ಮಡಿಕೇರಿ, ಜು. 25: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ವೇತನ ಪರಿಷ್ಕರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳು ಪ್ರಯಾಕಣಿಕರಿಲ್ಲದೆ ಭಣಗುಡುತ್ತಿದ್ದ ದೃಶ್ಯ ಕಂಡುಬಂದಿತ್ತು.ಕುಶಾಲನಗರ : ರಾಜ್ಯ ಸಾರಿಗೆ ಸಂಸ್ಥೆ ಬಸ್ ಬಂದ್ ಹಿನ್ನೆಲೆಯಲ್ಲಿ ಕುಶಾಲನಗರ ಬಸ್ ನಿಲ್ದಾಣ ಯಾವದೇ ಬಸ್‍ಗಳ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದರೆ ಖಾಸಗಿ ವಾಹನಗಳ ದರ್ಬಾರ್ ಕಂಡು ಬಂದಿದೆ. ಬಸ್ ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿದ್ದರೂ ಜಿಲ್ಲಾಡಳಿತದ ಮೂಲಕ 35ಕ್ಕೂ ಅಧಿಕ ಮ್ಯಾಕ್ಸಿ ಕ್ಯಾಬ್‍ಗಳನ್ನು ಸಂಚಾರಕ್ಕೆ ಕಲ್ಪಿಸಲಾಗಿತ್ತು.ಕುಶಾಲನಗರದಿಂದ ಮಡಿಕೇರಿಗೆ ತೆರಳುವ ಬಹುತೇಕ ಜನರು ತಮ್ಮ ಸ್ವಂತ ವಾಹನವನ್ನು
ಸಾರಿಗೆ ಮುಷ್ಕರ: ಪರ್ಯಾಯ ವ್ಯವಸ್ಥೆ
ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರು ತಾ. 25 ರಿಂದ ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ಅಯ್ಯಂಗಾರ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ, ಸಂಪಾಜೆಯವರೆಗಿನ ಹೆದ್ದಾರಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲವಾಗುವ ಸಂಭವವಿರುವದರಿಂದ ಈ ರಸ್ತೆಯಲ್ಲಿ ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್ಸುಗಳನ್ನು ಓಡಿಸಲು ನಿರ್ಧರಿಸಲಾಗಿದೆ.
ಈ ಮಾರ್ಗದಲ್ಲಿ 20 ಮ್ಯಾಕ್ಸಿಕ್ಯಾಬ್‍ಗಳ ನಿರಂತರ ಸಂಚಾರ ಸೌಲಭ್ಯ ಒದಗಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯ ಉಳಿದ ಭಾಗದಲ್ಲಿ ಖಾಸಗಿ ಬಸ್ಸುಗಳ ಸಂಚಾರವಿರುವದರಿಂದ ಹೆಚ್ಚಿನ ಅನಾನುಕೂಲ ಇರುವದಿಲ್ಲ. ಬಸ್ ನಿಲ್ದಾಣಗಳಿಗೆ ಆಗಿಂದಾಗ್ಗೆ ನಿರಂತರ ಭೇಟಿ ನೀಡಲಾಗುತ್ತಿದ್ದು, ಪ್ರಯಾಣಿಕರ ಸಂಚಾರ ಒತ್ತಡದ ಬಗ್ಗೆ ಗಮನ ಹರಿಸಲಾಗುತ್ತಿದೆ. ಯಾವದೇ ಅನಾನುಕೂಲ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
ಹಾಗೆಯೇ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಚೇರಿಯ ಕಂಟ್ರೋಲ್ ರೂಂ ಸಂಖ್ಯೆ: 08272-225785 ಕೇಂದ್ರ ಕಚೇರಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂನೊಂದಿಗೆ ನಿರಂತರ ಸಂಪರ್ಕವಿರಲು ವ್ಯವಸ್ಥೆಗೊಳಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ಅಯ್ಯಂಗಾರ್ ತಿಳಿಸಿದ್ದಾರೆ. ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು.
ಕುಶಾಲನಗರದ ಬಸ್ ನಿಲ್ದಾಣದಲ್ಲಿ ಹೊಟೇಲ್, ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್‍ನಲ್ಲಿ ಪಾಲ್ಗೊಂಡಿದ್ದವು. ಬಹುತೇಕ ಬಸ್‍ಗಳು ಮಡಿಕೇರಿ ಘಟಕದಲ್ಲಿ ನಿಲುಗಡೆಗೊಂಡಿದ್ದರೆ ಕುಶಾಲನಗರದ ನಿಲ್ದಾಣದಲ್ಲಿ 4 ಬಸ್‍ಗಳು ನಿಲುಗಡೆಗೊಂಡಿದ್ದು ಅವುಗಳ ಟಯರ್‍ಗಳಿಂದ ಗಾಳಿ ತೆಗೆದ ದೃಶ್ಯ ಗೋಚರಿಸಿತು.
