೆದಲ್ಲಿ ಮುಂದೆ ಬರುವ ಬೃಹತ್ ಕಾಯಿಲೆಗಳಿಂದ ಪಾರಾಗಬಹುದೆಂದು ಅಭಿಪ್ರಾಯಪಟ್ಟರು.
ಮನುಷ್ಯ ಇಂದು ತಾನು ಆಹಾರ ಸೇವಿಸುವದಕ್ಕಿಂತ ಹೆಚ್ಚಾಗಿ ಔಷಧಿಗಳನ್ನು ಸೇವಿಸುವ ಕ್ರಮಕ್ಕೆ ತಲುಪಿರುವದು ದುರಂತ. ಇದು ಮನುಷ್ಯ ತಾನು ಬದಲಾಯಿಸಿ ಕೊಂಡಿರುವ ಆಹಾರ ಪದ್ಧತಿ, ವಾತಾವರಣದ ಬದಲಾವಣೆ ಯಿಂದಾದ ಪರಿಣಾಮವೇ ಆಗಿದೆ. ಕೊಡಗು ಜಿಲ್ಲೆಯಲ್ಲಿ ಎಲ್ಲಾ ತಜ್ಞರು ಒಂದೆಡೆ ಸಿಗುವ ಸಾಧ್ಯತೆಗಳು ಕಡಿಮೆ ಇರುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧೋಪಚಾರ ಶಿಬಿರವನ್ನು ಆಯೋಜಿಸಿದ್ದು, ಇದರ ಸದುಪಯೋಗ ಪಡಿಸಿಕೊಂಡು ಆರೋಗ್ಯ ಉತ್ತಮ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಉದ್ಯಮಿ ಬಿ.ಎಸ್. ಸುಂದರ್ ಮಾತನಾಡಿ, ಬಡವರಿಗೂ ಕೂಡ ನುರಿತ ತಜ್ಞರ ಸೇವೆ ಸ್ಥಳೀಯವಾಗಿ ದೊರಕುವಂತಾಗಬೇಕು. ಅವರುಗಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಶಿಬಿರ ಕೂಡ ಇದಾಗಲಿದೆ ಎಂದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್ ಮಾತನಾಡಿ, ತಮ್ಮ ಸಮಾಜದ ವತಿಯಿಂದ ಆಯೋಜಿಸಿದ ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಹಕಾರವನ್ನು ನೀಡಿದ ಮಹನೀಯರನ್ನು ಶ್ಲಾಘಿಸಿದರು.
ವೇದಿಕೆಯಲ್ಲಿ ಶಿಬಿರದ ಸಂಯೋಜಕರಾದ ಡಾ. ಸಿ.ಆರ್. ಉದಯ್ಕುಮಾರ್, ಮೈಸೂರು ಜೆಎಸ್ಎಸ್ ಆಸ್ಪತ್ರೆಯ ವೈದ್ಯಾಧಿಕಾರಿ ಗಳಾದ ಡಾ. ಪೂರ್ಣಿಮ, ಡಾ. ಗುರುಪ್ರಸಾದ್, ಡಾ. ಮಂಜುನಾಥ್, ಡಾ. ಮೌರ್ಯ, ಕೊಡ್ಲಿಪೇಟೆ ಕಾಲೇಜಿನ ಪ್ರಾಂಶುಪಾಲ ನಿರಂಜನ್ ಉಪಸ್ಥಿತರಿದ್ದರು. ಶಿಬಿರದ ಯಶಸ್ಸಿಗಾಗಿ ಹಿಂದೂ ಮಲಯಾಳಿ ಸಮಾಜದ ಪದಾಧಿಕಾರಿಗಳಾದ ಅಯ್ಯಪ್ಪ, ವಿ.ಕೆ. ಲೋಕೇಶ್, ಮಾಲಂಬಿ ಗಂಗಾಧರ್, ಪಿ.ಕೆ. ರಾಜನ್ ಸೇರಿದಂತೆ ಪ್ರಮುಖರು ಶ್ರಮಿಸಿದರು.