ಸುಂಟಿಕೊಪ್ಪ, ನ. 26: ಸುಂಟಿಕೊಪ್ಪ ನಾಡು ಕಛೇರಿಯಿಂದ ತಹಶೀಲ್ದಾರರ ಆದೇಶದಂತೆ ಸುಂಟಿಕೊಪ್ಪ ಹೋಬಳಿಯ ಕಂದಾಯ ವಲಯದಲ್ಲಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಕೊಂಡಿರುವ ಜಾಗವನ್ನು ಕಂದಾಯ ಇಲಾಖೆಯ ಸುರ್ಪದಿಗೆ ತೆಗೆದು ಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.
7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭೂತನಕಾಡು ಊರುಪರಂಬುವಿನಲ್ಲಿ ಟಾಟಾಕಾಫಿ ಎಸ್ಟೇಟ್‍ನವರು ನಲ್ಲೂರು ಎಸ್ಟೇಟ್ ವಿಭಾಗ ಎಂಬಲ್ಲಿ ಸರ್ವೆ ನಂಬರ್ 126 ರಲ್ಲಿ 6.78 ಎಕ್ರೆ ಹಾಗೂ ಸರ್ವೆ ನಂಬರ್ 124 ರಲ್ಲಿ 5.42 ಎಕ್ರೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ಕರಿಮೆಣಸು ಹಾಗೂ ಸಿಲ್ವರ್ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದರು. ಈ ಬಗ್ಗೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಹಾಗೂ ಕಂಬಿಬಾಣೆ ಗ್ರಾಮ ಪಂಚಾಯಿತಿಯವರು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿ ಟಾಟಾ ಎಸ್ಟೇಟ್‍ನವರು ಒತ್ತುವರಿ ಮಾಡಿರುವ ಪೈಸಾರಿ ಜಾಗವನ್ನು 12 ಎಕ್ರೆ 20 ಸೆಂಟನ್ನು ತೆರವುಗೊಳಿಸಿ ‘ಸೂರು’ ಇಲ್ಲದವರಿಗೆ ಮನೆ ನಿರ್ಮಿಸಿ ಕೊಡಲು ಅವಕಾಶ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದರು.
ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ತೆಗೆದುಕೊಳ್ಳಲು ಈ ಹಿಂದೆ ಸುಂಟಿಕೊಪ್ಪ ನಾಡು ಕಚೇರಿಯ ಪ್ರಭಾರ ಕಂದಾಯ ನಿರೀಕ್ಷಕ ನಾಗೇಶ್ ರಾವ್, ಗ್ರಾಮಲೆಕ್ಕಿಗರು, ಸಿಬ್ಬಂದಿಗಳೊಂದಿಗೆ ತೆರಳಿದಾಗ ಟಾಟಾ ತೋಟದ ವ್ಯವಸ್ಥಾಪಕ ಆಕ್ಷೇಪ ವ್ಯಕ್ತಪಡಿಸಿ ಅವರನ್ನು ವಾಪಾಸ್ಸು ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರರು ಮರು ಆದೇಶ ಹೊರಡಿಸಿದ್ದ ಮೇರೆಗೆ ಇಂದು ಪೊಲೀಸ್ ರಕ್ಷಣೆಯೊಂದಿಗೆ ನಲ್ಲೂರು ಭೂತನಕಾಡು ಊರುಪರಂಬುವಿಗೆ ತೆರಳಿ ಸರ್ವೆ ನಂ. 126 ರ 6.78 ಎಕ್ರೆ ಜಾಗ ಹಾಗೂ ಸರ್ವೆ ನಂ 124 ರ 5.42 ಎಕ್ರೆ ಜಾಗÀ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಈ ಜಾಗಕ್ಕೆ ಯಾರು ಅತಿಕ್ರಮಣ ಮಾಡುವಂತಿಲ್ಲ ಎಂದು ಫಲಕ ಅಳವಡಿಸಿ ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ತೆಗೆದುಕೊಂಡಿದೆ.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಚಂದ್ರ ಪ್ರಸಾದ್, ಗ್ರಾಮ ಸಹಾಯಕ ಶಿವಪ್ಪ, 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಸ್ತಾಫ (ಕುಂಞಕುಟ್ಟಿ), ಹೊಸಕೋಟೆ ಗ್ರಾ.ಪಂ. ಸದಸ್ಯರುಗಳಾದ ರಮೇಶ್, ಅಬ್ದುಲ್ಲಾ (ಅವಲಕುಟ್ಟಿ), ಜೋಸೆಫ್, ಲತೀಫ್, ತಾಲೂಕು ಪಂಚಾಯಿತಿ ಸದಸ್ಯ ಬಿಜು ಚಂಗಪ್ಪ, ಕಂಬಿಬಾಣೆ ಗ್ರಾ.ಪಂ.ಅಧ್ಯಕ್ಷ ಕೆ.ಬಿ.ಕೃಷ್ಣ, ಸದಸ್ಯರುಗಳಾದ ಆನಂದ, ಅಪ್ಸ, ಮಂಜುಳ, ಸುಂಟಿಕೊಪ್ಪ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ.ಗುಣಶೇಖರ್, ಪೇದೆ ಮುಸ್ತಾಫ ಗ್ರಾಮಸ್ಥರು ಇದ್ದರು.