ಮಡಿಕೇರಿ, ನ. 21: ಬರದ ಹಿನ್ನೆಲೆಯಲ್ಲಿ ರೈತರ, ಕೃಷಿ ಕಾರ್ಮಿಕರ ಮತ್ತು ಸ್ವಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇದರ ಆರ್ಥಿಕ ಜವಾಬ್ದಾರಿಯನ್ನು ಶೇ. 35 ರಷ್ಟು ರಾಜ್ಯ ಸರಕಾರ ಹಾಗೂ ಶೇ. 65 ರಷ್ಟನ್ನು ಕೇಂದ್ರ ಸರಕಾರ ಹೊರಬೇಕು ಎಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ರೈತ ಸಂಘ ಮನವಿ ಸಲ್ಲಿಸಿತು.

ಬರ ಪ್ರವಾಹ ಅಥವಾ ನೀರಿನ ಕೊರತೆಯಿಂದ ಉಂಟಾದ ರೈತರ ಬೆಳೆ ನಷ್ಟಕ್ಕೆ ಹಾಗೂ ಬೇಸಾಯವನ್ನೇ ಆರಂಭ ಮಾಡದೇ ಇರುವವರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಕರ್ನಾಟಕ ಸರಕಾರವೇ ನೇಮಿಸಿರುವ ಕೃಷಿ ಬೆಲೆ ನಿಗದಿ ಆಯೋಗವು ಲೆಕ್ಕ ಹಾಕಿರುವಷ್ಟು ಖರ್ಚು ಮತ್ತು ಅದರ ಮೇಲೆ ಕೇಂದ್ರ ಸರಕಾರವೇ ನೇಮಿಸಿದ್ದ ರಾಷ್ಟ್ರೀಯ ರೈತ ಆಯೋಗವು ಶಿಫಾರಸ್ಸು ಮಾಡಿದ ಒಂದೂವರೆ ಪಟ್ಟು ಬೆಲೆ, ಇದಾಗದಿದ್ದಲ್ಲಿ ಎಕರೆಗೆ ಕನಿಷ್ಟ 50 ಸಾವಿರ ರೂ. ಪರಿಹಾರಧನವನ್ನು ನೀಡಬೇಕು.

ರೈತರು ಕೃಷಿ ಕಾರ್ಮಿಕರು ಮತ್ತು ಸ್ವಸಹಾಯ ಸಂಘಗಳ ಇದುವರೆಗಿನ ಎಲ್ಲಾ ತರಹದ ಸಾಲ ಮನ್ನಾ ಮಾಡಬೇಕು, ದಲಿತ ಹಿಂದುಳಿದ ಅಲ್ಪಸಂಖ್ಯಾತ ನಿಗಮ ಮೂಲಕ ನೀಡಿರುವ ಸಾಲವನ್ನು ಮನ್ನಾ ಮಾಡಬೇಕು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಆಭರಣ ಒತ್ತೆಯಿಟ್ಟು ಮಾಡಿದ ಕೃಷಿ

(ಮೊದಲ ಪುಟದಿಂದ) ಸಾಲಗಳನ್ನು ಮನ್ನಾ ಮಾಡಬೇಕು. ಕೃಷಿ ಕುಟುಂಬದ ಮಾಸಿಕ ಆದಾಯ ಖಾತ್ರಿ ಯೋಜನೆ ರೂಪಿಸಬೇಕು.

ಮುಂದಿನ ಮುಂಗಾರು ಪ್ರಾರಂಭಗೊಂಡು ಕೃಷಿ ಆರಂಭಿಸಿ ಬೆಳೆ ಬರುವವರೆಗೂ ಬಡ್ಡಿ ರಹಿತ ಸಾಲ ಹಾಗೂ ಮುಂದಿನ ಮುಂಗಾರಿನ ಕೃಷಿ ಚಟುವಟಿಕೆಗೆ ಕೃಷಿ ಬಂಡವಾಳಕ್ಕಾಗಿ ಧೀರ್ಘಾವಧಿ ಸಾಲ ರೂ. 5 ಲಕ್ಷ ನೀಡಬೇಕು, ಅಣೆಕಟ್ಟು ಆಧರಿಸಿದ್ದ ಮತ್ತು ಒಣ ಬೇಸಾಯ ಪ್ರದೇಶಗಳೆರಡೂ ಕಡೆ ಕೃಷಿ ಮಾಡುತ್ತಿರುವವರ ಬೆಂಬಲಕ್ಕಾಗಿ (ಕನಿಷ್ಟ ಎಕರೆಗೆ ರೂ. 10 ಸಾವಿರ) ಪ್ರೋತ್ಸಾಹಧನ ಪ್ರಕಟಿಸಬೇಕು. ಬೆಲೆ ನಿಗದಿ ಆಯೋಗ ಲೆಕ್ಕ ಹಾಕಿರುವ ಖರ್ಚು ಮತ್ತು ರಾಷ್ಟ್ರೀಯ ರೈತ ಆಯೋಗದ ಶಿಫಾರಸ್ಸಿಗಿಂತ ಕಡಿಮೆ ಯಾವದೇ ಬೆಂಬಲ, ಮಾರುಕಟ್ಟೆ ಬೆಲೆ ಇರದಂತೆ ನೋಡಿಕೊಳ್ಳಬೇಕು.

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವೇ ರೂಪಿಸಿರುವ ಬರ ನಿರ್ವಹಣಾ ನೀತಿ ಮತ್ತು ಮಾರ್ಗ ಸೂಚಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರವಾಹ ತಲೆದೋರಿರುವ ಕಡೆ ಸಮರೋಪಾದಿ ಪರಿಹಾರ ಕ್ರಮಗಳಿಗೆ ಮುಂದಾಗಬೇಕು.

ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿ ರುವ ಆನೆ ಹಾಗೂ ಹುಲಿ ಹಾವಳಿ ಯಿಂದ ಸತ್ತವರ ಕುಟುಂಬಕ್ಕೆ ತಲಾ 20 ಲಕ್ಷ ಹಾಗೂ ಜಾನುವಾರು ಗಳಿಗೆ ತಲಾ 35 ಸಾವಿರ ಮತ್ತು ಆಸ್ತಿ ಪಾಸ್ತಿ ಹಾನಿಗೆ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು.

ಇತ್ತೀಚೆಗೆ ಹೆಚ್ಚಾಗುತ್ತಿರುವ ರೈತರ ಆತ್ಮಹತ್ಯೆಯನ್ನು ತಡೆಗಟ್ಟಲು ಸರಕಾರ ಮುಂದಾಗಬೇಕು ಹಾಗೂ ಸಾಲ ಬಾಧೆಯಿಂದ ಸತ್ತವರ ಕುಟುಂಬಕ್ಕೆ 25 ಲಕ್ಷ ರೂಪಾಯಿಯ ಪರಿಹಾರ ಧನವನ್ನು 30 ದಿನದ ಒಳಗೆ ನೀಡಬೇಕು.

ಬರ ಪರಿಸ್ಥಿಯಲ್ಲಿ ಮಳೆ ಆಧಾರವಿಲ್ಲದೇ ರೈತರು ತಮ್ಮ ಜಮೀನಿನಲ್ಲಿ ಸ್ವಂತ ಕೆರೆ ಹಾಗೂ ಹೊಂಡಗಳಲ್ಲಿ ನೀರು ಶೇಖರಣೆ ಮಾಡಿ ಪಂಪ್ ಸೆಟ್ ಮುಖಾಂತರ ಬೆಳೆ ಬೆಳೆದಿದ್ದಲ್ಲಿ ಇದರಿಂದ ತೋಟಗಳಲ್ಲಿ ಪರಿಸರದ ಹಸಿರು ಕಾಪಾಡಿದಂತಾಗುತ್ತದೆ ಹಾಗೂ ಪ್ರಾಣಿ ಪಕ್ಷಿಗಳಿಗೂ ಸಹಕಾರಿಯಾಗುತ್ತದೆ. ಇಂತಹ ರೈತರಿಗೆ ಎಕರೆಗೆ 20 ಸಾವಿರ ರೂಪಾಯಿ ಪ್ರೋತ್ಸಾಹ ಹಾಗೂ ಸಹಾಯ ಧನ ಪ್ರಕಟಿಸಬೇಕು.

ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅರಣ್ಯನಾಶ ಮತ್ತು ಮರ ಕಳ್ಳ ಸಾಗಾಣಿಕೆ ತಡೆಗಟ್ಟಲು ಚೆಕ್ ಪೋಸ್ಟ್‍ಗಳನ್ನು ಇನ್ನಷ್ಟು ಬಲಪಡಿಸುವದು ಹಾಗೂ ಪ್ರತಿವರ್ಷ ಬೆಂಕಿಯಿಂದ ಅರಣ್ಯ ನಾಶವಾಗುತ್ತಿರು ವದನ್ನು ತಡೆಗಟ್ಟಲು ಅರಣ್ಯಾಧಿಕಾರಿ ಗಳು ಸೂಕ್ತ ಕ್ರಮಕೈಗೊಳ್ಳುವಂತೆ ಕ್ರಮ ಜರುಗಿಸಬೇಕು.

ಜಿಲ್ಲೆಯಲ್ಲಿ ಭತ್ತದ ಕೃಷಿ ಮಾಡುವಂತಹ ರೈತರಿಗೆ ಪ್ರೋತ್ಸಾಹ ಧನವಾಗಿ ಎಕರೆಗೆ ರೂ. 20 ಸಾವಿರ ವನ್ನು ಒದಗಿಸುವ ಮುಖಾಂತರ ಅಂತರ್ ಜಲಮಟ್ಟವನ್ನು ಕಾಪಾಡು ವಲ್ಲಿ ಯಶಸ್ವಿ ಕಾಣಬಹುದು. ಕೊಡಗು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟವನ್ನು ಕಾಪಾಡುವದು, ಅಭಿವೃದ್ಧಿಯ ಹೆಸರಿನಲ್ಲಿ ಯಾವದೇ ರೀತಿಯ ಪರಿಸರ ನಾಶ, ಲೇಔಟ್, ರೆಸಾರ್ಟ್ ಹಾಗೂ ನಗರೀಕರಣಕ್ಕೆ ವ್ಯವಸಾಯ ಭೂಮಿಯನ್ನು ಪರಿವರ್ತಿಸದಂತೆ ಕಡ್ಡಾಯವಾದ ಕಾನೂನು ಜರುಗಿಸಬೇಕು ಎಂಬ ಬೇಡಿಕೆಗಳ ನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಖಜಾಂಚಿ ಚೋನಿರ ಕೆ. ಸತ್ಯ, ಪದಾಧಿಕಾರಿ ಗಳಾದ ಅಜ್ಜಮಾಡ ಚಂಗಪ್ಪ, ಅಜ್ಜಾಮಾಡ ಜಯ, ಸೋಮೆಯಂಡ ಗಣೇಶ್, ಬೋಡಂಗಡ ಅಶೋಕ್, ಮಚ್ಚಮಾಡ ರಂಜಿ, ಬೆಳೆಗಾರರ ಒಕ್ಕೂಟದ ಸದಸ್ಯ ಹರೀಶ್ ಮಾದಪ್ಪ ಮತ್ತಿತರರು ಇದ್ದರು.