ಸೋಮವಾರಪೇಟೆ,ನ.14: ಸಾಲ ಬಾಧೆ ಹಿನ್ನೆಲೆ ತನ್ನ ಜಮೀನಿನಲ್ಲಿಯೇ ರೈತರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಕ್ಯಾತೆ ಗ್ರಾಮದಲ್ಲಿ ಇಂದು ನಡೆದಿದೆ.ಕ್ಯಾತೆ ಗ್ರಾಮದ ಬಾಲಸುಬ್ರಮಣಿ (56) ಎಂಬವರೇ ನೇಣಿಗೆ ಶರಣಾದ ರೈತರಾಗಿದ್ದು, ಕೃಷಿ ಕಾರ್ಯಕ್ಕಾಗಿ ಸಹಕಾರ ಸಂಘ ಸೇರಿದಂತೆ ಹಲವರ ಬಳಿ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಒಂದು ಎಕರೆ ಗದ್ದೆ ಹಾಗೂ ಒಂದೂವರೆ ಎಕರೆ ತೋಟ ಹೊಂದಿದ್ದ ಬಾಲಸುಬ್ರಮಣಿ ಅವರು ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ಖರ್ಚುಮಾಡಿ ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಯಿಸಿದ್ದರು.
ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಬೋರ್ವೆಲ್ನಲ್ಲಿ ನೀರು ಬಾರದೇ ಇದ್ದುದರಿಂದ ತೀವ್ರವಾಗಿ ನೊಂದಿದ್ದರು. ಇದರೊಂದಿಗೆ ಕೃಷಿ ಹಾಗೂ ಬೋರ್ವೆಲ್ಗೂ ಕೈ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೇ ನೊಂದುಕೊಂಡಿದ್ದ ಇವರು ಇಂದು ಬೆಳಿಗ್ಗೆ ತಮ್ಮ ಜಮೀನಿನಲ್ಲಿರುವ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರು ಪತ್ನಿ ಶೈಲಾ ಸೇರಿದಂತೆ ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.