ಕುಶಾಲನಗರ, ಜು. 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕದ 5 ಬಸ್ಗಳು ಮಾತ್ರ ಕುಶಾಲನಗರದ ಬಸ್ ನಿಲ್ದಾಣದಲ್ಲಿ ನಿಲುಗಡೆ ಗೊಂಡಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ಲಕ್ಷ್ಯದಡಿಯಲ್ಲಿ ಮಡಿಕೇರಿ ಘಟಕ ವ್ಯವಸ್ಥಾಪಕರು 10 ಮಂದಿ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿರುವ ಪ್ರಕರಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳು ಖಂಡಿಸಿದ್ದಾರೆ.
ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯವ್ಯಾಪಿ ನಡೆಯು ತ್ತಿರುವ ಮುಷ್ಕರದಲ್ಲಿ ನೌಕರರು ಶಾಂತಿಯುತವಾಗಿ ಪಾಲ್ಗೊಂಡಿದ್ದು ಈ ಸಂದರ್ಭ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಅವರು ಅನವಶ್ಯಕವಾಗಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸಂಘದ ಪದಾಧಿಕಾರಿಗಳಾದ ಧನೇಂದ್ರ ಕುಮಾರ್ ಮತ್ತು ಮ್ಯಾಕ್ಸ್ ಬ್ರೋನಿ, ಯಾವದೇ ಪ್ರಾಥಮಿಕ ತನಿಖೆ ನಡೆಸದೆ 10 ಮಂದಿ ಸಿಬ್ಬಂದಿಗಳ ಮೇಲೆ ಆರೋಪ ಹೊರಿಸಿರುವದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮಡಿಕೇರಿ ಘಟಕದ ಅಧಿಕಾರಿಗಳ ಸೂಚನೆ ಮೇರೆಗೆ ತಾ. 24 ರಂದು ಚಾಲಕರು ಮತ್ತು ನಿರ್ವಾಹಕರು ಕುಶಾಲನಗರಕ್ಕೆ ಬಸ್ ಸಂಚಾರ ಮಾಡಿದ್ದು ನಂತರ ಅಂದು ರಾತ್ರಿ ಕುಶಾಲನಗರ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆಗೊಳಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಕುಶಾಲನಗರ ಬಸ್ ನಿಲ್ದಾಣದಲ್ಲಿ ಕೆಲವು ಕಿಡಿಗೇಡಿಗಳು 5 ಬಸ್ಗಳ ಟಯರ್ ಗಾಳಿ ತೆಗೆದಿರುವ ಘಟನೆ ಬಗ್ಗೆ ಸ್ಥಳೀಯ ಸಾರಿಗೆ ನಿಯಂತ್ರಣಾಧಿಕಾರಿ ಹಾಗೂ ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬಸ್ನ ಟಯರ್ ದುರಸ್ತಿಗೊಳಿಸಲು ಘಟಕದ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ ಹಿನ್ನೆಲೆಯಲ್ಲಿ ವಾಹನಗಳನ್ನು ಮಡಿಕೇರಿ ಘಟಕಕ್ಕೆ ತಲುಪಿಸಲು ಅನಾನುಕೂಲ ಉಂಟಾಗಿದೆ ಎಂದು ವಿವರ ನೀಡಿದರು.
ಈ ಹಿನ್ನೆಲೆಯಲ್ಲಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗ ದಿರುವ ಸಂದರ್ಭ ತಾ. 26 ರಂದು ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ 10 ಮಂದಿ ಚಾಲಕ, ನಿರ್ವಾಹಕರನ್ನು ಅಮಾನತಿಗೆ ಶಿಫಾರಸು ಮಾಡಿರುವ ವರದಿ ತಿಳಿದ ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಂದೆ ಆಗುವ ಪರಿಣಾಮಗಳಿಗೆ ಘಟಕ ವ್ಯವಸ್ಥಾಪಕರೇ ನೇರ ಹೊಣೆಯಾಗುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪಷ್ಟನೆ : ಮಡಿಕೇರಿ ಘಟಕದ 5 ವಾಹನಗಳು ಕುಶಾಲನಗರ ಬಸ್ ನಿಲ್ದಾಣದಲ್ಲಿ ನಿಲುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಯಾವದೇ ಸಿಬ್ಬಂದಿಗಳ ಅಮಾನತಿಗೆ ಶಿಫಾರಸು ಮಾಡಿಲ್ಲ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ್ ಶಿರಾಳಿ ಸ್ಪಷ್ಟಪಡಿಸಿದ್ದಾರೆ. ಅವರು ಈ ಬಗ್ಗೆ ದೂರವಾಣಿಯಲ್ಲಿ ಮಾಹಿತಿ ಒದಗಿಸಿದ್ದು ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಶಾಂತಿಯುತ ಮುಷ್ಕರ ನಡೆದಿದ್ದು ಯಾವದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಯಾವದೇ ವಾಹನಗಳು ಸಂಚರಿಸಿಲ್ಲ ಎಂದು ತಿಳಿಸಿದ್ದಾರೆ. ಮಡಿಕೇರಿ ಘಟಕದಿಂದ ಮುಷ್ಕರ ಸಂಬಂಧ ವರದಿಯನ್ನು ತರಿಸಲಾಗಿದೆಯೇ ಹೊರತು ನೌಕರರ ವಿರುದ್ಧ ಕ್ರಮದ ಬಗ್ಗೆ ಯಾವದೇ ಸೂಚನೆ ನೀಡಿಲ್ಲ ಎಂದು ತಿಳಿಸಿದ್ದಾರೆ. ಮಡಿಕೇರಿ ಘಟಕದ 112 ಬಸ್ಗಳ ಪೈಕಿ ಕುಶಾಲನಗರದಲ್ಲಿ 5 ವಾಹನಗಳು ನಿಲುಗಡೆಗೊಂಡಿದ್ದು ಈ ವಾಹನಗಳ ಟಯರ್ ಗಾಳಿ ತೆಗೆದಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ ಹಾಗೂ ವಾಹನದ ಭದ್ರತೆಯ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ವಿವರ ಪಡೆದು ಮೇಲಧಿಕಾರಿಗಳಿಗೆ ಮಾಹಿತಿ ಒದಗಿಸಲಾಗಿದೆ ಹೊರತು ಯಾವದೇ ಸಿಬ್ಬಂದಿಗಳ ಅಮಾನತು ಅಥವಾ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿಲ್ಲ ಎಂದು ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ ಅವರು ಸ್ಪಷ್ಟಪಡಿಸಿದ್ದಾರೆ.