*ಗೋಣಿಕೊಪ್ಪಲು, ಜ. 7: ತಾಲೂಕು ವಾಣಿಜ್ಯ ತೆರಿಗೆ ಇಲಾಖೆ ಮತ್ತು ಜಾಫರ್ ಅಂಡ್ ಕಂ. ಸಂಯುಕ್ತ ಆಶ್ರಯದಲ್ಲಿ ಸರಕು ಮತ್ತು ಸೇವಾ ತೆರಿಗೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ವೀರಾಜಪೇಟೆ ಡಿ.ಎಸ್.ಎಸ್. ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಸುದರ್ಶನ್ ದೇವಪ್ರಸಾದ್ ಅಧ್ಯಕ್ಷತೆಯಲ್ಲಿ, ಮುಖ್ಯ ಭಾಷಣಾಕಾರರಾಗಿ ವಾಣಿಜ್ಯ ತೆರಿಗೆ ಇಲಾಖೆಯ ಅಸಿಸ್ಟೆಂಟ್ ಕಮೀಷನರ್ ರಮೇಶ್ ನರಸಯ್ಯ ಅವರು ‘ಒನ್ ನೇಷನ್ ಒನ್ ಟ್ಯಾಕ್ಸ್’ ಎಂಬ ಧ್ಯೇಯ ವಾಕ್ಯದೊಂದಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೇರಿ ತೆರಿಗೆ ಪದ್ಧತಿಯನ್ನು ಅನುಮೋದಿಸಿ ಮುಂದಿನ ಏಪ್ರಿಲ್ ತಿಂಗಳಿನಿಂದ ದೇಶದಾದ್ಯಂತ ಏಕರೂಪದ ತೆರಿಗೆ ಜಾರಿಗೆ ಬರುವ ಬಗ್ಗೆ ಮಾಹಿತಿ ನೀಡಿದರು.

ಪ್ರಸ್ತುತ ಹಲವು ಹಂತಗಳಲ್ಲಿ ನಾವುಗಳು ತೆರಿಗೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೀಡುತ್ತಿದ್ದು, ಇನ್ನು ಮುಂದೆ ಏಕರೂಪದ ತೆರಿಗೆ ಜಾರಿಗೆ ಬರುತ್ತದೆ. ತೆರಿಗೆಯ ಹೊರೆ ಜನಸಾಮಾನ್ಯರಿಗೆ ಕಡಿಮೆ ಆಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಅನೇಕ ಗ್ರಾಹಕರು ಮತ್ತು ತೆರಿಗೆ ಸಲಹಾಗಾರರು ತಮ್ಮ ಸಲಹೆ ಮತ್ತು ಸಂಶಯಗಳಿಗೆ ಉತ್ತರವನ್ನು ಪಡೆದರು.

ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು. ತೆರಿಗೆ ಸಲಹಾಗಾರ ಜಫನ್ ವಂದಿಸಿದರು.