ಶನಿವಾರಸಂತೆ, ಅ. 17: ಕ್ರೀಡೆ ಭೇಧಭಾವ ಹಾಗೂ ತಾರತಮ್ಯ ಭಾವನೆಯನ್ನು ದೂರ ಮಾಡಿ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ತಾ. 18ರಂದು ಕೊಡ್ಲಿಪೇಟೆಯಲ್ಲಿ ಆಯೋಜಿಸಿರುವ ಜಿಲ್ಲಾಮಟ್ಟದ ವೀರಶೈವ ಧಾರ್ಮಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಂಗವಾಗಿ ಭಾನುವಾರ ಕಲ್ಲುಮಠದ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುಟ್ಟ ಮಕ್ಕಳಿಂದ ದೊಡ್ಡವರವರೆಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದ್ದು, ವೈವಿಧ್ಯಮಯ ಕ್ರೀಡೆಗಳು ಸಾಮರಸ್ಯವನ್ನು ಮೂಡಿಸುತ್ತಿವೆ ಎಂದರು.
ವೃತ್ತ ನಿರೀಕ್ಷಕ ಪರಶಿವಮೂರ್ತಿ ಮಾತನಾಡಿ, ಜಿಲ್ಲೆಯ ವೀರಶೈವ ಸಮುದಾಯದಲ್ಲಿ ಇರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಕ್ರೀಡಾಕೂಟ ಸಹಕಾರಿಯಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಸಮುದಾಯದಲ್ಲಿ ಸೌಹಾರ್ದತೆ ಮೂಡುತ್ತದೆ ಎಂದರು.
ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಗ್ರಾಮೀಣ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸಿ, ಪ್ರೋತ್ಸಾಹ ನೀಡಬೇಕು ಎಂದರು.
ಕ್ರೀಡಾ ಸಮಿತಿ ಸಂಚಾಲಕ ಎಸ್. ಮಹೇಶ್ ಮಾತನಾಡಿ, ಜೀವನದ ಜಂಜಾಟಗಳನ್ನು ಬದಿಗೊತ್ತಿ, ಸಮಸ್ಯೆಗಳಿಂದ ಮುಕ್ತರಾಗಲು ಒಂದೇ ಸಮುದಾಯದವರು ಹಮ್ಮಿಕೊಂಡಿ ರುವ ಕ್ರೀಡಾಕೂಟ ಅರ್ಥಪೂರ್ಣ ವಾಗಿದೆ ಎಂದರು.
ಕಲ್ಲುಮಠದ ಮಹಾಂತಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದ ಒಗ್ಗೂಡುವಿಕೆ ಹಾಗೂ ಬೆಳವಣಿಗೆಗೆ ಕ್ರೀಡಾಕೂಟ ಅಗತ್ಯವಿದೆ. ಕ್ರೀಡೆ ಶಕ್ತಿ ಸಾಮಥ್ರ್ಯ ಹೆಚ್ಚಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅ.ಭಾ.ವೀ. ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಮಾತನಾಡಿ, ಸಮುದಾಯದವರನ್ನು ಒಂದು ಗೂಡಿಸುವ ಕ್ರೀಡಾಕೂಟದ ವ್ಯವಸ್ಥೆ ಅರ್ಥಪೂರ್ಣವಾಗಿದೆ. ಒಗ್ಗಟ್ಟಿನ ಪ್ರತೀಕವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಿರಿಕೊಡ್ಲಿಮಠಾಧೀಶ ಸದಾಶಿವ ಸ್ವಾಮೀಜಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜ್, ತಾ.ಪಂ. ಘಟಕದ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಸುರೇಶ್, ವೀರಾಜಪೇಟೆ ಘಟಕದ ಅಧ್ಯಕ್ಷ ಸಂದೀಪ್, ಅಧ್ಯಕ್ಷೆ ಉಷಾ ತೇಜಸ್ವಿ, ಡಿ.ಬಿ. ಸೋಮಪ್ಪ, ಎಸ್.ಆರ್. ಶಿವಪ್ಪ, ಬಸಪ್ಪ, ದಿವಾಕರ್, ಅಶ್ವಥ್, ಪ್ರೇಮ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ವಿವಿಧ ವಯೋಮಾನದವರಿಗೆ ಕಾಳು ಹೆಕ್ಕುವದು, ಒಂಟಿಕಾಲು ಓಟ, ಕಪ್ಪೆ ಜಿಗಿತ, ಗೋಣಿಚೀಲ ಓಟ, ವಿಷದ ಚೆಂಡು, ಬಸ್ ಹುಡುಕಾಟ, ಹಗ್ಗ ಜಗ್ಗಾಟ, ಬಲೂನು ಒಡೆಯುವದು, ಮ್ಯೂಸಿಕಲ್ ಚೇರ್ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.