ಸೋಮವಾರಪೇಟೆ, ಡಿ. 18: ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿಮಠ ಚಿಗಟಳ್ಳಿ ಗ್ರಾಮದಲ್ಲಿ ಕಳೆದ 1965ನೇ ಇಸವಿಯಲ್ಲಿ ತೆರೆಯಲಾಗಿರುವ ಸಾರ್ವಜನಿಕ ಬಾವಿಗೆ ಇದೀಗ ಗ್ರಾಮದ ವ್ಯಕ್ತಿ ಯೋರ್ವರು ಮೋಟಾರ್ ಅಳವಡಿಸಿದ್ದು, ಇದರಿಂದಾಗಿ ಇತರರಿಗೆ ಕುಡಿಯುವ ನೀರಿಗೂ ತೊಂದರೆ ಯಾಗಿದೆ ಎಂದು ಗ್ರಾಮಸ್ಥರು ತಾಲೂಕು ಕಾರ್ಯನಿರ್ವಹಣಾಧಿ ಕಾರಿಗಳಿಗೆ ದೂರು ನೀಡಿದ್ದಾರೆ.

ಅಭಿಮಠ ಚಿಗಟಳ್ಳಿ ಗ್ರಾಮ ದಲ್ಲಿರುವ ಸಾರ್ವಜನಿಕ ಬಾವಿಗೆ ಸ್ಥಳೀಯರಾದ ಜಗದೀಶ್ ಎಂಬವರು ಮೋಟಾರ್ ಅಳವಡಿಸಿದ್ದು, ಇದರಿಂದಾಗಿ ಇತರ ಗ್ರಾಮಸ್ಥರು, ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಮೂರು ತಿಂಗಳ ಹಿಂದೆಯೇ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ. ಗ್ರಾ.ಪಂ. ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳ ಗಮನಸೆಳೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿನಲ್ಲಿ ಆಪಾದಿಸಿದ್ದಾರೆ.

ಸಾರ್ವಜನಿಕ ಬಾವಿಗೆ ಮೋಟಾರ್ ಅಳವಡಿಸಿದ ಕ್ರಮದ ವಿರುದ್ಧ ಗ್ರಾ.ಪಂ.ಗೆ ದೂರು ನೀಡಿದ ಮೇರೆ ಪಿಡಿಓ ಮತ್ತು ಅಧ್ಯಕ್ಷರು ತನಗೆ ನೋಟೀಸ್ ನೀಡಿದ್ದು, ತುರ್ತು ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲ್ಪಟ್ಟರೂ ನಮಗಳಿಗೆ ನ್ಯಾಯ ದೊರಕಿಲ್ಲ ಎಂದು ಗ್ರಾಮಸ್ಥ ಶಾಂತಪ್ಪ ದೂರಿದ್ದಾರೆ.

‘ನೀವುಗಳೂ ಬೇಕಿದ್ದರೆ ಮೋಟಾರ್ ಅಳವಡಿಸಿಕೊಳ್ಳಿ’ ಎಂದು ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಎಲ್ಲರೂ ಮೋಟಾರ್ ಅಳವಡಿಸಿ ಕೊಂಡರೆ ಕೆಲವೇ ದಿನಗಳಲ್ಲಿ ಬಾವಿಯಲ್ಲಿ ನೀರು ಖಾಲಿಯಾಗಿ ಬೇಸಿಗೆಯಲ್ಲಿ ತೀವ್ರ ಪರದಾಟ ಅನುಭವಿಸಬೇಕಾಗುತ್ತದೆ. ಇಡೀ ಗ್ರಾಮಸ್ಥರ ಹಿತಕಾಪಾಡುವ ಬದಲು ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಓ ಅವರುಗಳು ಕೇವಲ ಓರ್ವ ವ್ಯಕ್ತಿಯ ಹಿತ ಕಾಪಾಡಲು ಯತ್ನಿಸುತ್ತಿದ್ದಾರೆ ಎಂದು ಶಾಂತಪ್ಪ ಆರೋಪಿಸಿದ್ದಾರೆ.

ಈ ಹಿನ್ನೆಲೆ ತಾವುಗಳು ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ, ಅನಧಿಕೃತವಾಗಿ ಅಳವಡಿಸಿರುವ ಮೋಟಾರ್‍ನ್ನು ತೆರವುಗೊಳಿಸುವ ಮೂಲಕ ಗ್ರಾಮದ ಇತರರು ಅನುಭವಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದು, ತಪ್ಪಿದಲ್ಲಿ ತಾ.ಪಂ. ಎದುರು ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವದಾಗಿ ಗ್ರಾಮಸ್ಥರಾದ ಪುಪ್ಪಯ್ಯ, ಯಶೋದ, ಸುಶೀಲ, ನಂದಕುಮಾರ್, ಪ್ರನೂತಿ, ಸುಬ್ಬಯ್ಯ, ಗಣೇಶ್, ಮಾಚಮ್ಮ ಸೇರಿದಂತೆ ಇತರರು ಎಚ್ಚರಿಕೆ ನೀಡಿದ್ದಾರೆ.