ಶ್ರೀಮಂಗಲ, ಅ. 3: ಕೈಲ್ ಪೊಳ್ದ್ ಸೇರಿದಂತೆ ಎಲ್ಲಾ ಹಬ್ಬಗಳನ್ನು ಮನೆಗಳಲ್ಲಿ ಆಚರಿಸುತ್ತಾರೆ. ಆದರೆ ಎಲ್ಲರೂ ಒಂದೆಡೆ ಸೇರಿ ಸಾಮೂಹಿಕವಾಗಿ ಆಚರಿಸುವ ಹಬ್ಬದಿಂದ ಪರಸ್ಪರ ಬಾಂಧವ್ಯ ವೃದ್ಧಿಗೆ ಅವಕಾಶ ಕಲ್ಪಿಸುವದರೊಂದಿಗೆ, ವಿಚಾರ ವಿನಿಮಯಕ್ಕೂ ವೇದಿಕೆ ಸಿಗಲಿದೆ ಎಂದು ರಿವರ್ ಸೈಡ್ ಅಸೋಸಿಯೇಷನ್ ಆಡಳಿತ ಮಂಡಳಿ ಅಧ್ಯಕ್ಷ ಮೀದೇರಿರ ಬಿ. ಸುರೇಶ್ ಅಭಿಪ್ರಾಯಪಟ್ಟರು.

ಬಿರುನಾಣಿ ಗ್ರಾ.ಪಂ, ವ್ಯಾಪ್ತಿಯ ಪೊರಾಡ್ ಗ್ರಾಮದ ರಿವರ್ ಸೈಡ್ ಅಸೋಸಿಯೇಷನ್ ವತಿಯಿಂದ ಕೆ.ಕೆ.ಆರ್. ನಲ್ಲಿ ಆಯೋಜಿಸಿದ್ದ ಕೈಲ್ ಪೊಳ್ದ್ ಕ್ರೀಡಾಕೂಟ ಹಾಗೂ ಸಂತೋಷ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಪೊರಾಡ್ ಊರು ಪಂಚಾಯಿತಿಯ ಅಧ್ಯಕ್ಷ ಮೀದೇರಿರ ಕೇಸು ಕುಟ್ಟಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿ ದಿನ ತಮ್ಮ ಕೃಷಿ ಕಾರ್ಯದಲ್ಲಿ ನಿರತರಾದ ನಂತರ ರೈತ ಕುಟುಂಬಗಳು ಒಂದೆಡೆ ಸೇರಿ ತಮ್ಮ ವಿಚಾರಗಳನ್ನು ಚರ್ಚಿಸಲು ವೇದಿಕೆ ಇಲ್ಲದಂತಾಗಿದೆ. ಸ್ಥಳೀಯ ಜನರು ಸಂಘ -ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಸಮಾಜಮುಖಿ ಕೆಲಸ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಮಹಿಳೆಯರು, ಮಕ್ಕಳು ಹಾಗೂ ಪುರುಷರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಈ ಸಂದರ್ಭ ಏರ್ಪಡಿಸಲಾಗಿತ್ತು. ಸಂಘದ ಕಾರ್ಯದರ್ಶಿ ಬಲ್ಯಮೀದೇರಿರ ಶಿವಕುಮಾರ್, ಹಿರಿಯರಾದ ಮೀದೇರಿರ ಬೋಜಮ್ಮ ಚೆಟ್ಟಿಯಪ್ಪ, ಮೀದೇರಿರ ಲೀಲಾ ದಿಲೀಪ್, ಬಲ್ಯಮೀದೇರಿರ ನಾಚಪ್ಪ, ಬೆಳ್ಯಪ್ಪ, ಗಣಪತಿ, ಅಣ್ಣೀರ ಪೊನ್ನಪ್ಪ, ಗ್ರಾ.ಪಂ, ಮಾಜಿ ಸದಸ್ಯೆ ಮೀದೇರಿರ ಕವಿತಾ ಮತ್ತಿತರು ಪಾಲ್ಗೊಂಡಿದ್ದರು.

ಮೀದೇರಿರ ಶ್ರಾವ್ಯ ಪ್ರಾರ್ಥಿಸಿ, ಸೋಮಣ್ಣ ಚಿಟ್ಟಿಯಪ್ಪ ಸ್ವಾಗತಿಸಿ, ಬಲ್ಯಮೀದೇರಿರ ಶರಣ್ ಚಂಗಪ್ಪ ವಂದಿಸಿದರು.