ಖಾಸಗಿ ಸಂಸ್ಥೆಯ ಬಸ್‍ಗಳು ಕುಶಾಲನಗರದಿಂದ ಮೈಸೂರು ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುವದರೊಂದಿಗೆ ಬಹುತೇಕ ಪ್ರಯಾಣಿಕರ ಸಮಸ್ಯೆ ಪರಿಹಾರ ಕಂಡುಬಂತು. ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಯಾವದೇ ರೀತಿಯ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸುವದರೊಂದಿಗೆ ಖಾಸಗಿ ವಾಹನಗಳ ವ್ಯವಸ್ಥೆ ಕಲ್ಪಿಸಿರುವದಾಗಿ ಮಡಿಕೇರಿ ಸಾರಿಗೆ ಪ್ರಾಧಿಕಾರದ ನಿರೀಕ್ಷಕ ರಾಮನಾಥನ್ ತಿಳಿಸಿದ್ದಾರೆ.
ವೀರಾಜಪೇಟೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಧ್ಯ ರಾತ್ರಿಯಿಂದ ಆರಂಭಿಸಿರುವ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದಿಂದಾಗಿ ವೀರಾಜಪೇಟೆಯ ಸಂಸ್ಥೆಯ ಬಸ್ಸು ನಿಲ್ದಾಣ ಬೆಳಗಿನ ಜಾವದಿಂದಲೇ ಬಿಕೋ ಎನ್ನುತ್ತಿತ್ತು.
ಪ್ರತಿ ದಿನ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಸರಾಸರಿ 165 ಬಸ್‍ಗಳು ಬಂದು ಹಿಂತೆರಳುತ್ತಿದ್ದು, ಮಧ್ಯ ರಾತ್ರಿ 12ಗಂಟೆಯವರೆಗೆ ಈ ನಿಲ್ದಾಣಕ್ಕೆ ಬಂದ ಸಂಸ್ಥೆಯ ಬಸ್ಸುಗಳು ಮುಷ್ಕರದ ನಿಮಿತ್ತ ಹಿಂದಕ್ಕೆ ತೆರಳಿದ್ದರಿಂದ ಬಸ್ ನಿಲ್ದಾಣ ಖಾಲಿಯಾಗಿತ್ತು. ನೌಕರರ ಮುಷ್ಕರದ ನಿಲುವನ್ನು ಅರಿತ ಪ್ರಯಾಣಿಕರು ಬಸ್ ನಿಲ್ದಾಣದತ್ತ ಕಾಲಿಟ್ಟಿಲ್ಲ. ನಿಲ್ದಾಣದ ಕಚೇರಿ ಮಾತ್ರ ಎಂದಿನಂತೆ ತೆರೆದಿತ್ತು.
ವೀರಾಜಪೇಟೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಪ್ರತಿ ದಿನ 15 ರಿಂದ 20 ಸರಕಾರಿ ಬಸ್‍ಗಳು ತಂಗುತ್ತಿದ್ದವು. ಆದರೆ ಇಂದು ಮುಷ್ಕರದ ಪರಿಣಾಮವಾಗಿ ತಡವಾಗಿಯೂ ಬಂದ ಎಲ್ಲಾ ಬಸ್‍ಗಳು ಡಿಪೋಗಳಿಗೆ ಹಿಂತಿರುಗಿದವು.
ಕೇರಳದಿಂದ ವೀರಾಜಪೇಟೆ ಮಾರ್ಗವಾಗಿ ಮೈಸೂರು ಬೆಂಗಳೂರಿಗೆ ತೆರಳುವ ಕೇರಳದ ಅಂತರ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳು ಇಂದು ಸಂಚಾರ ಸ್ಥಗಿತಗೊಳಿಸಿದ್ದರಿಂದ ಕೇರಳದಿಂದ ಯಾವದೇ ಬಸ್ ಕೊಡಗಿನತ್ತ ಬರಲಿಲ್ಲ. ಬೆಂಗಳೂರು, ನಾಪೋಕ್ಲು, ವೀರಾಜಪೇಟೆಯಿಂದ ಪ್ರತಿ ನಿತ್ಯ ಬೆಂಗಳೂರಿಗೆ ತೆರಳಿ ಹಿಂತಿರುಗುತ್ತಿದ್ದ ಖಾಸಗಿ ಬಸ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಮೈಸೂರಿನಿಂದ ತಲಚೇರಿಗೆ ಅಂತರರಾಜ್ಯ ಪರವಾನಗಿಯೊಂದಿಗೆ ನಿತ್ಯ ಕೇರಳದ ತಲಚೇರಿ ಕಣ್ಣಾನೂರಿಗೆ ತೆರಳಿ ಹಿಂದಿರುಗುತ್ತಿದ್ದ ಖಾಸಗಿ ಬಸ್ಸು ಎಂದಿನಂತೆ ಸಂಚಾರ ಮುಂದುವರೆಸಿದ್ದವು. ಪ್ರಯಾಣಿಕರು ಬೆಂಗಳೂರು ಮೈಸೂರು ವಿವಿಧೆಡೆಗಳಿಗೆ ತೆರಳಲು ಖಾಸಗಿ ಬಸ್ಸುಗಳಲ್ಲಿ ಮುಗಿ ಬೀಳುತ್ತಿದ್ದುದು ಕಂಡು ಬಂತು.
