ಚಿಕ್ಕಮಗಳೂರು, ಜ. 3: ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ (59) ಮಂಗಳವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ನಗರದ ಹೊರವಲಯದ ಸೆರಾಯ್ ರೆಸಾರ್ಟ್‍ನಲ್ಲಿ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಲೇಖಕಿ ಡಾ. ಗೀತಾ ಪ್ರಸಾದ್ ಮತ್ತು ಪುತ್ರ ಕೈಗಾರಿಕೋದ್ಯಮಿ ಗಣೇಶ್ ಪ್ರಸಾದ್ ಇದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಹಾಲಹಳ್ಳಿ ಗ್ರಾಮ ಅವರ ಹುಟ್ಟೂರು. ಮೈಸೂರಿನ ಕುವೆಂಪು ನಗರದಲ್ಲಿ ಸಚಿವರ ಕುಟುಂಬ ನೆಲೆಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಾಪ್ತರಾಗಿದ್ದ ಮಹದೇವ ಪ್ರಸಾದ್ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದ್ದ ಸಹಕಾರ ಸಾರಿಗೆ ಸಂಸ್ಥೆಯ ರಜತ ಮಹೋತ್ಸವದಲ್ಲಿ ಭಾಗವಹಿಸಲು ಸಚಿವರು ಸೋಮವಾರ ರಾತ್ರಿಯೇ ನಗರಕ್ಕೆ ಬಂದಿದ್ದರು. ಆಪ್ತ ಸ್ನೇಹಿತರೊಬ್ಬರ ಮನೆಯಲ್ಲಿ ರಾತ್ರಿ ಊಟ ಮಾಡಿಕೊಂಡು, ಮೂಕ್ತಿಹಳ್ಳಿ ಸಮೀಪದಲ್ಲಿರುವ ಉದ್ಯಮಿ ಸಿದ್ಧಾರ್ಥ ಹೆಗ್ಡೆ ಒಡೆತನದ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಸಚಿವರ ಜತೆಗೆ ಬಂದಿದ್ದ ಅವರ ಇಬ್ಬರು ಆಪ್ತ ಸ್ನೇಹಿತರಾದ ಮಾರ್ಕೆಟ್ ಫೆಡರೇಷನ್ ನಿರ್ದೇಶಕ ಹಾಗೂ ಸಿನಿಮಾ ನಿರ್ಮಾಪಕ ವೈ.ಎನ್. ಶಂಕರೇಗೌಡ ಮತ್ತು ಗುಂಡ್ಲುಪೇಟೆ ಪುರಸಭೆ ಮಾಜಿ ಅಧ್ಯಕ್ಷ ನಾಜೀಮ್ವುದ್ದೀನ್ ಇನ್ನೊಂದು ಕೊಠಡಿಯಲ್ಲಿ ತಂಗಿದ್ದರು. ಕಾರ್ಯಕ್ರಮಕ್ಕೆ ಹೊರಡುವ ಸಮಯ ಕಳೆದರೂ ಅವರು ಕೊಠಡಿಯಿಂದ ಹೊರ ಬರದಿದ್ದಾಗ ಅನುಮಾನಗೊಂಡು ಅವರ ಸ್ನೇಹಿತರು, ಬೆಳಿಗ್ಗೆ 9 ಗಂಟೆ ಸುಮಾರಿಗೆ ರೆಸಾರ್ಟ್ ಸಿಬ್ಬಂದಿಯಿಂದ ಬಾಗಿಲು ತೆರೆಸಿದ್ದಾರೆ. ಈ ಸಂದರ್ಭ ಹೆಚ್.ಎಸ್. ಮಹದೇವ ಪ್ರಸಾದ್ ಅವರು ಮೃತ ಪಟ್ಟಿರುವ ವಿಚಾರ ತಿಳಿದು ಬಂದಿದೆ.

ಸಂತಾಪ : ಅಕಾಲಿಕ ಮರಣಕ್ಕೆ ತುತ್ತಾದ ಕರ್ನಾಟಕ ರಾಜ್ಯ ಸಹಕಾರ ಸಚಿವ ಮಹದೇವ್ ಪ್ರಸಾದ್ ಅವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯಎಂ.ಪಿ. ಸುನಿಲ್ ಸುಬ್ರಮಣಿ ಸಂತಾಪ ಸೂಚಿಸಿದ್ದಾರೆ.

