ನನ್ನ ಮನಸ್ಸಿನ ಮಂಥನಕ್ಕೆ ಇಂದು ಸಿಲುಕಿದ ವಸ್ತು, ಮಿಲಿಯಾಂತರ ಜನರ ದಿನದ ಗಣನೀಯ ಭಾಗವನ್ನು ತನ್ನದಾಗಿಸಿಕೊಂಡ, ವಿದ್ಯಾವಂತರೇ ಅಲ್ಲದೆ ಬಹಳಷ್ಟು ಜನರ ಬದುಕಿನ ಅವಿಭಾಜ್ಯ ಭಾಗವಾಗಿ ಹೋದಂತಿರುವ ಪೌರ್ವಾತ್ಯ ಜಗತ್ತಿನ ಮನಸ್ಸುಗಳನ್ನು ತನ್ನ ವಸಾಹತುಗಳನ್ನಾಗಿ ಮಾರ್ಪಡಿಸಿ ಕೊಳ್ಳಲು ಪಾಶ್ಚಿಮಾತ್ಯ ಜಗತ್ತಿಗೆ ಸಿಕ್ಕಿರುವ ‘‘ಫೇಸ್‍ಬುಕ್’’ ಎನ್ನುವ ಹೊಸ ಆಯುಧ. ನಾನಿಂದು ‘‘ಫೇಸ್‍ಬುಕ್’’ನ ಪುರಾಣದ ಬಗ್ಗೆ ಹೇಳ ಬರುತ್ತಿಲ್ಲವಾದರೂ ಈ ಸಾಮಾಜಿಕ ಜಾಲ ತಾಣ ನಮ್ಮಂತ ಸಾಮಾನ್ಯರ ಬದುಕಿನಲ್ಲಿ ಹೇಗೆ ತನ್ನ ಛಾಪನ್ನು ಮೂಡಿಸಿದೆ ಎನ್ನುವದರ ಬಗ್ಗೆ. ನಾವು ಮಾನವ ಜೀವಿಗಳು, ಮನುಷ್ಯ ಜನುಮದಲ್ಲಿ ಯಾವ ಯಾವ ವಯಸ್ಸಿನಲ್ಲಿ ಏನೇನು ನಡೆಯ ಬೇಕಿದೆಯೋ ಅದೆಲ್ಲವೂ ಆಯಾಯ ವಯಸ್ಸಿನಲ್ಲಿ ನಡೆದೇ ತೀರಬೇಕು. ವಿದ್ಯಾಭ್ಯಾಸ, ಉದ್ಯೋಗ, ಮದುವೆ ಮಕ್ಕಳು ಪ್ರತಿಯೊಂದು ವಯಸ್ಸು ಮೂವತ್ತು ಕಳೆದ ನಂತರ ಓದಿ ಪೂರೈಸುವದುಂಟೆ ? ಉದ್ಯೋಗ ಹುಡುಕುವದುಂಟೆ ? ವಯಸ್ಸು ನಲವತ್ತು ಕಳೆದು ಮದುವೆಯಾಗಿ ಮಕ್ಕಳು ಮರಿ ಅಂತಂದು ಅವರನ್ನೊಂದು ನೆಲೆ ಕಾಣಿಸೋದುಂಟೇ ? ಆದರೆ, ಈಗೆಲ್ಲವು ಈ ಪರಿಸ್ಥಿತಿಗೆ ಬಂದು ತಲಪಿದೆ. ಕೊಡವ ಭಾಷೆಯಲ್ಲೊಂದು ಗಾದೆ ಮಾತಿದೆ ‘‘ಆಪದ್ ಪೋಪದ್ ನಾಪದಾಂಡೊಳ್‍ಲ್’’ ಹೌದು, ಅದು ನಿಜವಾದ ಮಾತು. ನಲವತ್ತರ ಒಳಗೆ ಬದುಕೊಂದು ತಳಹದಿಗೆ ಬಂದರೆ ಒಳಿತು. ಈಗಿನ ಮಕ್ಕಳು ತೀರಾ ಎಳೆ ವಯಸ್ಸಿಗೆ ಶಾಲೆ ಸೇರಿಕೊಂಡು ವಿದ್ಯಾಭ್ಯಾಸ ಮುಗಿಸಿ ಬದುಕಿನ ಭಾರವನ್ನು ನಿರಾಯಸವಾಗಿ ಹೊತ್ತು ಬಿಡುತ್ತವೆ ಯಾದರೂ ಮದುವೆ ವಿಚಾರಕ್ಕೆ ಬಂದಾಗ ಆ ನಿರೀಕ್ಷೆ ಸುಳ್ಳಾಗಿ ಹೋಗುತ್ತಿದೆ. ಇತ್ತೀಚೆಗೆ ಪ್ರತಿ ಪೋಷಕರ ದುಗುಡ ಒಂದೇ. ನನ್ನ ಮಗಳು ಒಳ್ಳೆ ಕಂಪೆನಿಯಲ್ಲಿ ದುಡಿಯುತ್ತಿದ್ದಾಳೆ. ಒಳ್ಳೆಯ ಸಂಬಳ ಬರುತ್ತದೆ. ಆದರೆ ವಯಸ್ಸು ಮೂವತ್ತು ಕಳೆದು ಹೋಯಿತು. ಒಳ್ಳೆ ವರ ಸಿಕ್ಕಿಲ್ಲ. ನನ್ನ ಮಗ ಡಾಕ್ಟರ್, ಇಂಜಿನಿಯರ್ ಕೈ ತುಂಬಾ ಸಂಪಾದನೆ ಮಾಡುತ್ತಾನೆ. ವಯಸ್ಸು ಮೂವತ್ತೈದು ಕಳೆದು ಹೋಯಿತು. ಒಳ್ಳೆಯ ಹುಡುಗಿಯೇ ಸಿಗುತ್ತಿಲ್ಲ. ಇದು ಇತ್ತೀಚೆಗೆ ಎಲ್ಲರಲ್ಲೂ ಕೇಳಿ ಬರುತ್ತಿರುವ ಸಾಮಾನ್ಯ ಮಾತುಗಳು. ಎಲ್ಲಿ ಎಡವಟ್ಟಾಗುತ್ತಿದೆ ಎನ್ನುವದೇ ಯಕ್ಷ ಪ್ರಶ್ನೆ ಇಲ್ಲಿ ಮಕ್ಕಳ ತಪ್ಪೋ ? ಪೋಷಕರ ತಪ್ಪೋ ? ಇದರಲ್ಲಿ ಯಾರತ್ತ ಬೆರಳು ತೋರಿಸ ಬೇಕೋ ಅರ್ಥವೇ ಆಗದು. ಆದರೆ ನನ್ನ ಅನಿಸಿಕೆ ಪ್ರಕಾರ ಇದಕ್ಕೆಲ್ಲದಕ್ಕೂ ಈ ‘‘ಫೇಸ್ ಬುಕ್’’ ಎನ್ನುವ ಕಾರಣ. ಹಿಂದೆಲ್ಲಾ ಅಪ್ಪ ಅಮ್ಮ ನೋಡಿದ ಪ್ರಕಾರ ಹುಡುಗ-ಹುಡುಗಿಯನ್ನು ಮತ್ತೊಂದು ಮಾತಿಲ್ಲದೆ ಒಪ್ಪಿ ಮದುವೆಯಾಗುವದಿತ್ತು. ಎಲ್ಲವೂ ಒಳ್ಳೆಯ ರೀತಿಯಲ್ಲಿ ಸುಲಲಿತವಾಗಿ ನಡೆಯುತ್ತಿತ್ತು. ಹಿರಿಯರು ನೋಡಿದ ವಧು-ವರರನ್ನು ಅವರದೇ ಮನೆಗಳಿಗೆ ಹಿರಿಯರೊಟ್ಟಿಗೆ ಹೋಗಿ ಪದ್ಧತಿಯಂತೆ ನೋಡುವದಿತ್ತು. ಅಲ್ಲೊಂದು ಅರ್ಥವಿರುತ್ತಿತ್ತು, ಆನಂದವಿರುತ್ತಿತ್ತು, ಸಂಭ್ರಮವಿರುತ್ತಿತ್ತು. ಆ ರೀತಿ ನಡೆಯುವ ಮದುವೆಯಲ್ಲಿ ಒಂದು ಗಟ್ಟಿಯಾದ ಅನುಬಂಧವಿರುತ್ತಿತ್ತು. ಹಿರಿಯರು ನೋಡಿ ನಿಶ್ಚ್ಚಯಿಸಿದ ಮದುವೆ ಎಂದಾಗ ಸಂಸಾರದಲ್ಲಿ ಯಾವದೇ ತಪ್ಪುಗಳು ನಡೆದರೂ ಬೆಂಗಾವಲಾಗಿ ತೀರ್ಪು ನೀಡಲು ಹಿರಿಯರಿರುತ್ತಿದ್ದರು. ಆದರೆ, ಈಗ ಹಿಂದಿನಂತೆ ಯಾವದೂ ಉಳಿದಿಲ್ಲ. ಎಲ್ಲಾ ವಿಷಯದಲ್ಲೂ ಹಿರಿಯರ ನೆರವಿಲ್ಲದೆಯೇ ಅವರವರೇ ನಿರ್ಧಾರ ತೆಗೆದುಕೊಳ್ಳುವ ಮಟ್ಟಕ್ಕೆ ತಲಪಿದ್ದಾರೆ. ಯುವ ಜನತೆ ಮದುವೆ ವಿಚಾರದಲ್ಲಿ ಹಿರಿಯರು ಹುಡುಗ-ಹುಡುಗಿಯ ಬಗ್ಗೆ ತಿಳಿಸಿದರೆ ಮರುಕ್ಷಣದಲ್ಲಿ ಮುಂದಿನ ಎಲ್ಲಾ ಬೆಳವಣಿಗೆ ಫೇಸ್‍ಬುಕ್ ಮುಖಾಂತರ ನಡೆಯುತ್ತದೆ. ಹುಡುಗ-ಹುಡುಗಿ ಪರಸ್ಪರ ನೋಡುವದರಿಂದ ಹಿಡಿದು ತಲೆಯಿಂದ ಕಾಲಿನ ಬುಡದವರೆಗೂ ಶೋಧನೆ ನಡೆದು ಹೋಗುತ್ತದೆ. ಅಷ್ಟರಲ್ಲಾಗಲೇ ಆ ಪಾತ್ರದ ಬಗೆಗಿರುವ ಕುತೂಹಲ ಇನ್ನಿಲ್ಲದಂತೆ ಸತ್ತೇ ಹೋಗುತ್ತದೆ. ‘‘ಫೇಸ್‍ಬುಕ್’’ನಲ್ಲಿ ನೋಡುವ ಭಾವಚಿತ್ರಗಳು ಎದುರೆದುರೆ ಬಂದರಂತೂ ಇದು ಅದೇನಾ ಅನಿಸಿ ಬಿಡುತ್ತದೆ. ಹೀಗಾಗಿ ವಧೂ-ವರರ ಮನಸ್ಸಿನಲ್ಲಿ ಮೊಳಕೆಯೊಡೆಯುವ ಕಲ್ಪನೆ, ಕನಸುಗಳನ್ನು ಚಿಗುರಿನಲ್ಲೇ ಚಿವುಟಿದಂತಾಗುತ್ತದೆ. ಹೀಗಾಗಿ ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬರುವದು ನಿಧಾನವಾಗುತ್ತಿದೆ. ಎಲ್ಲವೂ ನಾವು ನಾವೇ ಮಾಡಿಕೊಳ್ಳುವ ಅನಾಹುತಗಳಷ್ಟೆ. ಈ ರೀತಿಯ ಜನಪ್ರಿಯ ಜಾಲ ತಾಣದ ಪ್ರಯೋಜನವನ್ನು ಬಳಸಿಕೊಳ್ಳುವದು ತಪ್ಪಿಲ್ಲವಾದರೂ ಕೆಲವೊಂದು ವಿಚಾರಗಳಲ್ಲಿ ಅದರ ಬಳಕೆ ಸಲ್ಲ. ಅನ್ನೋದು ನನ್ನ ಆಭಿಪ್ರಾಯ. ಇನ್ನಾದರೂ ಈ ಹಾಳು ‘‘ಫೇಸ್‍ಬುಕ್’’ ಹಾಳೆಗಳನ್ನು ಮುಚ್ಚಿಟ್ಟು ವಧು-ವರರನ್ನು ನೋಡುವ ಹಿಂದಿನ ಕಾಲದ ಪದ್ಧತಿಯನ್ನು ಅನುಸರಿಸಲಿ ‘ಮಕ್ಕಳ’ ಒಳಿತಿಗಾಗಿ ಅನ್ನೋದು ನಮ್ಮ ಹಿರಿಯರಲ್ಲಿ ನಮ್ಮ ಜನರಲ್ಲಿ ನನ್ನ ಮನದಾಳದ ಮನವಿ. ಮಕ್ಕಳ ದಾಂಪತ್ಯ ಜೀವನವು ಎಂದೆಂದೂ ಸುಖಕರವಾಗಿರಲೆಂದು ಹಾರೈಸೋಣ.

?ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕುಶಾಲನಗರ.