ಮಡಿಕೇರಿ, ಸೆ. 10: ರಾಜ್ಯ ಸರಕಾರಿ ನೌಕರರ ಸಂಘದ ವೀರಾಜಪೇಟೆ ತಾಲೂಕು ಶಾಖೆ ವಿರುದ್ಧ ಪಿ.ಎ. ಮಂಜುನಾಥ್ ಎಂಬವರು ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಸ್ಪಷ್ಟಪಡಿಸಿರುವ ಶಾಖೆ ಅಧ್ಯಕ್ಷ ಸಿ.ಎಂ. ವಿಶ್ವನಾಥ್ ದುರುದ್ದೇಶಪೂರಿತ ಆರೋಪಗಳ ವಿರುದ್ಧ ಸಂಘ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ್ ಅವರ ಆರೋಪ ಗಳನ್ನು ಸಂಘ ತೀವ್ರವಾಗಿ ಖಂಡಿಸು ತ್ತದೆ ಎಂದರು. ವೀರಾಜಪೇಟೆ ಗ್ರಂಥಾಲಯ ನೌಕರರ ವಸತಿ ಗೃಹಕ್ಕಾಗಿ ಸುಮಾರು 6 ಸೆಂಟು ಜಾಗ ಮಂಜೂರಾಗಿದ್ದು, ಇದರಲ್ಲಿ 1.5 ಸೆಂಟ್‍ನಷ್ಟು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ವಿಚಾರವನ್ನು ಇಲಾಖಾ ಗಮನಕ್ಕೆ ತರಲಾಗಿದೆ. ಇದೇ ಕಾರಣಕ್ಕಾಗಿ ನೌಕರರ ಸಂಘದ ವೀರಾಜಪೇಟೆ ಶಾಖೆ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ನೌಕರರ ಭವನದ ಆವರಣದಲ್ಲಿ ಮಳೆಯ ಕಾರಣದಿಂದ ಗಿಡಗಂಟಿಗಳು ಬೆಳೆದಿದ್ದು, ಇದನ್ನು ಕಡಿದು ಸ್ವಚ್ಛ ವಾತಾವರಣ ಮೂಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಶೌಚಾಲಯವನ್ನು ಸಾರ್ವಜನಿಕರು ಬಳಸಿಕೊಳ್ಳುತ್ತಾರೆ ಎನ್ನುವ ಕಾರಣಕ್ಕಾಗಿ ಬೀಗ ಹಾಕಲಾಗಿದ್ದು, ಕಾರ್ಯಕ್ರಮಗಳು ನಡೆಯುವ ಸಂದರ್ಭ ತೆರೆಯ ಲಾಗುತ್ತಿದೆ. ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ನಿಧಿಯಿಂದ ಪಡೆದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದ್ದು, ರೂ. 2 ಲಕ್ಷಗಳಲ್ಲಿ ಅಡುಗೆ ಕೋಣೆಯನ್ನು ನಿರ್ಮಿಸಲಾಗಿದೆ. ಸಂಘದ ಉಪಾಧ್ಯಕ್ಷ ಮೊಗಪ್ಪ ಅವರು ಹಲವು ಬಾರಿ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದರೂ ನಿಷ್ಠಾವಂತ ಉದ್ಯೋಗಿಯಾಗಿರುವ ಕಾರಣ ಪ್ರಸ್ತುತ ಹುದ್ದೆಯಲ್ಲೇ ಉಳಿಸಿಕೊಳ್ಳ ಲಾಗಿದೆ. ಈ ಬೆಳವಣಿಗೆಯಲ್ಲಿ ಮೊಗಪ್ಪ ಅವರ ಲೋಪ ದೋಷಗಳಿಲ್ಲವೆಂದು ವಿಶ್ವನಾಥ್ ಸ್ಪಷ್ಟಪಡಿಸಿದರು. ಸಂಘ ಸಂಗ್ರಹಿಸುವ ತಲಾ ರೂ. 100 ವಂತಿಗೆಯಲ್ಲಿ ರಾಜ್ಯ ಸಂಘ ಹಾಗೂ ಜಿಲ್ಲಾ ಸಂಘಕ್ಕೆ ಹಂಚಿಕೆಯಾಗಿ ಉಳಿದ ಹಣದಲ್ಲಿ ತಾಲೂಕು ಸಂಘದ ಕಾರ್ಯ ಚಟುವಟಿಕೆ ನಡೆಯುತ್ತದೆ ಎಂದು ಅವರು ತಿಳಿಸಿದರು.