ಸುಂಟಿಕೊಪ್ಪ, ಜು. 14: ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿ ಮಾಡುವ ಅವಕಾಶವಿದೆ ಅದರ ಸದುಪಯೋಗ ವನ್ನು ಗ್ರಾಮಸ್ಥರು ಪಡೆದುಕೊಳ್ಳ ಬೇಕೆಂದು ತಾಲೂಕಿನ ಉದ್ಯೋಗ ಖಾತ್ರಿಯೋಜನೆಯ ನೋಡಲ್ ಅಧಿಕಾರಿ ದಿನೇಶ್ ಹೇಳಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ 2016-17ನೇ ಸಾಲಿನ ಎಂಜಿಎನ್‍ಆರ್‍ಇಜಿಎ ಯೋಜನೆಯ ಮೊದಲ ಹಂತದ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮೊದಲಿಗೆ ಗ್ರಾಮ ಪಂಚಾಯಿತಿಯ ಕಳೆದ ಸಾಲಿನ ಉದ್ಯೋಗಖಾತ್ರಿ ಯೋಜನೆಯ ಕಾಮಗಾರಿಗಳನುಷ್ಠಾನ ಹಾಗೂ ಪ್ರಗತಿಗಳ ಬಗ್ಗೆ ವಿವರಣೆ ನೀಡಿ ಜಮಾ ಖರ್ಚಿನ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡುದಾರರಿಗೆ 224 ರೂ.ಗಳು ದಿನಗೂಲಿ ಲಭಿಸುತ್ತದೆ. ಕುರಿ ಕೋಳಿ ಹಂದಿ ಸಾಕಾಣೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 45,000 ಈ ಯೋಜನೆಯಡಿ ಲಭ್ಯವಿದೆ ಇತರಿಗೆ ರೂ 16,500 ಸಿಗಲಿದೆ ಸ್ಮಶಾನ ಅಭಿವೃದ್ಧಿ, ಸ್ಮಶಾನಕ್ಕೆ ರಸ್ತೆ, ಕುಡಿಯಲು ನೀರು ಒದಗಿಸಲು ಉದ್ಯೋಗ ಖಾತ್ರಿಯಡಿ ಕಾಮಗಾರಿ ನಡೆಸ ಬಹುದು. ಹೊಸ ಸ್ಮಶಾನ ಸರಕಾರಿ ಜಾಗದಲ್ಲೂ ನಿರ್ಮಿಸುವ ಅವಕಾಶ ಇದೆ ಸರಕಾರಿ ಜಾಗದಲ್ಲಿ ಕೆರೆ ದುರಸ್ತಿ ಕೆರೆಏರಿ ಹೂಳು ತೆಗೆಯಲು ಅನುದಾನ ಲಭ್ಯವಾಗಲಿದೆ ಪಾರ್ಕ್ ನಿರ್ಮಾಣಕ್ಕೂ ಅನುದಾನವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ 1 ಗ್ರಾಮದಲ್ಲಿ ರೈತರ ಒಕ್ಕಲು ಕಣ ನಿರ್ಮಿಸಲು 1 ಲಕ್ಷ 16,000ರೂ ಸಿಗಲಿದೆ.

ಸರಕಾರಿ ಜಾಗದಲ್ಲಿ ಕಬಡ್ಡಿ, ವಾಲಿಬಾಲ್ ಮೈದಾನ ನಿರ್ಮಿಸಲು ರೂ. 45,000 ಅನುದಾನ ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿವರಣೆ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ನೋಡಲ್ ಅಧಿಕಾರಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಹೇಮಂತ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯಣ್ಣ ಸದಸ್ಯರುಗಳಾದ ಬಿ.ಎಂ. ಸುರೇಶ್ (ಪುಟ್ಟ), ಸಿ. ಚಂದ್ರ, ರಜಾಕ್, ಕೆ.ಇ. ಕರೀಂ, ಈಶ್ವರ, ಎ. ಶ್ರೀಧರ್, ಗಿರಿಜಾ, ನಾಗರತ್ನ, ರತ್ನಾ ಜಯನ್, ರಹೆನಾ ಫೈರೋಜ್, ಕಾರ್ಯದರ್ಶಿ ಸಚಿನ್ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.