ಸಾರಿಗೆ ಸಂಸ್ಥೆ ನೌಕರರ ರಾಜ್ಯ ಸಮಿತಿ ಮುಷ್ಕರಕ್ಕೆ ಭಾನುವಾರ ಮಧ್ಯ ರಾತ್ರಿಯಿಂದ ಕರೆ ನೀಡಿದ್ದರೂ ಕೆಲವು ನೌಕರರು ಅಪರಾಹ್ನ 1 ಗಂಟೆಯಿಂದಲೇ ಬಸ್‍ಗಳನ್ನು ನಿಲ್ಲಿಸಿ ಮುಷ್ಕರಕ್ಕೆ ಚಾಲನೆ ನೀಡಿದ್ದರಿಂದ ಮೈಸೂರು, ಬೆಂಗಳೂರು ನಗರಗಳಿಗೆ ತೆರಳಿದ್ದ ಪ್ರಯಾಣಿಕರು ಹಿಂದಿರುಗಲು ಹರ ಸಾಹಸ ಪಡಬೇಕಾಯಿತು.
ಕೆಲವರು ಹಿಂದಿರುಗಲು ಟ್ಯಾಕ್ಸಿಯನ್ನು ಅವಲಂಭಿಸಬೇಕಾಯಿತು. ನಿಗದಿತ ಅವಧಿಯ ಮೊದಲೇ ಮುಷ್ಕರದ ಹೆಸರಿನಲ್ಲಿ ಸೇವೆಗೆ ಗೈರು ಹಾಜರಾಗಿ ಪ್ರಯಾಣಿಕರಿಗೆ ಕಿರುಕುಳ ನೀಡಿದ ನೌಕರರ ಮೇಲೆ ಸಂಸ್ಥೆಯ ಆಡಳಿತ ಪ್ರತ್ಯೇಕವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಬಸ್ ಇಲ್ಲದೆ ಫಜೀತಿಗೊಳಗಾದ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಸೋಮವಾರಪೇಟೆ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಕರ್ನಾಟಕ ರಾಜ್ಯ ಸರ್ಕಾರಿ ಬಸ್ ಚಾಲಕರು ಮತ್ತು ನಿರ್ವಾಹಕರ ಕ್ರಮದಿಂದಾಗಿ ಯಾವೊಂದು ಬಸ್‍ಗಳು ರಸ್ತೆಗಿಳಿಯದ ಹಿನ್ನೆಲೆ ಸೋಮವಾರಪೇಟೆಯ ಸರ್ಕಾರಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ದಿನಂಪ್ರತಿ ಬೆಳಿಗ್ಗೆ ಹಾಗೂ ಸಂಜೆ ವೇಳೆಗೆ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರ ಓಡಾಟಕ್ಕೆ ಹೆಚ್ಚು ಅವಲಂಬಿತವಾಗಿರುವ ಸರ್ಕಾರಿ ಬಸ್‍ಗಳು ಇಂದು ಓಡಾಟ ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರು ಪರದಾಟ ಅನುಭವಿಸಿದರು. ವಿದ್ಯಾರ್ಥಿಗಳು ರಜೆಯ ಮಜಾದಲ್ಲಿದ್ದರೆ, ಹೊರ ಜಿಲ್ಲೆಗೆ ತೆರಳಬೇಕಾದ ಮಂದಿ ಹೆಚ್ಚಿನ ತೊಂದರೆ ಅನುಭವಿಸಿದರು.
ಬಸ್‍ಗಳ ಸಂಚಾರ ಇಲ್ಲದ್ದರಿಂದ ಬಸ್ ನಿಲ್ದಾಣದ ಅಂಗಡಿಗಳು ಖಾಲಿ ಹೊಡೆಯುತ್ತಿದ್ದವು. ಕೆಲವರು ಬೆಳಗ್ಗಿನ ಜಾವ ಸರ್ಕಾರಿ ಬಸ್ ನಿಲ್ದಾಣಕ್ಕೆ ಆಗಮಿಸಿ ಕೆಲಹೊತ್ತು ಬಸ್‍ಗಾಗಿ ಕಾದರು. ನಂತರ ಖಾಸಗಿ ಬಸ್‍ಗಳ ಮೂಲಕ ಜಿಲ್ಲೆಯ ಇತರ ಭಾಗಗಳಿಗೆ ತೆರಳಿದರು. ನಿನ್ನೆ ರಾತ್ರಿಯೇ ಸೋಮವಾರಪೇಟೆಗೆ ಆಗಮಿಸಿದ್ದ ಬಸ್‍ಗಳನ್ನು ಇಲ್ಲಿನ ನಿಲ್ದಾಣದಲ್ಲಿಯೇ ನಿಲುಗಡೆಗೊಳಿಲಾಯಿತು.
*ಗೋಣಿಕೊಪ್ಪ : ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ಗ್ರಾಮೀಣ ಪ್ರದೇಶದ ಜನತೆಗೆ ಸ್ವಲ್ಪ ಬಿಸಿಮುಟ್ಟಿಸಿತು. ಆದರೆ ನಗರ ಪ್ರದೇಶ ಜನತೆ ಎಂದಿನಂತೆ ಸಂಚರಿಸಿದರು. ದಕ್ಷಿಣ ಕೊಡಗಿನಲ್ಲಿ ಶೇ.50 ರಷ್ಟು ಖಾಸಗಿ ಬಸ್‍ಗಳ ಓಡಾಟವಿದ್ದುದರಿಂದ ಜನತಗೆ ಹೆಚ್ಚಿನ ತೊಂದರೆ ಸಂಭವಿಸಿದಂತೆ ಕಂಡು ಬರಲಿಲ್ಲ. ಗೋಣಿಕೊಪ್ಪಲು. ಶ್ರೀಮಂಗಲ, ಬಾಳೆಲೆ, ಹುದಿಕೇರಿ, ಪಾಲಿಬೆಟ್ಟ, ಸಿದ್ದಾಪುರ, ವೀರಾಜಪೇಪೇಟೆ ಮಾರ್ಗವಾಗಿ ಎಂದಿನಂತೆ ಖಾಸಗಿ ಬಸ್‍ಗಳು ಸಂಚರಿಸಿದವು. ಶಾಲಾ ಕಾಲೇಜಿಗೆ ರಜೆ ಇದ್ದುದರಿಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಜತೆಗೆ ಗೋಣಿಕೊಪ್ಪಲಿನಲ್ಲಿ ಜನರ ಓಡಾಟವೂ ಕಡಿಮೆಯಾಗಿತ್ತು.
ಶನಿವಾರಸಂತೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದಿಂದ ಶನಿವಾರಸಂತೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಪ್ರಯಾಣಿಕರ ಕೊರತೆಯಿಂದ ಭಣಗುಡುತ್ತಿತ್ತು.
ಪಟ್ಟಣದಲ್ಲಿ ವ್ಯವಸ್ಥಿತ ಬಸ್ ನಿಲ್ದಾಣವಿಲ್ಲದೇ ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತವೇ ಬಸ್ ನಿಲ್ದಾಣವಾಗಿದ್ದು, ಸದಾ ಜನಜಂಗುಳಿಯಿಂದ ತುಂಬಿರುತ್ತಿತ್ತು. ಶನಿವಾರಸಂತೆ ಕೊಡಗಿನ ಗಡಿ ಭಾಗವಾಗಿದ್ದು, ಪ್ರತಿನಿತ್ಯ ಸುಮಾರು 70 ಸರಾಸರಿ ಬಸ್‍ಗಳು ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಮತ್ತಿತರ ಜಿಲ್ಲೆಗಳಿಂದ ಶನಿವಾರಸಂತೆ ಮೂಲಕ ಬಂದು ತೆರಳುತ್ತಿತ್ತು.
ಮುಷ್ಕರದ ಪರಿಣಾಮ ಹಳ್ಳಿಗಳಿಂದ ಪ್ರಯಾಣಿಕರಾರು ಪಟ್ಟಣಕ್ಕೆ ಬರಲಿಲ್ಲ. ರಜೆ ನಿಮಿತ್ತ ಶಾಲಾ - ಕಾಲೇಜು ವಿದ್ಯಾರ್ಥಿಗಳು ಬರಲಿಲ್ಲ. ಹಾಗಾಗಿ ಖಾಸಗಿ ಬಸ್ಸುಗಳು ಎಂದಿನಂತೆ ಓಡಾಡಿದರೂ ಜನರ ನೂಕು ನುಗ್ಗಲು ಇರಲಿಲ್ಲ. ಬಸ್ ತಂಗುದಾಣವು ಭಣಗುಡುತ್ತಿತ್ತು.