ಮಡಿಕೇರಿ, ಜು.22: ಜನಸಂಪರ್ಕ ಸಭೆಗೆ ಸಲ್ಲಿಕೆಯಾಗುವ ಶೇ.99 ಅರ್ಜಿಗಳು ಇತ್ಯರ್ಥ ಪಡಿಸುವಂತಹದ್ದಾಗಿದ್ದು, ಅರ್ಜಿಗಳನ್ನು ಕಾಲ ಮಿತಿಯೊಳಗೆ ಪರಿಹರಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಜನಸಂಪರ್ಕ ಸಭೆಗೆ ಸುಮಾರು 31 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಆದ್ಯತೆ ಮೇಲೆ ಬಗೆಹರಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಹಲವು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿವೆ. ಹಾಗೆಯೇ ಗ್ರಾಮೀಣ ಅಭಿವೃದ್ಧಿ, ಸಾರಿಗೆ ಸಂಪರ್ಕ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದ್ದಾಗಿದೆ. ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳ ಸಂಬಂಧ ಮತ್ತೊಮ್ಮೆ ಅಲೆದಾಡುವಂತಾಗಬಾರದು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಕಳೆದ ಬಾರಿ ನಡೆದ ಸಭೆಯ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಜನಸಂಪರ್ಕ ಸಭೆ ಹಮ್ಮಿಕೊಳ್ಳುವಂತೆ ಸಲಹೆ ಮಾಡಲಾಗಿತ್ತು, ಆದರೆ ಯಾವದೇ ಇಲಾಖೆಗಳು ಮುಂದಾಗಿಲ್ಲ. ಜಿಲ್ಲಾಡಳಿತ ವತಿಯಿಂದ ಜನಸಂಪರ್ಕ ಸಭೆ ನಡೆಸಿದಾಗ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಒತ್ತು ನೀಡುತ್ತಾರೆ. ಇದರಿಂದ ವಿವಿಧ ಇಲಾಖೆಗಳ ಸಮಸ್ಯೆಗಳು ತಿಳಿಯುವದಿಲ್ಲ. ಆದ್ದರಿಂದ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಡೆಸಿದರೆ ಇನ್ನೂ ಸಮಸ್ಯೆಗಳು ತಿಳಿಯಲಿವೆ. ಹಲವು ಸಮಸ್ಯೆಗಳನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರಿ ಕೆಲಸಕ್ಕಾಗಿ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಸಲಹೆ ಮಾಡಿದರು.

(ಮೊದಲ ಪುಟದಿಂದ) ಜಿ.ಪಂ.ಸಿಇಓ ಚಾರುಲತಾ ಸೋಮಲ್ ಮಾತನಾಡಿ ಸಾರ್ವ ಜನಿಕರ ಕುಂದು ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಕಾಳಜಿ ವಹಿಸಬೇಕಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಐಟಿಡಿಪಿ, ಸಾರ್ವಜನಿಕ ಶಿಕ್ಷಣ, ಪ್ರವಾಸೋದ್ಯಮ, ಅರಣ್ಯ ಹೀಗೆ ನಾನಾ ಇಲಾಖೆಗಳು ಜನಸಂಪರ್ಕ ಸಭೆಯನ್ನು ಹಮ್ಮಿಕೊಂಡು ಸಾರ್ವಜನಿಕರ ಅಹವಾಲುಗಳನ್ನು ಆಲಿ ಸುವಂತಾಗಬೇಕು ಎಂದು ಸಲಹೆ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆದ್ಯತೆ ಮೇಲೆ ಬಗೆಹರಿಸುವಂತೆ ಸಲಹೆ ಮಾಡಿದರು. ಜನಸಂಪರ್ಕ ಸಭೆಯಲ್ಲಿ ಒತ್ತುವರಿ ತೆರವು, ರಸ್ತೆ ಸುಧಾರಣೆ ಮಾಡುವದು, ಆರ್.ಟಿ.ಸಿ. ತಿದ್ದುಪಡಿ, ಕೊಡ್ಲಿಪೇಟೆ-ಮಡಿಕೇರಿ ಮಾರ್ಗ ಬಸ್ ಸೌಲಭ್ಯ ಕಲ್ಪಿಸುವದು, ಖಾತೆ ವರ್ಗಾವಣೆ, ಆಸ್ತಿ ಅತಿಕ್ರಮಣ ತೆರವುಗೊಳಿಸುವದು, ಬಂದೂಕು ಪರವಾನಗಿ, ಅರಣ್ಯ ಹಕ್ಕು ಕಾಯ್ದೆ ಸವಲತ್ತು, ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ, ನಿವೇಶನ, ವಸತಿ, ಕಂದಾಯ ನಿಗದಿ, ತಡೆಗೋಡೆ ನಿರ್ಮಾಣ ಮತ್ತಿತರ ಸಂಬಂಧ ಸಾರ್ವಜನಿಕರು ಜಿಲ್ಲಾಧಿಕಾರಿ ಅವರಿಗೆ ಅಹವಾಲು ಸಲ್ಲಿಸಿದರು.ಈ ಸಂದರ್ಭ ನಾನಾ ಇಲಾಖೆ ಅಧಿಕಾರಿಗಳು ಇದ್ದರು.