ಸೋಮವಾರಪೇಟೆ, ನ. 17: ಸ್ವಾತಂತ್ರ್ಯ ಲಭಿಸಿ 70 ವರ್ಷ ಸಮೀಪಿಸುತ್ತಿದ್ದರೂ ಸಹ ಸಾಮಾಜಿಕ ಅಸಮಾನತೆ ಜೀವಂತವಿರುವದು ದೇಶದ ದುರಂತ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ವಿಷಾಧಿಸಿದರು. ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಮ್ಮ ಕ್ರಾಂತಿಕಾರಿ ಕೀರ್ತನೆಗಳ ಮೂಲಕ 15ನೇ ಶತಮಾನದಲ್ಲೇ ಸಾಮಾಜಿಕ ಅಸಮಾನತೆಯ ವಿರುದ್ಧ ಸಮರ ಸಾರಿದ ದಾಸಶ್ರೇಷ್ಠ ಕನಕದಾಸರ ಕೀರ್ತನೆಗಳ ಸಾರ ಇಂದಿಗೂ ಪ್ರಸ್ತುತ ಎಂದು ಬಣ್ಣಿಸಿದರು.

ಇಂದಿಗೂ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಸಾಧ್ಯವಾಗಿಲ್ಲ. ಕೆಲವೇ ರಾಜಕಾರಣಿಗಳು ತಮ್ಮ ಮತ ಬ್ಯಾಂಕ್‍ಗಾಗಿ ಜಾತಿ ವ್ಯವಸ್ಥೆಯನ್ನು ಇನ್ನೂ ಜೀವಂತವಿರಿಸಿಕೊಂಡು ರಾಜಕೀಯ ಲಾಭಗಳಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅಭಿಮನ್ಯುಕುಮಾರ್, ದಾಸರ ತತ್ವ ಪದಗಳು, ಕೀರ್ತನೆಗಳನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಮಾತನಾಡಿ, ಕನಕದಾಸರು ಸಮಾಜದಲ್ಲಿದ್ದ ಅಸಮಾತೋಲನವನ್ನು ತೊಡೆದು ಹಾಕಲು ಹೋರಾಡಿದ ಮಹಾನ್ ದಾರ್ಶನಿಕರಾಗಿದ್ದಾರೆ ಎಂದರು.

ಕೊಡಗು ಜಿಲ್ಲಾ ಕುರುಬ ಸಮಾಜದ ಉಪಾಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಸದಸ್ಯ ಡಿ.ಎಸ್. ಗಣೇಶ್ ಮಾತನಾಡಿ, ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಾ ಸಮಾಜದ ಮುಖ್ಯವಾಹಿನಿಗೆ ಬಂದ ಕನಕದಾಸರ ಆದರ್ಶಗಳನ್ನು ಎಲ್ಲರೂ ಪಾಲಿಸುತ್ತಾ, ಅದನ್ನು ಮುಂದಿನ ಪೀಳಿಗೆಗೂ ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡಬೇಕೆಂದರು.

ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ, ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ, ತಹಶೀಲ್ದಾರ್ ಕೃಷ್ಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮೇಗೌಡ, ಬಿಸಿಎಂ ಇಲಾಖಾಧಿಕಾರಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.