ಮಡಿಕೇರಿ, ಜ. 13: ಅನಾರೋಗ್ಯದಿಂದ ಸಾವಿಗೀಡಾದ ಪಶ್ಚಿಮ ಬಂಗಳಾದಲ್ಲಿ ಗಡಿಭದ್ರತಾ ಪಡೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಹುದೇರಿ ಮೋಹನ್ ಅವರ ಅಂತ್ಯಕ್ರಿಯೆ ಹುಟ್ಟೂರು ಮದೆನಾಡುವಿನಲ್ಲಿಂದು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು. ಕಳೆದ ತಾ. 11 ರಂದು ನಿಧನರಾದ ಮೋಹನ್ ಅವರ ಮೃತದೇಹ ಇಂದು ಬೆಳಿಗ್ಗೆ ಮಡಿಕೇರಿಗೆ ಆಗಮಿಸಿದ್ದು, ಮಂಗಳೂರು ರಸ್ತೆಯ ನಿರೀಕ್ಷಣಾ ಮಂದಿರದಲ್ಲಿ ಇರಿಸಲಾಗಿತ್ತು. ಶಾಸಕ ಕೆ.ಜಿ. ಬೋಪಯ್ಯ, ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹಾಗೂ ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಬೆಪ್ಪುರನ ಮೇದಪ್ಪ ಮುಂತಾದವರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಯೋಧನ ಮೃತದೇಹ ಆಗಮಿಸಿದ ಸಂದರ್ಭ ಜಿಲ್ಲಾಡಳಿತ ಪರವಾಗಿ ಯಾರೂ ಕೂಡ ಬಾರದಿರುವದು ಖಂಡನೀಯ ಎಂದು ಅವರುಗಳು ಅಸಮಾಧಾನ ವ್ಯಕ್ತಪಡಿಸಿದರು. ಯೋಧನ ಕುಟುಂಬ ವರ್ಗದವರು ಕೂಡ ಬೇಸರ ವ್ಯಕ್ತಪಡಿಸಿದರು.
ನಂತರ ಹುಟ್ಟೂರು ಮದೆನಾಡಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ದುಃಖದ ಮಡುವಿನಲ್ಲಿದ್ದ ಯೋಧನ ಕುಟುಂಬಸ್ಥರು, ಪತ್ನಿ, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹಾಗೂ ಜಿಲ್ಲಾಡಳಿತದ ಪರವಾಗಿ ತಹಶೀಲ್ದಾರ್ ಕುಸುಮ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.