ಒಬ್ಬ ಸರಳ, ಸಜ್ಜನಿಕೆಯ, ಸೌಮ್ಯ ಸ್ವಭಾವರ ರಾಜಕಾರಣಿ ಎಂದೇ ಜನಮನದಲ್ಲಿ ಗುರುತಿಸಿಕೊಂಡಿದ್ದ ಮಹದೇವ್ ಪ್ರಸಾದ್ ಅವರು ತನ್ನೊಂದಿಗೆ ಆತ್ಮೀಯರಾಗಿದ್ದರು. ಇವರು ಸಂಗಮ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ಉದ್ಯೋಗ ಮೇಳಗಳಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲಾ ರಂಗದಲ್ಲೂ ಸಾಧಕರಾಗಿ ಹೆಸರು ಮಾಡಿ ತನ್ನದೇ ಛಾಪನ್ನು ಜನತೆಯ ಮನದಲ್ಲಿ ಮೂಡಿಸಿದ್ದರು. ಇವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

(ಮೊದಲ ಪುಟದಿಂದ) * ರಾಜ್ಯದ ಸಹಕಾರ ಸಚಿವ ಮಹದೇವ ಪ್ರಸಾದ್ ನಿಧನಕ್ಕೆ ಜಾತ್ಯತೀತ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸಂತಾಪ : ಸಚಿವ ಮಹದೇವಪ್ರಸಾದ್ ಅವರ ನಿಧನಕ್ಕೆ ಕಾಂಗ್ರೆಸ್ ಸೇವಾದಳದ ಜಿಲ್ಲಾ ಸಮಿತಿ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಸಚಿವ ಮಹದೇವ ಪ್ರಸಾದ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

* ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ಸಿನ ಪ್ರಮುಖರು ಮೈಸೂರಿನ ಕುವೆಂಪು ನಗರದಲ್ಲಿರುವ ಮೃತರ ಸ್ವಗೃಹಕ್ಕೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್, ಮಹಿಳಾ ಘಟಕದ ಅಧ್ಯಕ್ಷೆ ಕುಮುದಾ ಧರ್ಮಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ರಮಾನಾಥ್, ಪರಿಶಿಷ್ಟ ಜಾತಿ, ಪಂಗಡ ಘಟಕದ ಸುರೇಶ್ ಮೊದಲಾದವರು ಪಾಲ್ಗೊಂಡಿದ್ದರು.

* ಸಚಿವ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನಕ್ಕೆ ಜಿಲ್ಲಾ ವೀರಶೈವ ಮಹಾಸಭಾ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ.

ರಾಜ್ಯ ಸಹಕಾರ ಮತ್ತು ಸಕ್ಕರೆ ಖಾತೆ ಸಚಿವ ಮಹದೇವ ಪ್ರಸಾದ್‍ರವರ ನಿಧನ ತುಂಬಲಾರದ ನಷ್ಟವಾಗಿದ್ದು, ಸಭ್ಯ ಹಾಗೂ ಸೌಮ್ಯ ಸ್ವಭಾವದ ನಾಯಕರಾಗಿದ್ದ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದ ರಾಜ್ಯ ಒಬ್ಬ ಉತ್ತಮ ರಾಜಕಾರಣಿಯನ್ನು ಕಳೆದುಕೊಳ್ಳುವದರೊಂದಿಗೆ ವೀರಶೈವ ಸಮಾಜ ಓರ್ವ ಮುಖಂಡನನ್ನು ಕಳೆದುಕೊಂಡಂತಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಜಿಲ್ಲಾ ವೀರಶೈವ ಮಹಾಸಭಾದ ಕಾರ್ಯದರ್ಶಿ ಜಿ.ಎಂ. ಕಾಂತರಾಜ್, ಸೋಮವಾರಪೇಟೆ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಸಿ.ವಿ. ವಿಶ್ವನಾಥ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಸಂದೀಪ್ ತೀವ್ರ ಸಂತಾಪ ಸೂಚಿಸಿದ್ದಾರೆ.